ಬೆಂಗಳೂರು,ಆ.14: ಭಾರತದ ಪ್ರಮುಖ ಅಗರಬತ್ತಿ ತಯಾರಕರು ಮತ್ತು ಮೈಸೂರು ವಾರಿಯರ್ಸ್ ತಂಡದ ಮಾಲೀಕರಾದ ಎನ್ಆರ್ ಗ್ರೂಪ್ಸ್ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 2024 ಪಂದ್ಯಾವಳಿಗೆ ತಮ್ಮ ತಂಡವನ್ನು ಪ್ರಕಟಿಸಿದೆ. ಇದೇ ವೇಳೆ ತಮ್ಮ ತಂಡದ ಜೆರ್ಸಿಯನ್ನು ಅನಾವರಣಗೊಳಿಸಲಾಯಿತು.
ಬೆಂಗಳೂರು ಮತ್ತು ಮೈಸೂರಿನಲ್ಲಿ ನಡೆದ ಪ್ರತಿಭಾನ್ವೇಷಣೆ ಕಾರ್ಯಕ್ರಮ ಹಾಗೂ ಕೆಎಸ್‌ಸಿಎ ಆಯೋಜಿಸಿದ್ದ ಆಟಗಾರರ ಹರಾಜು ಪ್ರಕ್ರಿಯೆ ಬಳಿಕ ತಂಡ ಕಠಿಣ ತರಬೇತಿ ನಡೆಸಿತು.
ಬಳಿಕ ಬಲಿಷ್ಠ ತಂಡವನ್ನು ಆಯ್ಕೆ ಮಾಡಲಾಯಿತು. ಮಹಾರಾಜ ಟ್ರೋಫಿ 2024 ಪಂದ್ಯಾವಳಿಯು ಆಗಸ್ಟ್ 15 ರಿಂದ ಸೆಪ್ಟೆಂಬರ್ 1ರವರೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಪ್ರತಿಭಾನ್ವೇಷಣೆಯಲ್ಲಿ ಪ್ರತಿಭಾವಂತ ಆಟಗಾರರಾದ ಕಿಶನ್ ಬೇಡರೆ ಮತ್ತು ಗೌತಮ್ ಸಾಗರ್ ಆಯ್ಕೆಯಾಗಿದ್ದಾರೆ.
ಸತತ ಮೂರನೇ ವರ್ಷ ಖ್ಯಾತ ಕ್ರಿಕೆಟ್ ಆಟಗಾರ ಕರುಣ್ ನಾಯರ್ ಅವರು ತಂಡದ ನಾಯಕರಾಗಿ ಆಯ್ಕೆಯಾಗಿದ್ದು, ಅವರು ಈ ಹಿಂದೆ ಯಶಸ್ವಿಯಾಗಿ ತಂಡವನ್ನು ಮುನ್ನಡೆಸಿದ ಅನುಭವವನ್ನು ಬಳಸಿಕೊಂಡು ತಂಡಕ್ಕೆ ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ.
ತಂಡಕ್ಕೆ ಸಮರ್ಥ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಆರ್ ಎಕ್ಸ್ ಮುರಳೀಧರ್ ಆರ್ ಅವರನ್ನು ಪ್ರಧಾನ ಕೋಚ್ ಆಗಿ ನೇಮಿಸಲಾಗಿದ್ದು,ಸಹಾಯಕ ಕೋಚ್ ಆಗಿ ವಿಜಯ್ ಮದ್ಯಾಲ್ಕರ್ ಇದ್ದಾರೆ.
ಬೌಲಿಂಗ್ ಕೋಚ್ ಆಗಿ ಆದಿತ್ಯ ಸಾಗರ್ ಮತ್ತು ತಂಡದ ವ್ಯವಸ್ಥಾಪಕರಾಗಿ ಸುರೇಶ್ ಎಂಆರ್ ಆಯ್ಕೆಯಾಗಿದ್ದಾರೆ.
