Mon. Dec 23rd, 2024

ಮೇಕೆದಾಟು ಯೋಜನೆ ಕಾರ್ಯಗತಕ್ಕೆ ಪ್ರಧಾನಿ ಮಧ್ಯಸ್ಥಿಕೆ ವಹಿಸಲಿ:ದೇವೇಗೌಡರ ಮನವಿ

Share this with Friends

ಬೆಂಗಳೂರು,ಮಾ.24: ರಾಜ್ಯಕ್ಕೆ ಅತ್ಯಗತ್ಯವಾಗಿ ಬೇಕಿರುವ ಮೇಕೆದಾಟು ಕುಡಿಯುವ ನೀರಿನ ಯೋಜನೆಯನ್ನು ಪ್ರಣಾಳಿಕೆಯಲ್ಲಿಯೇ ವಿರೋಧಿಸಿರುವ ಡಿಎಂಕೆ ಪಕ್ಷದ ನಡೆಯನ್ನು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡರು ತೀವ್ರವಾಗಿ ಖಂಡಿಸಿದ್ದಾರೆ.

ಜೆ.ಪಿ.ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಗೌಡರು,ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳು ಮೇಕೆದಾಟು ಯೋಜನೆಯನ್ನು ಬೆಂಬಲಿಸಿ ಅದನ್ನು ಕಾರ್ಯಗತಗೊಳಿಸುವ ದೃಢ ನಿರ್ಧಾರವನ್ನು ಇದೇ ಚುನಾವಣೆಯ ಪ್ರಣಾಳಿಕೆಯಲ್ಲಿ ಪ್ರಕಟಿಸಲಿ ಎಂದು ಸಲಹೆ ನೀಡಿದರು.

ತಮಿಳುನಾಡಿನ ಮುಖ್ಯಮಂತ್ರಿ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಮೇಕೆದಾಟು ವಿರೋಧಿ ಅಂಶವನ್ನು ಸೇರಿಸುವುದನ್ನು ನಮ್ಮ ಪಕ್ಷ ಖಂಡಿಸುತ್ತದೆ. ನಾವು ಕೂಡ ಜೆಡಿಎಸ್ ಪಕ್ಷದ ಪ್ರಣಾಳಿಕೆಯಲ್ಲಿ ಮೇಕೆದಾಟು ಬೆಂಬಲಿಸಿ ಆ ಕುಡಿಯುವ ನೀರಿನ ಯೋಜನೆಯನ್ನು ಜಾರಿ ಮಾಡುತ್ತೇವೆ ಎಂದು ಜನರಿಗೆ ತಿಳಿಸುತ್ತೇವೆ ಎಂದು ತಿಳಿಸಿದರು.

ಇಂತಹ ಬೆದರಿಕೆಗಳಿಗೆ ಯಾವುದೇ ರೀತಿಯ ಭಯ ಪಡಬೇಕಾಗಿಲ್ಲ. ಚುನಾವಣೆ ಮುಗಿದ ಮೇಲೆ ಮೇಕೆದಾಟು ಅಣೆಕಟ್ಟು ಕಟ್ಟಲು ನಾನೊಬ್ಬನೇ ಅಲ್ಲ, ರಾಜ್ಯ ಸರಕಾರ, ಮುಖ್ಯಮಂತ್ರಿಗಳು, ಬಿಜೆಪಿ ನಾಯಕರಾದ ಯಡಿಯೂರಪ್ಪ ಸಮೇತ ಹೋರಾಟ ಮಾಡೋಣ ಎಂದು ದೇವೇಗೌಡರು ಕರೆ ನೀಡಿದರು.

ಇದಕ್ಕೂ ಮೊದಲು ಮೇಕೆದಾಟು ಕಟ್ಟಲು ಮ್ಯಾನಿಫೆಸ್ಟೋದಲ್ಲಿ ಹಾಕೋಣ ಹಾಗೂ ಆ ನಿಟ್ಟಿನಲ್ಲಿ ಸಮಸ್ತ ಕನ್ನಡಿಗರಿಗೆ ಭರವಸೆ ನೀಡೋಣ. ಡಿಎಂಕೆ ಮಿತ್ರಪಕ್ಷವಾದ ಕಾಂಗ್ರೆಸ್ ಕೂಡ ಮೇಕೆದಾಟು ಯೋಜನೆ ಬೆಂಬಲಿಸಿ ಪ್ರಣಾಳಿಕೆಯಲ್ಲಿ ಜನತೆಗೆ ಭರವಸೆ ನೀಡಲಿ ಎಂದು ಗೌಡರು ಆಗ್ರಹಿಸಿದರು.

ತಮಿಳುನಾಡು ಪರ ವಕೀಲ ಶೇಖರ್ ನಫಾರ್ಡ್ ಅವರು ನ್ಯಾಯಾಲಯದಲ್ಲಿ ವಾದ ಮಂಡಿಸುವಾಗ ಮೇಕೆದಾಟು ಅಣೆಕಟ್ಟು ಕಟ್ಟಲಿ, ನಮ್ಮದೇನೂ ಅಭ್ಯಂತರ ಇಲ್ಲ ಎಂದು ಹೇಳಿದ್ದಾರೆ. ಅದರಿಂದ ನಾನು ರಾಜ್ಯ ಸರಕಾರಕ್ಕೆ ಮನವಿ ಮಾಡುತ್ತೇನೆ. ಡಿಎಂಕೆ ಅವರು ಪ್ರಣಾಳಿಕೆಯಲ್ಲಿ ಮೇಕೆದಾಟು ವಿರೋಧಿ ನಿಲುವು ಪ್ರಕಟಿಸದಂತೆ, ಇವರು ಕೂಡ ಪ್ರಣಾಳಿಕೆಯಲ್ಲಿ ಮೇಕೆದಾಟು ಪರವಾಗಿ ನಿಲುವು ಪ್ರಕಟಿಸಲಿ ಎಂದು ಹೇಳಿದರು.

