ಮೈಸೂರು, ಏ.25: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರು ನಗರ ಹಾಗೂ ಜಿಲ್ಲೆಯಾದ್ಯಂತ ಭಾರಿ ಪೊಲೀಸ್ ಭದ್ರತೆ ಮಾಡಲಾಗಿದೆ.
ಮೈಸೂರು ನಗರ ವ್ಯಾಪ್ತಿಯಲ್ಲಿ ಅರಸೇನಾ ಪಡೆ ಸೇರಿದಂತೆ ಒಟ್ಟು 2,402 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಮತದಾನ ಪ್ರಕ್ರಿಯೆ ವೇಳೆ ಭದ್ರತೆಗಾಗಿ ನಿಯೋಜಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಅವರು ನಗರದಾದ್ಯಂತ ಸ್ಥಾಪಿಸಿರುವ 2202 ಮತಗಟ್ಟೆಗಳಲ್ಲಿ 41 ಅತಿ ಸೂಕ್ಷ್ಮ ಮತ್ತು 435 ಸೂಕ್ಷ್ಮ ಎಂದು ಗುರುತಿಸಲಾಗಿದೆ ಹಾಗೂ ನಿರ್ಭೀತಿಯಿಂದ ಮತದಾನ ನಡೆಯಲು ವ್ಯಾಪಕ ಭದ್ರತೆಯನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
177 ಮಂದಿ ಅರಸೇನಾಪಡೆ ಸಿಬ್ಬಂದಿ ಒಳಗೊಂಡಂತೆ ಎರಡು ಸ್ಟ್ರೈಕಿಂಗ್ ಫೋರ್ಸ್,120 ಕೆ ಎಸ್ ಆರ್ ಪಿ ಸಿಬ್ಬಂದಿ ಮತ್ತು 66 ಕಮಾಂಡೋ ಪಡೆ ಸಿಬ್ಬಂದಿಯನ್ನು ಮೈಸೂರು ನಗರ ವ್ಯಾಪ್ತಿಯ ಮತಗಟ್ಟೆಗಳಲ್ಲಿ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಮೈಸೂರು ಜಿಲ್ಲೆಯಾದ್ಯಂತ ಎಸ್ಪಿ ಸೀಮಾ ಲಾಟ್ಕರ್ ಅವರ ನೇತೃತ್ವದಲ್ಲಿ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜನೆ ಮಾಡಿ ಬಾರಿ ಬಂದೋಬಸ್ತ್ ಮಾಡಲಾಗಿದೆ.
ಓರ್ವ ಎಸ್,ಪಿ ಇಬ್ಬರು ಅಡಿಷನಲ್ ಎಸ್ಪಿ, ಎಂಟು ಡಿವೈಎಸ್ಪಿ, 30 ಪೊಲೀಸ್ ಇನ್ಸ್ ಪೆಕ್ಟರ್, 81 ಸಬ್ ಇನ್ಸ್ ಪೆಕ್ಟರ್,110 ಎ ಎಸ್ ಪಿ, 431 ಹೆಡ್ ಕಾನ್ಸ್ಟೇಬಲ್ ಗಳು, 1186 ಕಾನ್ ಸ್ಟೇಬಲ್ ಹಾಗೂ 320 ಪ್ಯಾರಾ ಮಿಲಿಟರಿ ಪಡೆಯ ಸಿಬ್ಬಂದಿ ಸೇರಿ 3500 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