Mon. Dec 23rd, 2024

ವಕೀಲರ‌ ಬೆಂಬಲ ಕೋರಿದ ಎಂ.ಲಕ್ಷ್ಮಣ್

Share this with Friends

ಮೈಸೂರು,ಏ.5: ಮೈಸೂರು ವಕೀಲರ ಸಂಘದ ಎಲ್ಲಾ ಸದಸ್ಯರು ಲೋಕಸಭಾ ಚುನಾವಣೆಯಲ್ಲಿ ಬೆಂಬಲ ಸೂಚಿಸ ಬೇಕೆಂದು ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಮನವಿ ಮಾಡಿದರು.

ನಗರದ ನ್ಯಾಯಾಲಯದ ಸಭಾಂಗಣದಲ್ಲಿ ಮತಯಾಚನೆ ಮಾಡಿ ಮಾತನಾಡಿದ ಲಕ್ಷ್ಮಣ್,ವಕೀಲರ ಸಮಸ್ಯೆಗಳಿಗೆ ನಾನು ಸ್ಪಂದಿಸುತ್ತೇನೆ. ನಿಮ್ಮೆಲ್ಲರ ಸೇವೆಗಾಗಿ ನನಗೊಂದು ಅವಕಾಶ ಕೊಡಿ ಎಂದು ಕೋರಿದರು.

ನಾನು ಪಾರ್ಲಿಮೆಂಟ್ ನಲ್ಲಿ ಸುಮ್ಮನೆ ಕುಳಿತು ಬರುವುದಿಲ್ಲ. ರಾಜ್ಯದ ಜನತೆಯ ಪರವಾಗಿ, ರಾಜ್ಯದ ಅಭಿವೃದ್ಧಿಯ ಪರವಾಗಿ ಮಾತನಾಡುತ್ತೇನೆ. ತಾವೆಲ್ಲರೂ ಮತ ನೀಡಿ ನನ್ನನು ಗೆಲ್ಲಿಸಿದ್ದಲ್ಲಿ ಸದಾ ಜನರ ಪರವಾಗಿ ಇದ್ದು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುತ್ತೇನೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲ ಬಾರಿ ಮುಖ್ಯ ಮಂತ್ರಿಗಳಾಗಿದ್ದ ಅವಧಿಯಲ್ಲಿ ಮೈಸೂರಿಗೆ 3.800 ಕೋಟಿ ರೂ. ಅನುದಾನವನ್ನು ನೀಡಿದ್ದಾರೆ. ಇಂದಿನ ಜಯದೇವ ಆಸ್ಪತ್ರೆ, ನಗರದ ಕಾಂಕ್ರೀಟ್ ರಸ್ತೆ, ಮಹಾರಾಣಿ ಕಾಲೇಜು, ವಿದ್ಯಾರ್ಥಿನಿಲಯ ಹೀಗೆ ಹಲವರು ಅಭಿವೃದ್ದಿಯಾಗಿದೆ ಎಂದು ತಿಳಿಸಿದರು.

ಮೈಸೂರು ಮತ್ತು ಕೊಡಗು ಜಿಲ್ಲೆಗಳು ಅತ್ಯುತ್ತಮ ಪ್ರವಾಸೋದ್ಯಮ ಸ್ಥಳವನ್ನಾಗಿಸಲು ಮತ್ತು ಇದರ ಜೊತೆಗೆ ಒಂದು ಲಕ್ಷ ಜನರಿಗೆ ಉದ್ಯೋಗವನ್ನು ಸೃಷ್ಟಿಸುವ ವಾತಾವರಣವಿದೆ. ಆದರೆ ಈ ಕಾರ್ಯಕ್ಕೆ ಹಿಂದಿನ ಸಂಸದರು ಪ್ರಯತ್ನಿಸಲಿಲ್ಲ. ಈ ಮಹತ್ವದ ಕಾರ್ಯವನ್ನು ಮಾಡುವಲ್ಲಿ ನಾನು ಪ್ರಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