ಕೃಷ್ಣಪ್ಪ ಗೌತಮ್, ಸುಚಿತ್ ಜೆ, ಮನೋಜ್ ಭಾಂಡಗೆ, ಕಾರ್ತಿಕ್ ಸಿ ಎ, ವೆಂಕಟೇಶ್ ಎಂ, ಸುಮಿತ್ ಕುಮಾರ್, ವಿದ್ಯಾಧರ್ ಪಾಟೀಲ್, ಕಿಶನ್ ಬೇಡರೆ, ಎಂಡಿ ಸರ್ಫರಾಜ್ ಅಶ್ರಫ್, ಗೌತಮ್ ಮಿಶ್ರಾ, ಗೌತಮ್ ಸಾಗರ್, ಕಾರ್ತಿಕ್ ಎಸ್ ಯು, ದೀಪಕ್ ದೇವಾಡಿಗ, ಧನುಷ್ ಗೌಡ, ಜಾಸ್ಪರ್ ಇ ಜೆ, ಹರ್ಷಿಲ್ ಧರ್ಮಾನಿ, ಸಮಿತ್ ದ್ರಾವಿಡ್, ಸಮ್ಯನ್ ಶ್ರೀವಾಸ್ತವ, ಮತ್ತು ಪ್ರಸಿದ್ಧ್ ಕೃಷ್ಣ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಮೈಸೂರಿಗೆ ಗೌರವ ಸಲ್ಲಿಸುವ ಸಲುವಾಗಿ ನೀಲಿ ಮತ್ತು ಹಳದಿ ಬಣ್ಣದ ಸಂಯೋಜನೆಯ ಹೊಸ ಜೆರ್ಸಿಯನ್ನು ಪ್ರದರ್ಶಿಸಲಾಯಿತು. ಈ ಜೆರ್ಸಿ ತಂಡದ ಶೀರ್ಷಿಕೆ ಪ್ರಾಯೋಜಕರಾದ ಭಾರತದ ಪ್ರಮುಖ ಅಗರಬತ್ತಿ ಬ್ರಾಂಡ್ ಆಗಿರುವ ಸೈಕಲ್ ಪ್ಯೂರ್ ಅಗರಬತ್ತಿ, ಕ್ರೀಡಾ ಸುದ್ದಿ ವಾಹಿನಿ ಜೆ ಎಸ್ ಕೆ1 ಮತ್ತು ಮೈಸೂರಿನ ವಿಶ್ವಾಸಾರ್ಹ ಡೆವಲಪರ್ ಆಗಿರುವ ಸಂಕಲ್ಪ್ ಸಂಸ್ಥೆಯ ಲೋಗೋಗಳನ್ನು ಹೊಂದಿದೆ.
ತಮ್ಮ ತಂಡದ ಕುರಿತು ಮಾತನಾಡಿದ ಮೈಸೂರು ವಾರಿಯರ್ಸ್‌ನ ಮಾಲೀಕರು ಮತ್ತು ಸೈಕಲ್ ಪ್ಯೂರ್ ಅಗರಬತ್ತಿಯ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್ ರಂಗಾ ಅವರು, ಮೈಸೂರು ವಾರಿಯರ್ಸ್ ತಂಡದ ಪ್ರತಿಭಾವಂತ ತಂಡವನ್ನು ಪ್ರಕಟಿಸಲು ಸಂತೋಷಗೊಂಡಿದ್ದೇನೆ. ಮಹಾರಾಜ ಟ್ರೋಫಿ ಪಂದ್ಯಾವಳಿಯಲ್ಲಿ ನಾವು ಜಯ ಗಳಿಸುವ ವಿಶ್ವಾಸ ಹೊಂದಿದ್ದೇವೆ ಎಂದು ಹೇಳಿದರು.
ಮೈಸೂರು ವಾರಿಯರ್ಸ್ ಮಾಲೀಕರು ಮತ್ತು ರಂಗಾಸನ್ಸ್ ಏರೋಸ್ಪೇಸ್‌ನ ಸಿಇಒ ಪವನ್ ರಂಗಾ ಅವರು,ಮಹಾರಾಜ ಟ್ರೋಫಿ ಶುರುವಾಗುತ್ತಿದ್ದು, ನಮ್ಮ ತಂಡವನ್ನು ಪರಿಚಯಿಸಲು ಮತ್ತು ತಂಡದ ಜೆರ್ಸಿ ಅನಾವರಣ ಮಾಡಲು ಸಂತೋಷ ಪಡುತ್ತೇನೆ,ಈ ಬಾರಿ ನಾವು ಅಸಾಧಾರಣ ಪ್ರದರ್ಶನ ನೀಡಲಿದ್ದೇವೆ ಎಂದು ಹೇಳಿದರು.