Sat. Dec 28th, 2024

ಹೊಸ ವರ್ಷದ ದಿನ ಯೋಗಾನರಸಿಂಹ ದೇವಾಲಯದಲ್ಲಿ 2 ಲಕ್ಷ ಲಡ್ಡು ವಿತರಣೆ

Share this with Friends

ಮೈಸೂರು: ನೂತನ ವರ್ಷ ಸ್ವಾಗತಿಸಲು ಮೈಸೂರಿನ ವಿಜಯನಗರದಲ್ಲಿರುವ ಶ್ರೀ ಯೋಗಾನರಸಿಂಹ ದೇವಾಲಯದಲ್ಲಿ ಭಕ್ತರಿಗೆ ತಿರುಪತಿ ಮಾದರಿಯ ಲಡ್ಡು ವಿತರಿಸಲಾಗುತ್ತದೆ.

ದೇವಾಲಯದ ಸಂಸ್ಥಾಪಕರಾದ ಶ್ರೀ ಭಾಷ್ಯಂ ಸ್ವಾಮೀಜಿ ಹಾಗೂ ಆಡಳಿತಾಧಿಕಾರಿ ಶ್ರೀನಿವಾಸ್ ಅವರು ಈ ಕುರಿತು ‌ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

2 ಕೆಜಿ ತೂಕದ 10 ಸಾವಿರ ಲಡ್ಡು, 150 ಗ್ರಾಂ ತೂಕದ 2 ಲಕ್ಷ ಲಡ್ಡು ತಯಾರಿ ನಡೆಯುತ್ತಿದೆ.

ಲಡ್ಡು ತಯಾರಿಕೆಗಾಗಿ 100 ಕ್ವಿಂಟಾಲ್ ಕಡ್ಲೆಹಿಟ್ಟು, 200 ಕ್ವಿಂಟಾಲ್ ಸಕ್ಕರೆ,10 ಸಾವಿರ ಲೀ.ಖಾದ್ಯ ತೈಲ,500 ಕೆಜಿ ಗೋಡಂಬಿ,500 ಕೆಜಿ ಒಣದ್ರಾಕ್ಷಿ,250 ಕೆಜಿ ಬಾದಾಮಿ,1000 ಕೆಜಿ ಡೈಮಂಡ್ ಸಕ್ಕರೆ,2000 ಕೆಜಿ ಬೂರಾ ಸಕ್ಕರೆ,50 ಕೆಜಿ ಪಿಸ್ತಾ,ಏಲಕ್ಕಿ,ಜಾಕಾಯಿ,ಪಚ್ಚಕರ್ಪೂರ,200 ಕೆಜಿ ಲವಂಗ ಬಳಸಲಾಗಿದೆ ಎಂದು ಸ್ವಾಮೀಜಿ ತಿಳಿಸಿದರು.

ಜನವರಿ 1 ರಂದು ಬೆಳಿಗ್ಗೆ 4 ಗಂಟೆಗೆ ವಿಶೇಷ ಪೂಜೆ ನಂತರ ಭಕ್ತರಿಗೆ ಲಡ್ಡು ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ, ಲೋಕಕಲ್ಯಾಣಾರ್ಥವಾಗಿ ಲಡ್ಡು ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸ್ವಾಮೀಜಿ ಅವರು ಹೇಳಿದರು.

