Fri. Mar 6th, 2026

ಕೈಗಾರಿಕಾ ನಿವೇಶನಗಳಲ್ಲಿ ಭೂಮಿಯ ಬಳಕೆ ಶೇ.65ರಿಂದ ಶೇ.75ಕ್ಕೆ ಏರಿಕೆ:ಎಂಬಿ ಪಾಟೀಲ್

Share this with Friends

ಬೆಂಗಳೂರು:ಎಫ್ಎಆರ್ ನಿರ್ಬಂಧ ಸಡಿಲ ಮಾಡಿದ್ದರಿಂದ ಕೈಗಾರಿಕಾ ಚಟುವಟಿಕೆಗೆ ಆನೆಬಲ ಬಂದಂತಾಗಿದ್ದು,ಇದರಿಂದ ಔದ್ಯಮಿಕ ನಿವೇಶನಗಳ ಗರಿಷ್ಠ ಪ್ರಯೋಜನಕ್ಕೆ ದಾರಿಯಾಗಲಿದೆ. ಕೈಗಾರಿಕಾ ನಿವೇಶನಗಳಲ್ಲಿ ಭೂಮಿಯ ಬಳಕೆ ಶೇ.65ರಿಂದ ಶೇ.75ಕ್ಕೆ ಏರಿಕೆಯಾಗಲಿದೆ. ಉದ್ಯೋಗಿಗಳ ವಸತಿ ಸೌಕರ್ಯ, ಕೈಗಾರಿಕಾ ಟೌನ್ ಶಿಪ್ ಅಭಿವೃದ್ಧಿಗೂ ಅವಕಾಶ ಸಿಗಲಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಅವರು,ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಇಲಾಖೆಯು ಮಹತ್ತ್ವದ ಸುಧಾರಣಾ ಕ್ರಮದಲ್ಲಿ ಕೈಗಾರಿಕಾ ನಿವೇಶನಗಳಲ್ಲಿ ಮಹಡಿ ವಿಸ್ತೀರ್ಣ ಅನುಪಾತ (ಎಫ್ಎಆರ್= ಫ್ಲೋರ್ ಏರಿಯಾ ರೇಶಿಯೋ)ವನ್ನು ಕೈಗಾರಿಕಾ ಸ್ನೇಹಿಯಾಗಿ ಮಾರ್ಪಡಿಸಿದೆ. ಇದರಿಂದಾಗಿ ಕೈಗಾರಿಕಾ ನಿವೇಶನಗಳಲ್ಲಿ ಶೇಕಡ 65ರಷ್ಟು ಭೂಮಿಯನ್ನು ಮಾತ್ರ ಉದ್ಯಮದ ಕಟ್ಟಡ ನಿರ್ಮಾಣಕ್ಕೆ ಇದ್ದ ಅವಕಾಶ ಈಗ ಶೇಕಡ 75ಕ್ಕೆ ಹೆಚ್ಚಿದೆ. ಸರಕಾರದ ಈ ಕ್ರಮ ಚಾರಿತ್ರಿಕವಾಗಿದ್ದು, ಕೈಗಾರಿಕೆಗಳಿಗೋಸ್ಕರ ಹೆಚ್ಚು ಹೆಚ್ಚು ಜಮೀನು/ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವುದು ತಪ್ಪಲಿದೆ. ಇದರ ಫಲವಾಗಿ, ಉದ್ಯಮಿಗಳು ತಮ್ಮ ಕೈಗಾರಿಕೆಗಳನ್ನು ಸ್ಥಾಪಿಸಲು ಬೇಕಾದ ಭೂಮಿಗೆಂದೇ ವಿಪರೀತ ಹಣ ಹಾಕಬೇಕಾಗಿದ್ದ ಹೊರೆ ಇಳಿಯಲಿದೆ ಎಂದರು

