ಬೆಂಗಳೂರು, ಮೇ.5: ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಗೆದ್ದು ಬಂದರೂ ಅವರನ್ನು ಜೆಡಿಎಸ್ ನಿಂದ ಅಮಾನತು ಮಾಡಿರುವುದನ್ನು ಹಿಂಪಡೆಯಬಾರದೆಂದು ಪ್ರತಿ ಪಕ್ಷದ ನಾಯಕ ಆರ್ ಅಶೋಕ್ ಹೇಳಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ಪಕ್ಷದಿಂದ ಅಮಾನತು ಮಾಡಲಾಗಿದೆ, ಒಂದು ವೇಳೆ ಅವರು ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬಂದರೂ ಅವರ ಅಮಾನತು ಮುಂದುವರಿಸುವಂತೆ ಅವರ ವರಿಷ್ಠರಿಗೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು.
ಪ್ರಜ್ವಲ್ ರೇವಣ್ಣ ಅವರ ಪ್ರಕರಣದ ತನಿಖೆ ಮುಗಿದು ನ್ಯಾಯಾಲಯದಿಂದ ತೀರ್ಪು ಬರುವತನಕ ಅವರ ಅಮಾನತು ಹಾಗೆ ಇರಬೇಕೆಂದು ಜೆಡಿಎಸ್ ರಾಜ್ಯ ಅಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರಲ್ಲಿ ಅಶೋಕ್ ಮನವಿ ಮಾಡಿದರು.
ಪ್ರಜ್ವಲ್ ರೇವಣ್ಣ ಪ್ರಕರಣದಿಂದ ಚುನಾವಣೆ ಮತ್ತು ಫಲಿತಾಂಶದ ಮೇಲೆ ಯಾವುದೇ ರೀತಿಯ ಕೆಟ್ಟ ಪರಿಣಾಮ ಬೀರುವುದಿಲ್ಲ ಯಾರಾದರೂ ಹಾಗೊಂದುಕೊಂಡಿದ್ದರೆ ಅದು ಅವರ ಭ್ರಮೆ ಎಂದು ಅಶೋಕ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮಾಜಿ ಸಚಿವ ಎಚ್ ಡಿ ರೇವಣ್ಣ ಅವರ ಬಂಧನ ಕಾನೂನು ಪ್ರಕಾರವೇ ನಡೆದಿದೆ, ಎಸ್ಐಟಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು ಆದರೆ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ ಜಾಮೀನು ಸಿಗದ ಕಾರಣ ಎಸ್ಐಟಿ ವಷಕ್ಕೆ ಪಡೆದಿದೆ,ಎಸ್ಐಟಿ ಪೊಲೀಸರ ಕ್ರಮವನ್ನು ನಾನು ಸ್ವಾಗತಿಸುತ್ತೇನೆ ಎಂದು ಹೇಳಿದರು.