ಶಾಸಕ ತನ್ವೀರ್ ಶೇಠ್ ಅವರು ಮಾತನಾಡಿ,
ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಹ ಸರ್ಕಾರದ ಸೌಲಭ್ಯ ದೊರೆಯಬೇಕು ಎಂಬ ಮೂಲ ಉದ್ದೇಶವನ್ನು ಇಟ್ಟುಕೊಂಡು ಕಾಂಗ್ರೆಸ್ ಪಕ್ಷ ಸರ್ಕಾರವನ್ನು ನಡೆಸುತ್ತಿದೆ. ಸಮಾಜದ ಬಡತನವನ್ನು ನಿರ್ಮೂಲನೆ ಮಾಡಿ, ಕರ್ನಾಟಕವನ್ನು ಹಸಿವು ಮುಕ್ತ ರಾಜ್ಯವನ್ನಾಗಿ ಮಾಡಬೇಕು. ಶಿಕ್ಷಣದ ಸೌಲಭ್ಯ ಎಲ್ಲರಿಗೂ ಸಿಗಬೇಕು ಎಂಬ ಸಂವಿಧಾನದ ಆಶಯಂತೆ ಕಾಂಗ್ರೆಸ್ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಮೈಸೂರು ಕೊಡಗು ಲೋಕಸಭಾ ಅಭ್ಯರ್ಥಿಯಾಗಿ ಎಂ.ಲಕ್ಷ್ಮಣ್ ಅವರನ್ನು ಆಯ್ಕೆ ಮಾಡಿದ್ದೇವೆ, ಅವರು ನಿಷ್ಠಾವಂತ ಕಾರ್ಯಕರ್ತರಾಗಿ ಪಕ್ಷಕ್ಕೆ ದುಡಿದಿದ್ದಾರೆ. ತಾವೆಲ್ಲರೂ ಹೆಚ್ಚಿನ ಸಹಕಾರ ನೀಡಿ ಅವರನ್ನು ಗೆಲ್ಲಿಸಿ. ಜನ ಸಾಮಾನ್ಯರ ಪರ ಕೆಲಸ ಮಾಡುತ್ತಾರೆ ಎಂದು ತಿಳಿಸಿದರು.

ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಸ್.ಲೋಕೇಶ್ ಮಾತನಾಡಿ,
ಎಂ.ಲಕ್ಷ್ಮಣ್ ಅವರು ಪ್ರಾಮಾಣಿಕ ವ್ಯಕ್ತಿಯಾಗಿದ್ದಾರೆ. ಅವರಿಗೆ ಮೈಸೂರು ವಕೀಲರ ಸಂಘದ ವತಿಯಿಂದ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಭರವಸೆ ನೀಡಿದರು.

ಮೈಸೂರು ವಕೀಲ ಸಂಘದ ಮಾಜಿ ಅಧ್ಯಕ್ಷ ಮಹದೇವಸ್ವಾಮಿ, ಮಾಜಿ ಉಪಮೇಯರ್ ಪುರುಷೋತ್ತಮ್, ಮಾಜಿ ಜಿ.ಪಂ.
ಅಧ್ಯಕ್ಷ ಬಿ.ಎಂ.ರಾಮು, ಕಾರ್ಯದರ್ಶಿ ಎ.ಜಿ.ಸುಧೀರ್, ಉಪಾಧ್ಯಕ್ಷ ಚಂದ್ರ ಶೇಖರ್, ಮಾಜಿ ಕಾರ್ಯದರ್ಶಿ ಎಸ್. ಉಮೇಶ್, ಹಿರಿಯ ವಕೀಲರಾದ ಚಂದ್ರಮೌಳಿ,
ಮೈಸೂರು ನಗರದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಗ್ರಾಮಾಂತರ ಅಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್ ಹಾಗೂ ಮೈಸೂರು ವಕೀಲರ ಸಂಘದ ಸದಸ್ಯರು ಉಪಸ್ಥಿತರಿದ್ದರು.


Share this with Friends

Related Post