Sun. Mar 15th, 2026

ವೈಚಾರಿಕ ಸಂಘರ್ಷಕ್ಕೆ ಲಂಕೇಶ್ ಬರಹಗಳೇ ಮದ್ದು: ಸಿಎಂ ಸಿದ್ದರಾಮಯ್ಯ

Share this with Friends

ಬೆಂಗಳೂರು: ಖ್ಯಾತ ಸಾಹಿತಿ ಹಾಗೂ ಪತ್ರಕರ್ತ ಪಿ. ಲಂಕೇಶ್ ಅವರ ಪ್ರಖ್ಯಾತ ಅಂಕಣ ಬರಹಗಳ ಸಂಕಲನ ‘ಟೀಕೆ-ಟಿಪ್ಪಣಿ’ಯ ಮೂರು ಭಾಗಗಳು ಹಾಗೂ ಅವರ ಆಯ್ದ ಕಥೆಗಳ ‘ಆಡಿಯೊ ಬುಕ್’ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಲೋಕಾರ್ಪಣೆ ಮಾಡಿದರು.

ಇಂದಿರಾ ಲಂಕೇಶ್ ಪ್ರಕಾಶನವು ನಗರದ ಕೊಂಡಜ್ಜಿ ಬಸಪ್ಪ ಸಭಾಭವನದಲ್ಲಿ ಆಯೋಜಿಸಿದ್ದ ಅರ್ಥಪೂರ್ಣ ಸಮಾರಂಭದಲ್ಲಿ ಈ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.

ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಲಂಕೇಶರ ಬರಹಗಳು ಸಮಾಜದ ಕಣ್ಣು ತೆರೆಸುವಂತಿವೆ. ಅವರು ಕೇವಲ ಸಾಹಿತಿಯಾಗಿರಲಿಲ್ಲ, ವ್ಯವಸ್ಥೆಯ ತಪ್ಪುಗಳನ್ನು ಎತ್ತಿ ತೋರಿಸುವ ನೈತಿಕ ಶಕ್ತಿಯಾಗಿದ್ದರು. ಅಧಿಕಾರದಲ್ಲಿ ಯಾರೇ ಇರಲಿ, ಜನಪರ ನಿಲುವುಗಳ ಪರವಾಗಿ ಅವರು ಧ್ವನಿ ಎತ್ತುತ್ತಿದ್ದರು ಎಂದರು.

ಸಿಎಂ ಸಿದ್ದರಾಮಯ್ಯ ಅವರು ಲಂಕೇಶರೊಂದಿಗಿನ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡರು. “ಲಂಕೇಶ್ ಅವರು ನನ್ನ ಆಪ್ತ ಸ್ನೇಹಿತರಾಗಿದ್ದರೂ, ನನ್ನ ರಾಜಕೀಯ ನಿರ್ಧಾರಗಳಲ್ಲಿ ತಪ್ಪಾದಾಗ ಪತ್ರಿಕೆಯಲ್ಲಿ ನಿರ್ದಾಕ್ಷಿಣ್ಯವಾಗಿ ಟೀಕಿಸುತ್ತಿದ್ದರು. ಆ ಟೀಕೆಗಳಲ್ಲಿ ದ್ವೇಷವಿರಲಿಲ್ಲ, ಬದಲಿಗೆ ಸಮಾಜದ ಬಗ್ಗೆ ಕಳಕಳಿಯಿತ್ತು” ಎಂದು ಸ್ಮರಿಸಿದರು.ಟೀಕೆ-ಟಿಪ್ಪಣಿ” ಕೇವಲ ಒಂದು ಅಂಕಣವಾಗಿರಲಿಲ್ಲ, ಅದು ಅಂದಿನ ಕಾಲದ ಭ್ರಷ್ಟಾಚಾರ ಮತ್ತು ಕೋಮುವಾದದ ವಿರುದ್ಧದ ಅಸ್ತ್ರವಾಗಿತ್ತು. ಇಂದಿನ ಪತ್ರಕರ್ತರು ಅಂತಹ ಬೆನ್ನುಮೂಳೆ ಇರುವ ಬರವಣಿಗೆಯನ್ನು ರೂಢಿಸಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.

ಲಂಕೇಶರ ಕಥೆಗಳನ್ನು ಆಧುನಿಕ ತಂತ್ರಜ್ಞಾನದ ಮೂಲಕ ‘ಆಡಿಯೊ ಬುಕ್’ ರೂಪದಲ್ಲಿ ತಂದಿರುವುದು ಯುವ ಪೀಳಿಗೆಗೆ ಸಾಹಿತ್ಯ ತಲುಪಿಸಲು ಸಹಕಾರಿ ಎಂದು ಶ್ಲಾಘಿಸಿದರು.

