ಬೆಂಗಳೂರು: ರಾಜ್ಯದ ಹೋಟೆಲ್ ಉದ್ಯಮ ಎದುರಿಸುತ್ತಿರುವ ಅಡುಗೆ ಅನಿಲದ (LPG) ಸಮಸ್ಯೆಯನ್ನು ಶೀಘ್ರದಲ್ಲಿಯೇ ಬಗೆಹರಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹೋಟೆಲ್ಗಳಿಗೆ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, “ವಾಣಿಜ್ಯ ಬಳಕೆಯ ಸಿಲಿಂಡರ್ಗಳ ಪೂರೈಕೆಯನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಹಡಗುಗಳ ಮೂಲಕ ಅನಿಲ ಸರಬರಾಜು ಪ್ರಕ್ರಿಯೆ ನಡೆಯುತ್ತಿದ್ದು, ಮುಂದಿನ ಒಂದೆರಡು ವಾರಗಳಲ್ಲಿ ಹೋಟೆಲ್ಗಳಿಗೂ ಸಹಜವಾಗಿ ಅನಿಲ ಲಭ್ಯವಾಗಲಿದೆ,” ಎಂದು ಭರವಸೆ ನೀಡಿದರು.
ಸಾರ್ವಜನಿಕರಿಗೆ ಅಭಯ:
ರಾಜ್ಯದಲ್ಲಿ ಒಟ್ಟಾರೆಯಾಗಿ ಎಲ್ಪಿಜಿ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು, “ಪ್ರತಿದಿನ 850 ಟನ್ ಗ್ಯಾಸ್ ಪೂರೈಕೆಯಾಗುತ್ತಿದೆ. ಆದರೆ, ಅಭಾವ ಉಂಟಾಗಬಹುದೆಂಬ ಭೀತಿಯಿಂದ ಜನರು ಅಗತ್ಯಕ್ಕಿಂತ ಹೆಚ್ಚು ಬುಕ್ಕಿಂಗ್ ಮಾಡುತ್ತಿರುವುದು ಗೊಂದಲಕ್ಕೆ ದಾರಿ ಮಾಡಿಕೊಟ್ಟಿದೆ. ಗ್ರಾಹಕರು ಆತಂಕಕ್ಕೆ ಒಳಗಾಗಬಾರದು, ಆದರೆ ಬಳಕೆಯಲ್ಲಿ ಮಿತವ್ಯಯ ಪಾಲಿಸಬೇಕು,” ಎಂದು ಮನವಿ ಮಾಡಿದರು.

