Tue. Dec 24th, 2024

ಲೋಕಸಭಾ ಚುನಾವಣಾ ದಿನಾಂಕ ಘೋಷಣೆ : ಇಲ್ಲಿದೆ ಸಂಪೂರ್ಣ ಮಾಹಿತಿ

Share this with Friends

ನವದದೆಹಲಿ,ಮಾ.16- ಭಾರತದ 18ನೇ ಲೋಕಸಭೆ ಚುನಾವಣೆ ಏ.19ರಿಂದ ಜೂನ್1ರವರೆಗೆ ಏಳು ಹಂತಗಳಲ್ಲಿ ನಡೆಯಲಿದ್ದು, ಜೂ.4ರಂದು ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್‍ಕುಮಾರ್ ಲೋಕಸಭೆ ಚುನಾವಣೆಯ ದಿನಾಂಕವನ್ನು ಪ್ರಕಟಿಸಿದರು.

543 ಲೋಕಸಭಾ ಕ್ಷೇತ್ರಗಳಿಗೆ ಒಟ್ಟು ಏಳು ಹಂತದಲ್ಲಿ ಮತದಾನ ನಡೆಯಲಿದ್ದು, ಮೊದಲ ಹಂತದ ಏ.19, ಎರಡನೇ ಹಂತದ ಏ.26, ಮೂರನೇ ಹಂತ ಮೇ 7, ನಾಲ್ಕನೇ ಹಂತ ಮೇ 13, ಐದನೇ ಹಂತ ಮೇ 20, ಆರನೇ ಹಂತ ಮೇ 25 ಹಾಗೂ ಕೊನೆಯ ಏಳನೇ ಹಂತದ ಮತದಾನ ಜೂನ್ 1ರಂದು ನಡೆಯಲಿದೆ.

ಒಂದೇ ಹಂತದ ಮತದಾನ ನಡೆಯುವ ರಾಜ್ಯಗಳು :
ಅರುಣಾಚಲ ಪ್ರದೇಶ, ಅಂಡಮಾನ್ ನಿಕೋಬಾರ್, ಛತ್ತೀಸ್‍ಘಡ, ದಾದರ್ ಮತ್ತು ಹವೇಲಿ, ದೆಹಲಿ, ಗೋವಾ, ಗುಜರಾತ್, ಹಿಮಾಚಲ ಪ್ರದೇಶ, ಹರಿಯಾಣ, ಕೇರಳ, ಲಕ್ಷದ್ವೀಪ, ಲಡಾಖ್, ಮಿಜೋರಾಂ, ಮೇಘಾಲಯ, ನಾಗಲ್ಯಾಂಡ್, ಪುದುಚೇರಿ, ಸಿಕ್ಕಿಂ, ತಮಿಳುನಾಡು, ಪಂಜಾಬ್, ತೆಲಂಗಾಣ ಹಾಗೂ ಉತ್ತರಖಂಡ್‍ನಲ್ಲಿ ಒಂದೇ ಹಂತದ ಮತದಾನ ನಡೆಯಲಿದೆ. ಕರ್ನಾಟಕ, ರಾಜಸ್ಥಾನ, ತ್ರಿಪುರ, ಮತ್ತು ಮಣಿಪುರದಲ್ಲಿ ಎರಡನೇ ಹಂತದ ಮತದಾನ ನಡೆದರೆ ಛತ್ತೀಸ್‍ಘಡ ಮತ್ತು ಅಸ್ಸಾಂನಲ್ಲಿ ಮೂರು ಹಂತದ ಮತದಾನ ನಡೆಸಲು ಆಯೋಗ ತೀರ್ಮಾನಿಸಿದೆ.

ಬಹು ಅಹಂತಗಳಲ್ಲಿ ಮತದಾನ ನಡೆಯುವ ರಾಜ್ಯಗಳು :
ಒಡಿಸ್ಸಾ, ಮಧ್ಯಪ್ರದೇಶ ಮತ್ತು ಜಾರ್ಖಂಡ್‍ನಲ್ಲಿ ನಾಲ್ಕು ಹಂತ, ಮಹಾರಾಷ್ಟ್ರ, ಜಮ್ಮುಕಾಶ್ಮೀರದಲ್ಲಿ 5 ಹಂತ ಹಾಗೂ ಉತ್ತರಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ 7 ಹಂತಗಳಲ್ಲಿ ಮತದಾನ ನಡೆಯಲಿದೆ. ಈ ಬಾರಿ ದೇಶಾದ್ಯಂತ 97 ಕೋಟಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದು, ಮೊದಲ ಬಾರಿಗೆ ಅಂದರೆ 18ರಿಂದ 19 ವರ್ಷದೊಳಗಿನ ಸುಮಾರು 1.80 ಕೋಟಿ ಮತದಾರರು ಮತದಾನದ ಹಕ್ಕು ಹೊಂದಿದ್ದಾರೆ.