ಪ್ರಶ್ನಿಸುವ ಗುಣವೇ ಲಂಕೇಶ್: ನಟ ಪ್ರಕಾಶ್ ರೈ

ಸಮಾರಂಭದಲ್ಲಿ ಪಾಲ್ಗೊಂಡಿದ್ದ ಹಿರಿಯ ನಟ ಪ್ರಕಾಶ್ ರೈ ಮಾತನಾಡಿ, “ಲಂಕೇಶ್ ಎಂದರೆ ಅದು ಕೇವಲ ಹೆಸರಲ್ಲ, ಅದೊಂದು ವಿಚಾರಧಾರೆ. ಸಮಾಜದಲ್ಲಿ ನಡೆಯುವ ಅನ್ಯಾಯಗಳ ವಿರುದ್ಧ ಪ್ರಶ್ನೆ ಮಾಡುವ ಗುಣವನ್ನು ಅವರು ನಮಗೆ ಕಲಿಸಿಕೊಟ್ಟಿದ್ದಾರೆ. ಲಂಕೇಶರ ಸಾಹಿತ್ಯವು ಮನುಷ್ಯತ್ವ ಮತ್ತು ಸಾಮಾಜಿಕ ನ್ಯಾಯದ ಪರವಾಗಿ ನಿಲ್ಲಲು ನಮಗೆ ಪ್ರೇರಣೆ ನೀಡುತ್ತದೆ,” ಎಂದು ಅಭಿಪ್ರಾಯಪಟ್ಟರು.

 “ಲಂಕೇಶರ ಬರಹಗಳನ್ನು ಓದುವಾಗ ನಮಗೆ ಅವರ ಸಿಟ್ಟು ಕಾಣಿಸುತ್ತದೆ, ಆದರೆ ಆ ಸಿಟ್ಟಿನ ಹಿಂದೆ ಮನುಕುಲದ ಮೇಲಿರುವ ಅಪಾರ ಪ್ರೀತಿ ಇರುತ್ತಿತ್ತು. ಅವರ ಕಥೆಗಳಲ್ಲಿರುವ ಮಾನವೀಯತೆಯನ್ನೇ ನಾವು ಇಂದು ಆಡಿಯೊ ಬುಕ್ ಮೂಲಕ ಕೇಳುತ್ತಿದ್ದೇವೆ”. ಇಂದಿನ ಸಮಾಜದಲ್ಲಿ ಸತ್ಯ ಹೇಳುವವರನ್ನು ಮೌನಗೊಳಿಸುವ ಪ್ರಯತ್ನ ನಡೆಯುತ್ತಿದೆ. ಆದರೆ ಲಂಕೇಶರ ಧ್ವನಿ ಎಂದಿಗೂ ಮೌನವಾಗುವುದಿಲ್ಲ. ಅವರ ಪುಸ್ತಕಗಳನ್ನು ಓದುವ ಮೂಲಕ ನಾವು ಪ್ರಶ್ನೆ ಮಾಡುವ ಗುಣವನ್ನು ಜೀವಂತವಾಗಿರಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಸಾಹಿತಿ ನಟರಾಜ್ ಹುಳಿಯಾರ್, ಲೇಖಕಿ ಹಾಗೂ ವಿಮರ್ಶಕಿ ಎಂ.ಎಸ್. ಆಶಾದೇವಿ ಮತ್ತು ಖ್ಯಾತ ನಿರ್ದೇಶಕ ಟಿ.ಎನ್. ಸೀತಾರಾಮ್ ಅವರು ಲಂಕೇಶರ ಸಾಹಿತ್ಯಿಕ ಕೊಡುಗೆಗಳ ಬಗ್ಗೆ ಮಾತನಾಡಿದರು. ಕಾರ್ಯಕ್ರಮದ ನೇತೃತ್ವವನ್ನು ಇಂದಿರಾ ಲಂಕೇಶ್ ಹಾಗೂ ಕವಿತಾ ಲಂಕೇಶ್ ವಹಿಸಿದ್ದರು. ಸಾಹಿತ್ಯ ಮತ್ತು ಕಲಾ ಕ್ಷೇತ್ರದ ಹಲವಾರು ಗಣ್ಯರು ಹಾಗೂ ಲಂಕೇಶರ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು


Share this with Friends

Related Post