ಚಿಕ್ಕೋಡಿ:ಮಹಾರಾಷ್ಟ್ರದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ಫಲಿತಾಂಶವನ್ನು ಅಲ್ಲಿನ ಮತದಾರರು ನೀಡಿದ್ದಾರೆ.ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆಯಲ್ಲಿಯೂ ಮಹಾರಾಷ್ಟ್ರ ಮಾದರಿಯಲ್ಲಿಯೇ ಫಲಿತಾಂಶ ಬರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮಹಾರಾಷ್ಟ್ರ ಚುನಾವಣಾ ಫಲಿತಾಂಶ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನಿಶ್ಚಿತವಾಗಿ ಪರಿಣಾಮ ಆಗಲಿದೆ. ರಾಜ್ಯದ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ಅವ್ಯವಹಾರ, ಭ್ರಷ್ಟಾಚಾರ, ಡಿ.ಕೆ.ಶಿವಕುಮಾರ್ ಅವರು ಬೆಂಗಳೂರು ಮಹಾನಗರದ ಕೆಲವು ಸಂಘಟನೆಗಳಿಗೆ ಧಮ್ಕಿ ಹಾಕಿರುವುದು- ಇವೆಲ್ಲ ಗಮನಿಸಿದಾಗ ಕಾಂಗ್ರೆಸ್ಸಿನವರು ಆತ್ಮವಿಶ್ವಾಸ ಕಳಕೊಂಡಂತೆ ಕಾಣುತ್ತಿದೆ ಎಂದು ನುಡಿದರು.
ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಬಿಎ ಚುನಾವಣೆಯಿಂದ ದೂರ ಹೋಗುವ ಪ್ರಯತ್ನವನ್ನೇ ಅವರು ಮಾಡುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಬಂದಂಥ ಫಲಿತಾಂಶವು ಬೆಂಗಳೂರಿನ ಜಿಬಿಎ ಚುನಾವಣೆಯಲ್ಲೂ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಮಹಾರಾಷ್ಟ್ರದಲ್ಲಿ ನಿರೀಕ್ಷಿತ ಫಲಿತಾಂಶವೇ ಬಂದಿದೆ. ಮಹಾರಾಷ್ಟ್ರ ಮಾತ್ರವಲ್ಲ; ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲೂ ತಾವು ನೋಡಿದ್ದೀರಿ. ಕಾಂಗ್ರೆಸ್ ಸರಕಾರದ ಗ್ಯಾರಂಟಿಗಳ ಅಬ್ಬರದ ನಡುವೆಯೂ ನಾವು ಕರ್ನಾಟಕದಲ್ಲಿ 19 ಸ್ಥಾನಗಳನ್ನು ಗೆದ್ದಿದ್ದೆವು. ಇದೊಂದು ಐತಿಹಾಸಿಕ ಗೆಲುವು. ಮಹಾರಾಷ್ಟ್ರದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ಫಲಿತಾಂಶವನ್ನು ಅಲ್ಲಿನ ಮತದಾರರು ನೀಡಿದ್ದಾರೆ.ಬಿಜೆಪಿಯ ಗೆಲುವು ಮಹಾರಾಷ್ಟ್ರಕ್ಕೆ ಸೀಮಿತವಾಗದೇ ನಮ್ಮ ರಾಜ್ಯವೂ ಒಳಗೊಂಡಂತೆ ದೇಶದ ಎಲ್ಲ ರಾಜ್ಯಗಳಲ್ಲಿ ಇವತ್ತು ಸಂಭ್ರಮಾಚರಣೆ ಮಾಡಿದ್ದಾರೆ ಎಂದರು.
ಮತಗಳ್ಳತನ ಕುರಿತ ರಾಹುಲ್ ಗಾಂಧಿಯವರ ಟ್ವೀಟ್ ಕುರಿತ ಪ್ರಶ್ನೆಗೆ ನಗುತ್ತ ಉತ್ತರಿಸಿದ ಅವರು, ಪಾಪ ರಾಹುಲ್ ಗಾಂಧಿಯವರಿಗೆ ಏನು ಮಾಡಬೇಕೆಂದು ತೋಚುತ್ತಿಲ್ಲ ಎಂದು ತಿಳಿಸಿದರು.
ಪ್ರಜಾಪ್ರಭುತ್ವದ ಕಗ್ಗೊಲೆ ಬಿಟ್ಟು, ಅವಲೋಕನ ಮಾಡಿ:
ರಾಹುಲ್ ಗಾಂಧಿಯವರು ಮತಗಳ್ಳತನ, ಮತಗಳ್ಳತನ ಎಂದು ಪ್ರಜಾಪ್ರಭುತ್ವ ವ್ಯವಸ್ಥೆಯ ಕಗ್ಗೊಲೆ ಮಾಡುವುದನ್ನು ಬಿಡಲಿ; ಮತದಾರರಿಗೆ ಅಪಮಾನ ಮಾಡುವುದನ್ನು ಬಿಡಲಿ; ಕಾಂಗ್ರೆಸ್ ಪಕ್ಷ ಯಾಕೆ ದೇಶದ ಜನರಿಂದ ದೂರ ಹೋಗುತ್ತಿದೆ? ಯಾಕೆ ದೇಶದ ಜನರ ಮನಸ್ಸಿನಲ್ಲಿ ಕಾಂಗ್ರೆಸ್ಸಿನ ಬಗ್ಗೆ ಅಸಡ್ಡೆ ಬಂದಿದೆ? ಎಂಬುದರ ಬಗ್ಗೆ ಅವಲೋಕನ ಮಾಡಿದರೆ ಮತ್ತೆ ಸೀಟು 100ರ ಗಡಿಗೆ ಬರಬಹುದೆಂದು ಮಾಧ್ಯಮಗಳ ಮೂಲಕ ಕಿವಿಮಾತು ಹೇಳಲು ಬಯಸುವುದಾಗಿ ತಿಳಿಸಿದರು ಹಾಗು ವಿಪಕ್ಷದಲ್ಲಿ ಕೂರಲು ಲಾಯಕ್ ಎಂದು ಜನರು ತೀರ್ಮಾನಿಸಬಹುದು ಎಂದರು.

