ಬೆಂಗಳೂರು,ಜು.20: ಪೂರ್ವ ಪ್ರಾಥಮಿಕ ಶಾಲೆ ಆರಂಭಿಸಲು ಮೊದಲ ಹಂತದಲ್ಲಿ ಬೆಂಗಳೂರಿನ 250 ಅಂಗನವಾಡಿಗಳನ್ನು ಗುರುತಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಉನ್ನತ ಮಟ್ಟದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ,ಮೊದಲ ಹಂತದಲ್ಲಿ ಯಶಸ್ವಿಯಾಗಲಿದೆ ಎಂಬ ವಿಶ್ವಾಸವಿದೆ ಹಂತ,ಹಂತವಾಗಿ ಎಲ್ಲ ಅಂಗನವಾಡಿ ಕೇಂದ್ರಗಳಲ್ಲೂ ಎಲ್ ಕೆಜಿ, ಯುಕೆಜಿ ಆರಂಭಿಸಲಾಗುವುದು ಎಂದು ಹೇಳಿದರು.
ಉನ್ನತ ಮಟ್ಟದ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ದೊರೆತಿದೆ,ಹಾಗಾಗಿ ಹಂತ-ಹಂತವಾಗಿ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿಯೂ ಎಲ್ ಕೆ ಜಿ,ಯುಕೆಜಿ ಗಳನ್ನು ಪ್ರಾರಂಭಿಸಲು ಆದೇಶಿಸಲಾಗಿದೆ.
ಬೆಂಗಳೂರು ಉತ್ತರ ಜಿಲ್ಲೆಯ 62, ಪೂರ್ವ ಜಿಲ್ಲೆಯ 20, ಕೇಂದ್ರ ಜಿಲ್ಲೆಯ 50, ಬೆಂಗಳೂರು ರಾಜ್ಯ (ಪ್ರೊಜೆಕ್ಟ್) 50, ಬೆಂಗಳೂರು ದಕ್ಷಿಣ 48, ಆನೆಕಲ್ ನಲ್ಲಿ 20 ಕೇಂದ್ರಗಳನ್ನು ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
4 ರಿಂದ 6 ವರ್ಷದ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಪಠ್ಯ, ಪುಸ್ತಕ, ಒಂದು
ಜೊತೆ ಸಮವಸ್ತ್ರ, ಒಂದು ಬ್ಯಾಗ್ ಮತ್ತು ಪೆನ್ಸಿಲ್ ಬಾಕ್ಸ್ ನೀಡಲು ನಿರ್ಧರಿಸಲಾಗಿದೆ. ಇದಕ್ಕೆ ಸಿಎಸ್ಆರ್ ಫಂಡ್ ಪಡೆಯಲು ಉದ್ದೇಶಿಸಲಾಗಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.