ಮತದಾರರ ವಿವರ :
ಒಟ್ಟು ಮತದಾರರು 97 ಕೋಟಿ
49.72 ಕೋಟಿ ಪುರುಷರು
47.15 ಕೋಟಿ ಮಹಿಳೆಯರು
2.18 ಶತಾಯುಷಿ ಮತದಾರರು
80 ವರ್ಷ ದಾಟಿದವರು 1.98 ಕೋಟಿ
20-29 ವರ್ಷದೊಳಗಿನವರು 19.74 ಕೋಟಿ
18-19 ವರ್ಷದವರು 1.84 ಕೋಟಿ
ಯುವತಿಯರು 85 ಲಕ್ಷ
88 ಲಕ್ಷ ವಿಶೇಷ ವಿಕಲ ಚೇತನರು
ತೃತೀಯ ಲಿಂಗಿಗಳು 48 ಸಾವಿರ
ಒಟ್ಟು ಮತಗಟ್ಟೆ 10.5 ಲಕ್ಷ
ಇವಿಎಂ 55 ಲಕ್ಷ
4 ಲಕ್ಷ ವಾಹನ
2100 ವೀಕ್ಷಕರ ನೇಮಕ
1.5 ಕೋಟಿ ಭದ್ರತಾ ಸಿಬ್ಬಂದಿ ನಿಯೋಜನೆ

ಹೈಲೈಟ್ಸ್ :

*85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮನೆಯಿಂದಲೇ ಮತ ಚಲಾಯಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಬಾರಿ 12 ರಾಜ್ಯಗಳಲ್ಲಿ ಮಹಿಳಾ ಮತದಾರರೇ ಹೆಚ್ಚಾಗಿದ್ದು, ಶೇ.40ಕ್ಕಿಂತ ಹೆಚ್ಚು ವಿಕಲಚೇತನರಿದ್ದರೆ ಅವರು ಕೂಡ ಮನೆಯಿಂದಲೇ ಮತ ಚಲಾಯಿಸಬಹುದು.

*ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಕಡ್ಡಾಯವಾಗಿ ತಮ್ಮ ಕ್ರಿಮಿನಲ್ ಪ್ರಕರಣಗಳ ಬಗ್ಗೆ ಮಾಹಿತಿ ನೀಡುವುದು ಕಡ್ಡಾಯವಾಗಿದೆ.

*ಸುಳ್ಳು ಮಾಹಿತಿ ಮತ್ತು ನಕಲು ಸುದ್ದಿ, ನೀತಿಸಂಹಿತೆ ಉಲ್ಲಂಘನೆ, ತೋಳ್ಬಲ ಮತ್ತು ಹಣದ ಪ್ರಭಾವ ತಡೆಗಟ್ಟುವುದು ಚುನಾವಣಾ ಆಯೋಗಕ್ಕೆ ಈ ಬಾರಿ ಸವಾಲುಗಳಾಗಿವೆ ಎಂದು ಆಯೋಗದ ಮುಖ್ಯಸ್ಥರು ಹೇಳಿದ್ದಾರೆ. ಗಡಿಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಮೇಲೆ ದ್ರೋಣ್ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಮತದಾರರಿಗೆ ಕುಕ್ಕರ್, ಟಿವಿ, ಫ್ರಿಡ್ಜ್, ನಗದು, ಉಡುಗೊರೆಗಳು, ಮದ್ಯ ಸೇರಿದಂತೆ ಇತರೆ ಆಮಿಷವೊಡ್ಡಿದರೆ ಕಾನೂನು ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.

*ಸೂರ್ಯಾಸ್ತದ ಬಳಿಕ ಎಟಿಎಂ ವಾಹನಗಳ ಸಂಚಾರಕ್ಕೆ ಕಟ್ಟುನಿಟ್ಟಿನ ನಿಬಂಧನೆ ಹಾಕಿರುವ ಆಯೋಗ ಕಪ್ಪು ಹಣ ಸಾಗಿಸಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುವಂತೆ ಎಚ್ಚರಿಕೆ ನೀಡಲಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಆಯೋಗ ಸುಳ್ಳು ಸುದ್ದಿ ಹಬ್ಬಿಸುವುದು, ಖಾಸಗಿ ಬದುಕಿನ ಮೇಲೆ ವಾಗ್ದಾಳಿ, ಜಾತಿ, ಧರ್ಮ ಆಧಾರಿತ ಪ್ರಚಾರ ಹಾಗೂ ಸುಳ್ಳು ಜಾಹಿರಾತು ನೀಡುವುದಕ್ಕೆ ನಿರ್ಬಂಧ ಹಾಕಿದೆ. ಮಕ್ಕಳನ್ನು ಚುನಾವಣಾ ಪ್ರಚಾರಕ್ಕೆ ಬಳಸುವಂತಿಲ್ಲ.

