Fri. Mar 6th, 2026

ನರೇಗಾ ಬಚಾವ್ ಆಂದೋಲನ ಜನಾಂದೋಲನವಾಗಲಿ: ಸಿ.ಎಂ ಕರೆ

Share this with Friends

ಬೆಂಗಳೂರು:ನರೇಗಾ ಬಚಾವ್ ಆಂದೋಲನ ಜನಾಂದೋಲನವಾಗಬೇಕು, ಉತ್ತರ ಭಾರತದಲ್ಲಿ ಕಾಯ್ದೆಗಳ ಬದಲಾವಣೆಗೆ ರೈತರು ಹೋರಾಡಿದಂತೆಯೇ ಇಲ್ಲಿಯೂ ಹೋರಾಟ ಮಾಡಬೇಕು,ನರೇಗಾ ಕಾಯ್ದೆ ಪುನ:ಸ್ಥಾಪಸಿ  ವಿಬಿಜಿ ರಾಮ್ ಜಿ ಕಾಯ್ದೆ  ರದ್ದಾಗುವವರೆಗೆ  ಹೋರಾಟ ನಡೆಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

ಕೆಪಿಸಿಸಿ ವತಿಯಿಂದ ಗಾಯತ್ರಿ ವಿಹಾರದಲ್ಲಿ ಆಯೋಜಿಸಲಾಗಿದ್ದ ಮಹಾತ್ಮಾ ಗಾಂಧಿ ಉದ್ಯೋಗ  ಖಾತ್ರಿ ಯೋಜನೆ ಬಚಾವ್ ಸಂಗ್ರಾಮ ಪೂರ್ವ ಸಿದ್ಧತಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ಇದು ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಆಗುವ ಆಂದೋಲನ. ಈಗ ಕೇಂದ್ರ ಸರ್ಕಾರ ಅಧಿಸೂಚನೆ ಮೂಲಕ ಇಂಥ ಕಡೆ ಕೆಲಸ ಎಂದು ನಿಗದಿ ಮಾಡುತ್ತದೆ. ಅಲ್ಲಿ ಕೆಲಸ ಮಾಡಬೇಕು. ಈಗ ರಾಜ್ಯಗಳು 40% ವೆಚ್ಚವನ್ನು ಭರಿಸಬೇಕಿದೆ. 2500 ಕೋಟಿ ರೂಪಾಯಿಯನ್ನು ರಾಜ್ಯ ಸರ್ಕಾರ ಕೊಡಬೇಕಾಗುತ್ತದೆ. ಅದಕ್ಕಾಗಿಯೇ ನರೇಗಾ ಬಚಾವ್ ಆಂದೋಲನವನ್ನು ರೂಪಿಸಿದೆ. ಇದು ಜನಾಂದೋಲನವಾಗಿ ಪರಿವರ್ತನೆ ಆಗಬೇಕು ಎಂದರು.

ವಿಬಿಜಿ ರಾಮ್ ಜಿ ಮೂಲಕ ಮತ್ತೊಮ್ಮೆ ಗಾಂಧೀಜಿ ಕೊಲೆ:

ಗ್ರಾಮೀಣ ಪ್ರದೇಶದಲ್ಲಿ 365 ದಿನಗಳ ಕಾಲ ಕೆಲಸ ಕೇಳಬಹುದಾಗಿತ್ತು. ಕಾರ್ಮಿಕರು ಅವರ ಊರಿನಲ್ಲಿ, ಅವರ ಜಮೀನಿನಲ್ಲಿಯೇ ಕೆಲಸ  ಮಾಡಬಹುದಾಗಿತ್ತು. ಇದನ್ನು ಬದಲಾಯಿಸಿ ಮೋದಿ ಸರ್ಕಾರ  ವಿಬಿಜಿ ರಾಮ್ ಜಿ ಕಾಯ್ದೆ ಜಾರಿಗೆ ತಂದಿದೆ. ದಶರಥ ರಾಮ, ಸೀತಾ ರಾಮ ಅಥವಾ ಕೌಶಲ್ಯ ರಾಮನಲ್ಲ. ಮಹಾತ್ಮಾ ಗಾಂಧಿ ಕೊಂದ ನಾಥೂರಾಮ ಇದು. ಗಾಂಧಿಯವರನ್ನು ಮೊತ್ತೊಮ್ಮೆ ಕೊಲ್ಲುತ್ತಿದ್ದಾರೆ.ಕಾಯ್ದೆಯಡಿ  ಕೆಲಸ ಕೊಡಲಿಲ್ಲ ಎಂದು ನ್ಯಾಯಾಲಯಕ್ಕೆ ಕೂಡ ಹೋಗಬಹುದಿತ್ತು ಎಂದರು.

ಕಳೆದ ತಿಂಗಳು ಎಐಸಿಸಿ ಕಾರ್ಯಕಾರಿ ಸಮಿತಿ ಸಭೆ ನಡೆದಿದೆ. ನರೇಗಾ ರದ್ದು ಮಾಡಿರುವುದನ್ನು ಪಕ್ಷ ಬಹಳ ಗಂಭೀರವಾಗಿ ಪರಿಗಣಿಸಿದೆ. ಕೇಂದ್ರ ಸರ್ಕಾರ ನರೇಗಾ ರದ್ದು ಮಾಡಿ ವಿಬಿ ಜಿ ರಾಮ್ ಜಿ ಎಂಬ ಹೊಸ  ಕಾಯ್ದೆಯನ್ನು  ರೂಪಿಸಿದೆ. ಮಹಾತ್ಮ ಗಾಂಧಿ ಹೆಸರು ಎಂದರೆ ಅವರಿಗೆ ಅಲರ್ಜಿ, ಯಾವ ಕಾರಣಕ್ಕೂ ಇದಕ್ಕೆ ಕಾಂಗ್ರೆಸ್ ಅವಕಾಶ ನೀಡಲ್ಲ,ನರೇಗಾ ಕಾಯ್ದೆ ಪುನ:ಸ್ಥಾಪನೆ ಆಗಿ  ವಿಬಿಜಿ ರಾಮ್ ಜಿ ಕಾಯ್ದೆ  ರದ್ದಾಗುವವರೆಗೆ ನಮ್ಮ ಹೋರಾಟವನ್ನು ಮುಂದುವರಿಸಬೇಕು ಎಂದರು.


Share this with Friends

Related Post