ಹಾಸನ,ಆ.10: ಬೆಂಗಳೂರು- ಹಾಸನ-ಮಂಗಳೂರು ಮಾರ್ಗದ ರೈಲ್ವೆ ಹಳಿ ಮೇಲೆ ಮತ್ತೆ ಭಾರಿ ಪ್ರಮಾಣದ ಮಣ್ಣು ಕುಸಿದ ಪರಿಣಾಮ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ರೈಲು ಮಾರ್ಗ ಸ್ಥಗಿತವಾಗಿದೆ.
ಸಕಲೇಶಪುರ ತಾಲೂಕಿನ ಬಾಳ್ಳುಪೇಟೆ ರೈಲು ನಿಲ್ದಾಣ ಬಳಿ ರೈಲ್ವೆ ಹಳಿ ಮೇಲೆಯೇ ಭಾರಿ ಪ್ರಮಾಣದ ಕಲ್ಲು ಬಂಡೆ ಮತ್ತು ಮಣ್ಣು ಕುಸಿದು ಬಿದ್ದಿದ್ದು ರೈಲು ಸ್ಥಗಿತಗೊಂಡ ಕಾರಣ ಸಾವಿರಾರು ಪ್ರಯಾಣಿಕರು ಮಾರ್ಗ ಮಧ್ಯೆ ಸಿಲುಕಿ ಪಡಿಪಾಟಲು ಪಟ್ಟರು.
ಮಧ್ಯರಾತ್ರಿಯಿಂದ ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳನ್ನು ಆಯಾ ನಿಲ್ದಾಣಗಳಲ್ಲಿ ನಿಲ್ಲಿಸಲಾಗಿದೆ.
ಹಾಸನ -ಮಂಗಳೂರು ಮಾರ್ಗದ ಕಿಲೋಮಿಟರ್ 42/ 43ರ ಮಧ್ಯೆ ಮರಗಳ ಸಮೇತ ಮಣ್ಣು ಕುಸಿತವಾಗಿದೆ ರೈಲ್ವೆ ಹಳಿ ಮೇಲೆ ಭಾರಿ ಪ್ರಮಾಣದಲ್ಲಿ ಮಣ್ಣಿನ ಗುಡ್ಡ,ಕಲ್ಲು ಬಂಡೆ ಬಿದ್ದಿದೆ.
ಬೆಂಗಳೂರು-ಹಾಸನದಿಂದ -ಮಂಗಳೂರಿಗೆ ಮಂಗಳೂರಿನಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ರೈಲುಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಇದೇ ಮಾರ್ಗದಲ್ಲಿ ಪ್ರಯಾಣ ಆರಂಭಿಸಿದ್ದ ಆರು ರೈಲುಗಳನ್ನು ಸಕಲೇಶಪುರ ಯಡಕುಮರಿ ಶಿರವಾಗಿಲು ಆಲೂರು ಸೇರಿ ಆರು ನಿಲ್ದಾಣಗಳಲ್ಲೇ ನಿಲ್ಲಿಸಲಾಗಿದೆ.
ರೈಲುಗಳ ಪ್ರಯಾಣ ನಡುದಾರಿಯಲ್ಲೆ ಸ್ಥಗಿತಗೊಂ ಡಿದ್ದರಿಂದ ರೈಲಿನಲ್ಲಿ ಕುಳಿತಿರುವ ಸಾವಿರಾರು ಪ್ರಯಾಣಿಕರು ಮಧ್ಯರಾತ್ರಿಯಿಂದ ಬಹಳ ತೊಂದರೆ ಪಟ್ಟರು.
ಪರ್ಯಾಯ ವಾಹನ ವ್ಯವಸ್ಥೆ ಮಾಡಿರುವ ರೈಲ್ವೆ ಇಲಾಖೆ ಅಧಿಕಾರಿಗಳು ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಉಪಹಾರದ ವ್ಯವಸ್ಥೆಯನ್ನೂ ಮಾಡಿಕೊಟ್ಟು ಮಾನವೀಯತೆ ಮೆರೆದರು.
ರೈಲ್ವೆ ಇಲಾಖೆ ಕಾರ್ಮಿಕರು ಮಣ್ಣು ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ, ಬೃಹತ್ ಪ್ರಮಾಣದ ಕಲ್ಲು ಬಂಡೆಗಳು ಹಾಗೂ ಮಣ್ಣಿನ ರಾಶಿ ಬಿದ್ದಿರುವುದರಿಂದ ತೆರವು ಕಾರ್ಯಚರಣೆ ವಿಳಂಬವಾಗಿದೆ.
ಆಗಸ್ಟ್ 11ರಂದು ಸಂಚರಿಸಬೇಕಾಗಿದ್ದ ಮಂಗಳೂರು ಯಶವಂತಪುರ ಎಕ್ಸ್ಪ್ರೆಸ್ ರೈಲನ್ನು ರದ್ದುಗೊಳಿಸಲಾಗಿದೆ.
ಚನ್ನರಾಯಪಟ್ಟಣ ಮತ್ತು ಮಂಗಳೂರು ಜಂಕ್ಷನ್ ನಡುವಿನ ಸಂಚಾರವನ್ನು ಮೊಟಕುಗೊಳಿಸಲಾಗಿದೆ, ಈ ಮಾರ್ಗದ ಮಣ್ಣು ಕುಸಿತ ತೆರವು ಆಗುವವರೆಗೆ ರೈಲುಗಳ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ ಎಂದು ರೈಲ್ವೆ ಇಲಾಖೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ್ ಕನಮಾಡಿ ತಿಳಿಸಿದ್ದಾರೆ.