1994ರಲ್ಲಿ ವರನಟ ಡಾ. ರಾಜಕುಮಾರ್ ಅವರು ದೇವಾಲಯಕ್ಕೆ ಆಗಮಿಸಿದ ಸಂದರ್ಭದಲ್ಲಿ ತಿರುಪತಿಗೆ ಜನತೆ ಹೋಗಿಬರುವುದು ಇತ್ತೀಚಿನ ದಿನಗಳಲ್ಲಿ ಕಷ್ಟ ಆಗುತ್ತಿದೆ. ಅದರಲ್ಲೂ ತಿರುಪತಿ ಲಡ್ಡು ಪ್ರಸಾದ ದೊರೆಯುವುದು ಇನ್ನೂ ಕಷ್ಟ ಹಾಗಾಗಿ ನಿಮ್ಮ ದೇವಾಲಯದಲ್ಲಿಯೇ ತಿರುಪತಿ ಮಾದರಿ ಲಡ್ಡು ಏಕೆ ಮಾಡಬಾರದು ಎಂದು ಸಲಹೆ ನೀಡಿದ್ದರು. ಹಾಗಾಗಿ ನಾವು ರಾಜಕುಮಾರ್ ಅವರು ಹೇಳಿದಂತೆ ತಿರುಪತಿ ಮಾದರಿಯಲ್ಲಿ ಲಡ್ಡು ಮಾಡಲು ಕ್ರಮ ಕೈಗೊಂಡೆವು ಎಂದು ಶ್ರೀಗಳು ತಿಳಿಸಿದರು.

ನೂತನ ವರ್ಷಾರಂಭದ ಪ್ರಯುಕ್ತ ಜನವರಿ 1ರಂದು ಬೆಳಗ್ಗೆ 4.00 ಗಂಟೆಯಿಂದ ಯೋಗಾನರಸಿಂಹಸ್ವಾಮಿಯವರಿಗೆ ವಿಶೇಷ ಅಲಂಕಾರ ಮತ್ತು ಶ್ರೀರಂಗಂಕ್ಷೇತ್ರ, ಮಧುರೈ ಕ್ಷೇತ್ರಗಳಿಂದ ತರಿಸಿರುವ ವಿಶೇಷ ತೋಮಾಲೆ ಮತ್ತು ಸ್ವರ್ಣಪುಷ್ಪದಿಂದ ಸಹಸ್ರನಾಮರ್ಚನೆ ಮತ್ತು ದೇವಾಲಯದ ಉತ್ಸವ ಮೂರ್ತಿಯಾದ ಶ್ರೀಮಲಯಪ್ಪನ್ ಸ್ವಾಮಿ, ಪದ್ಮಾವತಿ ಮತ್ತು ಮಹಾಲಕ್ಷ್ಮಿ ದೇವರಿಗೆ ದೇವಾಲಯದ ಆವರಣದಲ್ಲಿ ಏಕಾದಶ ಪ್ರಾಕಾರೋತ್ಸವ ಹಾಗೂ ಇಪ್ಪತ್ತು ಕ್ವಿಂಟಾಲ್ ಪುಳಿಯೋಗರೆ ನಿವೇದನೆ ಮಾಡಲಾಗುವುದು ಎಂದು ಸ್ವಾಮಿಗಳು ವಿವರಿಸಿದರು.

ನಂತರ ದೇವಾಲಯದ ಎನ್ ಶ್ರೀನಿವಾಸನ್‌ ಅವರು ಮಾತನಾಡಿ ಲೋಕ ಕಲ್ಯಾಣಾರ್ಥವಾಗಿ ನೂತನ ವರ್ಷಾರಂಭದ ಹಿನ್ನೆಲೆಯಲ್ಲಿ ವಿಶ್ವಶಾಂತಿ, ಭ್ರಾತೃತ್ವ ಮತ್ತು ಸರ್ವಧರ್ಮ ಸಮನ್ವಯತೆಗಾಗಿ ಹಾಗೂ ನಾಡಿನ ಎಲ್ಲಾ ಜನರ ಒಳಿತಿಗಾಗಿ ಪ್ರಾರ್ಥಿಸಿ ಈ ಲಡ್ಡು ಪ್ರಸಾದ ನಿವೇದನೆ ಮತ್ತು ಭಕ್ತಾದಿಗಳಿಗೆ ವಿನಿಯೋಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮೈಸೂರು ವಿವಿ ಕುಲಪತಿ ಲೋಕನಾಥ್, ಡಾ. ರಾಜಕುಮಾರ್ ಅವರ ಪುತ್ರಿ ಲಕ್ಷ್ಮಿ ಹಾಗೂ ಅಳಿಯ ಗೋವಿಂದರಾಜು ಮತ್ತಿತರರು ಉಪಸ್ಥಿತರಿದ್ದರು.


Share this with Friends

Related Post