*ಕರ್ನಾಟಕದಲ್ಲಿ 2 ಹಂತದಲ್ಲಿ ಲೋಕಸಭಾ ಚುನಾವಣೆ
ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಿಗೆ ಕಳೆದ ಬಾರಿಯಂತೆ ಈ ಬಾರಿಯೂ ಏಪ್ರಿಲ್ 26 ಮತ್ತು ಮೇ 7ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ.ಏ.26ರಂದು 14 ಲೋಕಸಭಾ ಕ್ಷೇತ್ರಗಳಿಗೆ ಹಾಗೂ ಮೇ 7ರಂದು ಉಳಿದ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆದು, ಜೂನ್4ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಮೊದಲ ಹಂತ 14 ಲೋಕಸಭಾ ಕ್ಷೇತ್ರಗಳಿಗೆ ಮಾ.28ರಂದು ಅಧಿಸೂಚನೆ ಹೊರಡಲಿದ್ದು, ಮಾ.28ರಿಂದ ಏಪ್ರಿಲ್ 4 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಮೇ 5ರಂದು ನಾಮಪತ್ರಗಳ ಪರಿಶೀಲನೆ ನಡೆದು, ಏ.8ಕ್ಕೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಎರಡನೇ ಹಂತದ ಮತದಾನ ನಡೆಯಲಿರುವ ಮೇ 7ರ 14 ಲೋಕಸಭಾ ಕ್ಷೇತ್ರಗಳಿಗೆ ಏ.12ರಂದು ಅಸೂಚನೆ ಹೊರಡಲಿದೆ. ಏ.12ರಿಂದ ಏ.19ರವರೆಗೆ ನಾಮಪತ್ರ ಸಲ್ಲಿಸಬಹುದು.

ಏ.20ರಂದು ನಾಮಪತ್ರಗಳ ಪರಿಶೀಲನೆ, ಏ.22ಕ್ಕೆ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದ್ದು, ಮೇ 7ಕ್ಕೆ 2ನೇ ಹಂತದ ಚುನಾವಣೆ ನಡೆಯಲಿದೆ. ರಾಜ್ಯದಲ್ಲಿ ಈ ಬಾರಿ ಒಟ್ಟು – 5,37,85,815 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಮುಕ್ತ ಮತ್ತು ನ್ಯಾಯಸಮ್ಮತ ಮತದಾನ ನಡೆಸಲು ಆಯೋಗ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಕೇಂದ್ರ ಚುನಾವಣಾ ಮುಖ್ಯ ಆಯುಕ್ತ ರಾಜೀವ್‍ಕುಮಾರ್ ತಿಳಿಸಿದರು.

ಮೊದಲ ಹಂತ :
ಏ.26ರಂದು ಮೊದಲ ಹಂತದ ಮತದಾನವು ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು , ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

ಎರಡನೇ ಹಂತ :
ಮೇ 7ರಂದು ಎರಡನೇ ಹಂತದ ಮತದಾನವು ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರ್ಗಿ, ರಾಯಚೂರು, ಬೀದರ್, ಕೊಪ್ಪಳ,ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ ಕ್ಷೇತ್ರಗಳಿಗೆ ನಡೆಯಲಿದೆ.


ಹಿರಿಯ ನಾಗರಿಕರು, ವಿಕಲಚೇತನರಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶ
ಲೋಕಸಭೆ ಚುನಾವಣೆ ಜೊತೆಯಲ್ಲೇ ಕರ್ನಾಟಕದ ಸುರಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯು ನಡೆಯಲಿದೆ.ಕಾಂಗ್ರೆಸ್ ಶಾಸಕ ರಾಜ ವೆಂಕಟಪ್ಪ ನಾಯ್ಕ್ ಅವರ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಭಾರತದ ಚುನಾವಣಾ ಆಯೋಗ ಉಪಚುನಾವಣೆ ಘೋಷಿಸಿದೆ. ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಭಾರತದ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಖಾಲಿ ಇರುವ 26 ವಿಧಾನಸಭಾ ಕ್ಷೇತ್ರಗಳಿಗೂ ಲೋಕಸಭೆ ಚುನಾವಣೆ ಸಂದರ್ಭದಲ್ಲೇ ಚುನಾವಣೆ ನಡೆಸುವುದಾಗಿ ಪ್ರಕಟಿಸಿದರು.

ಉಪಚುನಾವಣೆಗೆ ಏಪ್ರಿಲ್ 12 ರಂದು ಅಧಿಸೂಚನೆ ಪ್ರಕಟವಾಗಲಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಸಬಹುದು. ಏ.19 ರಂದು ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿದೆ. ಏ.20 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆ ವಾಪಸ್ ಪಡೆಯಲು ಏ.22 ರವರಗೆ ಕಾಲಾವಕಾಶವಿದೆ. ಮೇ 7 ರಂದು ಮತದಾನ ನಡೆಯಲಿದ್ದು, ಲೋಕಸಭೆ ಚುನಾವಣೆಯ ಮತ ಎಣಿಕೆ ನಡೆಯುವ ಜೂನ್ 4 ರಂದೇ ಈ ಉಪಚುನಾವಣೆಯ ಮತ ಎಣಿಕೆ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟವಾಗಲಿದೆ.


Share this with Friends

Related Post