Mon. Dec 23rd, 2024

ಗುರಿಯೊಂದಿಗೆ ಪ್ರಯತ್ನ ನಿರಂತರವಾಗಿರಲಿ – ಡಾ.ಕೆ.ವಿ. ರಾಜೇಂದ್ರ ಸಲಹೆ

Share this with Friends

ಮೈಸೂರು,ಮಾ.25: ಏನೇ
ಸಾಧಿಸಬೇಕಾದರೂ ಮೊದಲು ಗುರಿಯನ್ನು ದೊಡ್ಡದಾಗಿರಿಸಿಕೊಂಡು, ಅದರ ಕಡೆಗೆ ನಿರಂತರ ಪ್ರಯತ್ನ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಸಲಹೆ ನೀಡಿದರು.

ಮೈಸೂರು ವಿಶ್ವವಿದ್ಯಾನಿಲಯ ವೃತ್ತಿ ಕೇಂದ್ರ, ನೇಗಿಲಯೋಗಿ ವಿದ್ಯಾವರ್ಧಕ ಸ್ಪರ್ಧಾ ಕೇಂದ್ರ ಹಾಗೂ ಸಮಾಜ ಕಲ್ಯಾಣ ಇಲಾಖೆ ಯುವರಾಜ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಕೆ.ಎ.ಎಸ್ ಹುದ್ದೆಯ ಆಕಾಂಕ್ಷಿಗಳಿಗೆ ಉಚಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧೆ ಸಾಮಾನ್ಯ, ಯುಪಿಎಸ್‌ಸಿ, ಕೆ.ಎ.ಎಸ್ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಯಾಗಲು ಸಿಕ್ಕ ಅವಕಾಶಗಳನ್ನು ಸದುಯೋಗಪಡಿಸಿಕೊಳ್ಳಬೇಕು.

ಈ ನಿಟ್ಟಿನಲ್ಲಿ ಪ್ರತಿದಿನ 5 ರಿಂದ 6 ಗಂಟೆಗಳ ಕಾಲ ನಿಯಮಿತವಾಗಿ ಓದುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಪ್ರತಿಯೊಬ್ಬ ಪರೀಕ್ಷಾರ್ಥಿಗು ಕಠಿಣ ಪರಿಶ್ರಮ, ತಾಳ್ಮೆ, ಸಮಯ ಪ್ರಜ್ಞೆ , ಏಕಾಗ್ರತೆ ಬಹಳ ಮುಖ್ಯ ಅದನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ನಾವು ಪ್ರತಿನಿತ್ಯವೂ ಹೊಸ ಹೊಸದಾಗಿ ನೋಡಿದ, ಕೇಳಿದ ವಿಷಯಗಳನ್ನು ವೈಜ್ಞಾನಿಕವಾಗಿ ಯೋಚಿಸಿ ಅದರ ಬಗ್ಗೆ ತಿಳಿದುಕೊಳ್ಳಬೇಕು, ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಮಾಡುವ ಬದಲು ಪರೀಕ್ಷೆಯನ್ನು ಎದುರಿಸುವಲ್ಲಿ ಆರಂಭ ದಿಂದಲೂ ಸತತ ಪ್ರಯತ್ನ ಮಾಡಬೇಕು. ಕಠಿಣ ಪರಿಶ್ರಮ, ನಿರಂತರ ಪ್ರಯತ್ನಕ್ಕೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ರಾಜೇಂದ್ರ ತಿಳಿಸಿದರು.

ಮೈಸೂರು ಮಹಾನಗರ ಪಾಲಿಕೆಯ ಆಯುಕ್ತ ಡಾ. ಎನ್. ಎನ್. ಮಧು ಅವರು ಮಾತನಾಡಿ ಸಮಾಜಕ್ಕೆ ಅಧಿಕಾರಿಗಳ ಕೊಡುಗೆ ಹೆಚ್ಚಾಗಿದ್ದು, ಸ್ಪರ್ಧಾರ್ಥಿಗಳು ಶ್ರಮಪಟ್ಟು ನಿರಂತರವಾಗಿ ಅಭ್ಯಾಸದಲ್ಲಿ ತೊಡಗಬೇಕು. ಕಠಿಣ ಪರಿಶ್ರಮ, ತಾಳ್ಮೆ ಪ್ರತಿ ಸ್ಪರ್ಧಾರ್ಥಿಗೂ ಅತ್ಯಂತ ಅವಶ್ಯಕವಾದುದು ಇವುಗಳನ್ನು ಸಾಧಿಸಿದ್ದೇ ಆದಲ್ಲಿ ಯಶಸ್ಸು ಸಾಧಿಸಬಹುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಬಿ.ರಂಗೇಗೌಡ, ಮೈಸೂರು ವಿವಿ ಪಿ.ಎಂ.ಇ ಬೋರ್ಡ್ ನ ನಿರ್ದೇಶಕ ಪ್ರೊ.ಎನ್. ನಾಗರಾಜ್, ಯು.ಸಿ. ಎಚ್ ಸಂಯೋಜಕರಾದ ಪ್ರೋ . ಹಂಸವೇಣಿ, ಸ್ಪರ್ಧಾ ಕೇಂದ್ರದ ಸಂಯೋಜಕ ಡಾ. ಸುರೇಶ್, ಯುವರಾಜ ಕಾಲೇಜಿನ ಪ್ರೊ. ದೇವಿಕಾ ಮತ್ತಿತರರು ಉಪಸ್ಥಿತರಿದ್ದರು.


Share this with Friends

Related Post