ಹಳೆಯ ಎಫ್ಎಆರ್ ಪ್ರಮಾಣದಲ್ಲಿ ಒಂದು ಉದ್ಯಮಕ್ಕೆ 10 ಎಕರೆ ಜಾಗ ಕೊಟ್ಟರೆ ಅದರಲ್ಲಿ ಆರೂವರೆ ಎಕರೆಯನ್ನು ಮಾತ್ರ ಅವರು ಬಳಸಿಕೊಳ್ಳಬಹುದಿತ್ತು. ಉಳಿದ ಜಾಗವನ್ನು ಮೇಲ್ಮೈ ಪಾರ್ಕಿಂಗ್, ಕಟ್ಟಡದ ನಾಲ್ಕೂ ಬದಿಗಳಲ್ಲಿ ಸೆಟ್ ಬ್ಯಾಕ್ ಇತ್ಯಾದಿ ಉದ್ದೇಶಗಳಿಗೆಂದು ಸಾಕಷ್ಟು ಜಾಗ ಬಿಡಬೇಕಿತ್ತು. ಈಗ ಇದನ್ನು ಗಮನಾರ್ಹವಾಗಿ ತಗ್ಗಿಸಲಾಗಿದೆ ಅಲ್ಲದೆ ಇದುವರೆಗೂ 7 ಮೀ. ಎತ್ತರದ ಕೈಗಾರಿಕಾ ಕಟ್ಟಡಗಳಲ್ಲಿ ಸೆಟ್-ಬ್ಯಾಕ್ ಉದ್ದೇಶಕ್ಕೆ ಮುಂಭಾಗದಲ್ಲಿ 1.5 ಮೀ, ಹಿಂಭಾಗ, ಎಡ ಮತ್ತು ಬಲ ಬದಿಗಳಲ್ಲಿ ತಲಾ 1 ಮೀ. ಜಾಗ ಬಿಡಬೇಕಿತ್ತು. ಇನ್ನು ಮುಂದೆ ಮುಂಭಾಗದಲ್ಲಿ 1.5 ಮೀ. ಮತ್ತು ಯಾವುದಾದರೂ ಒಂದು ಪಾರ್ಶ್ವದಲ್ಲಿ (ಎಡ/ಬಲ) 1 ಮೀ. ಬಿಟ್ಟರೆ ಸಾಕು. ಇದೇ ರೀತಿಯಲ್ಲಿ 15 ಮೀ. ಎತ್ತರದ ಕಟ್ಟಡಗಳಿಗೆ ಮುಂಬದಿಯಲ್ಲಿ ಇದುವರೆಗೆ 3ರಿಂದ 10 ಮೀ. ಮತ್ತು ಉಳಿದ ಮೂರು ಕಡೆಗಳಲ್ಲಿ 1.5 ಮೀ.ನಿಂದ 8 ಮೀ.ವರೆಗೆ ಜಾಗವನ್ನು ಖಾಲಿ ಬಿಡಬೇಕಿತ್ತು. ಈಗ ಇದನ್ನು ಕ್ರಮವಾಗಿ 2ರಿಂದ 6 ಮೀ. ಮತ್ತು 1.5 ಮೀ.ನಿಂದ 6 ಮೀ.ಗೆ ಇಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಹಳೆಯ ನಿಯಮಾವಳಿಗಳಲ್ಲಿ ಉದ್ಯೋಗಿಗಳ ವಸತಿ ಸೌಕರ್ಯ ಮತ್ತು ಕೈಗಾರಿಕಾ ಟೌನ್ ಶಿಪ್ ಅಭಿವೃದ್ಧಿಯನ್ನು ನಿರ್ಬಂಧಿಸಲಾಗಿತ್ತು. ಪರಿಷ್ಕೃತ ಎಫ್.ಎ.ಆರ್. ಅಡಿಯಲ್ಲಿ ಸಾಮಾನ್ಯ ಕೈಗಾರಿಕಾ ಪ್ಲಾಟ್ ಗಳಲ್ಲಿ ಶೇ.15ರಷ್ಟು ಪ್ರದೇಶದಲ್ಲಿ ವಸತಿ ಸೌಕರ್ಯ ಕಲ್ಪಿಸಲು ಮತ್ತು ಕನಿಷ್ಠ 50 ಎಕರೆ ವಿಸ್ತೀರ್ಣದ ಕೈಗಾರಿಕಾ ಪ್ಲಾಟ್ ಗಳಲ್ಲಿ ಶೇ.10ರಷ್ಟು ಪ್ರದೇಶದಲ್ಲಿ ವಸತಿ ಮತ್ತು ವಾಣಿಜ್ಯ ಉದ್ದೇಶದ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ಕೊಡಲಾಗುವುದು. ಹಾಗೆಯೇ ವಾಹನಗಳ ನಿಲುಗಡೆಗೆ ಈಗ ಸಾಮಾನ್ಯ ಕೈಗಾರಿಕೆಗಳಿರುವ ನಿವೇಶನಗಳಲ್ಲಿ ಮತ್ತು ಡೇಟಾ ಸೆಂಟರುಗಳಲ್ಲಿ ಶೇ.2ರಷ್ಟು ಮತ್ತು ವೇರ್-ಹೌಸಿಂಗ್ ಹಾಗೂ ಲಾಜಿಸ್ಟಿಕ್ಸ್ ಉದ್ಯಮಗಳಲ್ಲಿ ಶೇ.3ರಷ್ಟು ಜಾಗವನ್ನು ಮಾತ್ರ ಮೀಸಲಿಟ್ಟರೆ ಸಾಕು ಎಂದು ಅವರು ವಿವರಿಸಿದ್ದಾರೆ.