ಸಿದ್ದರಾಮಯ್ಯ ಅವರು ತಮ್ಮ ಬಜೆಟ್ ನಲ್ಲಿಯೇ ಮೇಕೆದಾಟು ಯೋಜನೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಬಿಜೆಪಿ ಕೂಡ ಪ್ರಣಾಳಿಕೆಯಲ್ಲಿ ಹಾಕಲಿ. ನಾವು ಮೂರು ಪಕ್ಷಗಳು ಒಟ್ಟುಗೂಡಿಯೇ ಹೋರಾಡಬೇಕು. ದೇವೇಗೌಡರು ಒಬ್ಬರು ಮಾತ್ರ ವೈಯಕ್ತಿಕವಾಗಿ ಹೆಸರು ತಗೋಬೇಕಿಲ್ಲ ಎಂದರು.

ಇದು ಕಾಂಗ್ರೆಸ್, ಬಿಜೆಪಿ, ಡಿಎಂಕೆ ಅಥವಾ ಯಾವ ಪಕ್ಷದ ಯೋಜನೆ ಅಲ್ಲ, ಜನಪರವಾದ ಯೋಜನೆ. ಕುಡಿಯುವ ನೀರಿಗಾಗಿ ಜನ ಸಮಸ್ಯೆಗೆ ಒಳಗಾಗಿದ್ದಾರೆ. ಕಾವೇರಿ ಕೊಳ್ಳದ ಒಂಬತ್ತು ಜಿಲ್ಲೆಗಳಲ್ಲಿ ಜಲ ಸಂಕಷ್ಟ ಎದುರಾಗಿದೆ. ನಾನು ಕೈ ಮುಗಿದು ಎಲ್ಲರಿಗೂ ಮನವಿ‌ ಮಾಡುತ್ತೇನೆ. ಮೇಕೆದಾಟು ಯೋಜನೆಯಿಂದ ಐದು ಸಾವಿರ ಎಕರೆ ಮುಳುಗಡೆ ಆಗಲ್ಲ. ಈ ಅಂಶವನ್ನು ಪರಿಸರ ನಿಪುಣರು ಅರ್ಥ ಮಾಡಿಕೊಳ್ಳಬೇಕು ಎಂದು ಮಾಜಿ ಪ್ರಧಾನಿಗಳು ಹೇಳಿದರು.

ಅಧಿಕಾರಿಗಳು, ನೀರಾವರಿ ತಜ್ಞರು ಮೇಕೆದಾಟು ಯೋಜನೆಯಿಂದ 30 ಟಿಎಂಸಿ ನೀರು ಬಳಕೆ ಮಾಡಿಕೊಳ್ಳಬಹುದು ಎಂದು ಹೇಳಿದ್ದಾರೆ. ಈ ಯೋಜನೆಯ ಬಗ್ಗೆ 2018ರಲ್ಲಿಯೆ ಕೇಂದ್ರ ಸರ್ಕಾರ ಈ ಯೋಜನೆಯ ಕಾರ್ಯ ಸಾಧ್ಯತೆಯ ವರದಿಯನ್ನು ಕೇಂದ್ರೀಯ ಜಲ ಆಯೋಗಕ್ಕೆ ಸಲ್ಲಿಸಿತ್ತು. ಈ ವರದಿಯನ್ನು ಒಪ್ಪಿದ ನಂತರ ಸಮಗ್ರ ಯೋಜನಾ ವರದಿ ಸಲ್ಲಿಸುವಂತೆ ರಾಜ್ಯಕ್ಕೆ ಸೂಚಿಸಿತ್ತು. ಅದರಂತೆ 2019ರಲ್ಲಿ ರಾಜ್ಯ ಸರ್ಕಾರ DPR ಸಲ್ಲಿಸಿದೆ. ಇದಕ್ಕೆ ಪ್ರಧಾನಮಂತ್ರಿಗಳು ಅನುಮತಿ ಕೊಡಿಸಬೇಕು ಹಾಗೂ ಈ ಮೇಕೆದಾಟು ಯೋಜನೆ ವಿಷಯದಲ್ಲಿ ಪ್ರಧಾನಮಂತ್ರಿಗಳು ಮಧ್ಯಸ್ಥಿಕೆ ವಹಿಸಬೇಕು ಎಂದು ಹೆಚ್.ಡಿ ದೇವೇಗೌಡರು ಮನವಿ ಮಾಡಿದರು.

ಜೆಡಿಎಸ್ ರಾಜ್ಯ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ, ವಿಧಾನ ಪರಿಷತ್ ಸದಸ್ಯ ಭೋಜೇಗೌಡ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ, ಪಕ್ಷದ ಕಾನೂನು ಘಟಕದ ಅಧ್ಯಕ್ಷ ಎ. ಪಿ ರಂಗನಾಥ್, ಡಾ.ಸುಧಾಕರ್ ಶೆಟ್ಟಿ ಉಪಸ್ಥಿತರಿದ್ದರು.


Share this with Friends

Related Post