ಮೈಸೂರು, ಜು.30: ಮಾನವ ಕಳ್ಳ ಸಾಗಣಿಕೆ ಸಮಾಜದ ಗಂಭೀರ ಸಮಸ್ಯೆಯಾಗಿದ್ದು ಇದರ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಬಹಳ ಮುಖ್ಯ ಎಂದು ಪ್ರಧಾನ ಜಿಲ್ಲಾ- ಸತ್ರ ನ್ಯಾಯಾಧೀಶರಾದ ರವೀಂದ್ರ ಹೆಗ್ಡೆ ಹೇಳಿದರು.
ಮಾಧ್ಯಮಗಳು ಮಾನವ ಕಳ್ಳ ಸಾಗಾಣಿಕೆಯ ಬಗ್ಗೆ ಹೆಚ್ಚು ಪ್ರಚಾರ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು ಅವರು ಕರೆ ನೀಡಿದರು.
ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಸಖಿ ಸ್ಟ್ಯಾಂಪ್ ಸೆಂಟರ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಯೋಜಿಸಿದ್ದ ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮದಡಿ ವಿಶ್ವಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು, ಬಡವರಿಗೆ ಉದ್ಯೋಗ ನೀಡುವುದಾಗಿ ನಂಬಿಸಿ ಅವರನ್ನು ಬಾಲಕಾರ್ಮಿಕರನ್ನಾಗಿ ಹಾಗೂ ಇತ್ಯಾದಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡುತ್ತಿದ್ದಾರೆ. ಇಂತವರ ವಿರುದ್ಧ ಕೈಗೊಂಡ ಕ್ರಮಗಳನ್ನು ಮಾಧ್ಯಮಗಳು ಪ್ರಸಾರ ಮಾಡಬೇಕು. ಇದರಿಂದ ಜನರಲ್ಲಿ ಅರಿವು ಮೂಡುತ್ತದೆ ಅಲ್ಲದೇ ಮುಂದೆ ಎಚ್ಚರಿಕೆಯಿಂದ ಇರಲು ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಿದರು.
ಮಕ್ಕಳನ್ನು ಮಾನವ ಕಳ್ಳ ಸಾಗಾಣಿಕೆ ಮಾಡಿ ರಸ್ತೆ ಬದಿಗಳಲ್ಲಿ ಪೆನ್, ಸ್ಟಿಕರ್ಸ್ ಇತ್ಯಾದಿ ವಸ್ತುಗಳನ್ನು ಮಾರಾಟ ಮಾಡಲು, ಭಿಕ್ಷೆ ಬೇಡಲು ಬಿಡುತ್ತಾರೆ. ಸಾರ್ವಜನಿಕರು ಅದನ್ನು ಗುರುತಿಸದೆ ಕೊಂಡುಕೊಳ್ಳುವುದರ ಮೂಲಕ ಪರೋಕ್ಷವಾಗಿ ಕಳ್ಳ ಸಾಗಾಣಿಕೆಗೆ ಸಹಾಯ ಮಾಡಿದಂತಾಗುತ್ತದೆ. ಹಾಗಾಗಿ ಈ ರೀತಿ ಯಾವುದೇ ವ್ಯಕ್ತಿ ಅಥವಾ ಮಕ್ಕಳು ಕಂಡು ಬಂದರೆ ಅವರ ಹಿನ್ನೆಲೆ ತಿಳಿದು, ಅವರಿಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಮಾನವ ಕಳ್ಳ ಸಾಗಣಿಕೆ ಎಂಬ ದೊಡ್ಡ ಪಿಡುಗನ್ನು ನಾಶಮಾಡಲು ಕೇವಲ ಒಬ್ಬರಿಂದ ಸಾಧ್ಯವಿಲ್ಲ. ಹಾಗಾಗಿ ಪ್ರತಿಯೊಂದು ಇಲಾಖೆ, ಪ್ರತಿಯೊಂದು ಸಂಸ್ಥೆ ಹಾಗೂ ಸಾರ್ವಜನಿಕರು ಒಗ್ಗಟ್ಟಿನಿಂದ ಕೈ ಜೋಡಿಸಿದರೆ ಸಮಾಜದಲ್ಲಿ ಮಾನವ ಕಳ್ಳ ಸಾಗಾಣಿಕೆ ಸಮಸ್ಯೆಯನ್ನು ಇಲ್ಲದಂತೆ ಮಾಡಬಹುದು ಎಂದು ನ್ಯಾ.ರವೀಂದ್ರ ಹೆಗ್ಡೆ ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ. ಎಂ ಗಾಯತ್ರಿ ಮಾತನಾಡಿ, ಅಸಂಘಟಿತ ವಲಯಗಳು ಸಂಘಟಿತವಾಗಿ ಮಾಡುವ ಶೋಷಣೆಯೇ ಮಾನವ ಕಳ್ಳ ಸಾಗಾಣಿಕೆ. ಇದರ ಬಗ್ಗೆ ಪ್ರತಿಯೊಂದು ಇಲಾಖೆಯೂ ತಮ್ಮ ತಮ್ಮ ವ್ಯಾಪ್ತಿಗೆ ಬರುವ ಸಾರ್ವಜನಿಕರಿಗೆ ವಿಶೇಷ ಕಾರ್ಯಕ್ರಮಗಳನ್ನು ಕೈಗೊಂಡು ಜಾಗೃತಿಯನ್ನು ಮೂಡಿಸಬೇಕು ಎಂದು ತಿಳಿಸಿದರು.
ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಮಾತನಾಡಿ, ಬಡತನದಲ್ಲಿವವರು ನಿರುದ್ಯೋಗಿಗಳು ಕುರುಡು ನಂಬಿಕೆಯಿಂದ ಹಾಗೂ ಉದ್ಯೋಗದ ಆಸೆಯಿಂದ ಯರು,ಯಾರನ್ನೋ ನಂಬಿ, ಮಾನವ ಕಳ್ಳ ಸಾಗಾಣಿಕೆಗೆ ಬಲಿಯಾಗುತ್ತಿದ್ದಾರೆ,ಇದನ್ನು ಜನರು ಆದಷ್ಟು ಬೇಗ ಅರಿತು, ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮುಂದಾಗಬೇಕು. ಆಗ ಮಾತ್ರವೇ ಕಳ್ಳ ಸಾಗಾಣಿಕೆಗೆ ಅಂತ್ಯ ಹಾಡಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತ ರೆಡ್ಡಿ ಅವರು ಅಧಿಕಾರಿಗಳಿಗೆ ಮಾನವ ಕಳ್ಳ ಸಾಗಣಿಕೆ ಕುರಿತಂತೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿನೇಶ್ ಬಿ.ಜಿ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಪಿ. ಸಿ ಕುಮಾರಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಂಜುನಾಥ್ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಯೋಗೇಶ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.