ಕೈಗಾರಿಕೆಗಳಿಗೆ ಭೂಮಿ ಒದಗಿಸುವುದು ಸವಾಲಿನ ಕೆಲಸವಾಗಿದೆ. ಭೂಮಿಯ ಲಭ್ಯತೆ ಕಡಿಮೆ ಇರುವುದು ಇದಕ್ಕೆ ಮುಖ್ಯ ಕಾರಣವಾಗಿದೆ. ಈಗ ಎಫ್ಎಆರ್ ಅನ್ನು ಕೈಗಾರಿಕೆಗಳ ಹಿತವನ್ನು ಗಮನದಲ್ಲಿ ಇಟ್ಟುಕೊಂಡು ಬದಲಿಸಲಾಗಿದೆ. ಇದರಿಂದ ಕೈಗಾರಿಕಾ ಪ್ರದೇಶ ಪರಿಸರಗಳ ಲಂಬ ಬೆಳವಣಿಗೆಗೆ (ವರ್ಟಿಕಲ್ ಡೆವಲಪ್ಮೆಂಟ್) ಅವಕಾಶ ಸಿಗಲಿದೆ. ಜತೆಗೆ ಕಡಿಮೆ ಭೂಮಿಯಲ್ಲೇ ಉದ್ಯಮಗಳ ನಿರ್ಮಾಣ, ಆರ್ಥಿಕ ಪ್ರಗತಿ ಮತ್ತು ಗರಿಷ್ಠ ಉದ್ಯೋಗಸೃಷ್ಟಿಯ ಸಾಧನೆಗಳನ್ನು ಮಾಡಬಹುದು ಎಂದು ಅವರು ವಿವರಿಸಿದ್ದಾರೆ.

ಕೆಐಎಡಿಬಿ ರಾಜ್ಯದ ಹಲವೆಡೆಗಳಲ್ಲಿ ಸಾವಿರಾರು ಎಕರೆ ಪ್ರದೇಶಗಳಲ್ಲಿ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸಿದೆ. ಹೊಸ ನಿಯಮದ ಪ್ರಕಾರ, ಪ್ರೀಮಿಯಂ ದರ್ಜೆಯ ಕೈಗಾರಿಕಾ ನಿವೇಶನಗಳಲ್ಲಿ ಎಫ್ಎಆರ್ ಅನ್ನು 5.2ಕ್ಕೆ ಏರಿಸಲಾಗಿದೆ. ಈ ನಿಯಮಗಳು ಕೈಗಾರಿಕಾ ಪ್ರದೇಶಗಳು, ವಿಶೇಷ ಹೂಡಿಕೆ ವಲಯಗಳು (ಎಸ್ಇಆರ್), ಏಕಘಟಕ ಸಂಕೀರ್ಣಗಳು, ಕೈಗಾರಿಕಾ ಪ್ರದೇಶಗಳ ವ್ಯಾಪ್ತಿಯಲ್ಲಿನ ವಸತಿ ಮತ್ತು ವಾಣಿಜ್ಯ ಉದ್ದೇಶದ ಕಟ್ಟಡ ನಿರ್ಮಾಣ ಯೋಜನೆಗಳಿಗೆ ಅನ್ವಯಿಸಲಿವೆ ಎಂದು ಅವರು ತಿಳಿಸಿದ್ದಾರೆ.

ಕೈಗಾರಿಕಾ ಪ್ರದೇಶಗಳಲ್ಲಿರುವ ರಸ್ತೆಗಳ ಅಗಲವನ್ನು ಆಧರಿಸಿ ಎಫ್ಎಆರ್ ಪ್ರಮಾಣವನ್ನು ತೀರ್ಮಾನಿಸಲಾಗುತ್ತದೆ. 30 ಮೀ. ಅಗಲದ ರಸ್ತೆಯ ಆಚೀಚೆ ಇರುವ ಕೈಗಾರಿಕಾ ನಿವೇಶನಗಳಲ್ಲಿ ಈವರೆಗೂ 3.25ರಷ್ಟು ಎಫ್ಎಆರ್ ಗೆ ಮಾತ್ರ ಅವಕಾಶವಿತ್ತು. ಈಗ ಇದನ್ನು 5.2ಕ್ಕೆ ಹೆಚ್ಚಿಸಲಾಗಿದೆ. ಇದೇ ರೀತಿಯಲ್ಲಿ 24ರಿಂದ 30 ಮೀ. ಅಗಲದ ರಸ್ತೆ ಇರುವ ಕಡೆಗಳಲ್ಲಿ ಇದನ್ನು 4.8ಕ್ಕೆ, 18ರಿಂದ 24 ಮೀ. ಅಗಲದ ರಸ್ತೆ ಇರುವೆಡೆಗಳಲ್ಲಿ 4ಕ್ಕೆ ಮತ್ತು 12ರಿಂದ 18 ಮೀ. ಅಗಲದ ರಸ್ತೆ ಇರುವಂತಹ ಜಾಗಗಳಲ್ಲಿ 3.6ಕ್ಕೆ ಏರಿಸಲಾಗಿದೆ. 12 ಮೀ.ಗಿಂತ ಕಡಿಮೆ ಅಗಲವಿರುವ ರಸ್ತೆಗಳು ಇರುವಂತಹ ಕಡೆಗಳಲ್ಲಿ ಎಫ್ಎಆರ್ ಪ್ರಮಾಣವನ್ನು 2.45ರಿಂದ 2.8ರವರೆಗೆ ಪರಿಷ್ಕರಿಸಲಾಗಿದೆ ಎಂದು ಪಾಟೀಲ ನುಡಿದಿದ್ದಾರೆ.


Share this with Friends

Related Post