ಬೆಂಗಳೂರು: ರಾಜ್ಯದಲ್ಲಿ ಹೆಚ್ಚು ಹಾಲು ಉತ್ಪಾದಿಸುವ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಲ್ಲಿ (ಬಮೂಲ್) ಹಗರಣಗಳದ್ದೇ ಸದ್ದು. ರಾಸುಗಳ ವಿಮೆ ಯೋಜನೆಯಲ್ಲಿ ಅಧಿಕಾರಿಗಳು ಭಾರಿ ಗೋಲ್ಮಾಲ್ ನಡೆಸಿದ್ದು, ಕಿಕ್‌ಬ್ಯಾಕ್ ಆಸೆಗೆ ಭ್ರಷ್ಟಾಚಾರ ನಡೆಸಿದ್ದಾರೆ.
ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯ್ದೆ(ಕೆಟಿಟಿಪಿ) ಹಾಗೂ ಒಕ್ಕೂಟದ ನಿಯಮಾವಳಿ ಗಾಳಿಗೆ ತೂರಿ ರಾಸುಗಳ ವಿಮೆ ಯೋಜನೆಯಲ್ಲಿ ಅಕ್ರಮ ನಡೆದಿದೆ. ಶೇ.15ರಷ್ಟು ಕಿಕ್‌ಬ್ಯಾಕ್ ಪಡೆದಿರುವ ಆರೋಪದ ಮೇಲೆ ಬಮೂಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಎಸ್.ಟಿ.ಸುರೇಶ್ ವಿರುದ್ಧ ಲೋಕಾಯುಕ್ತದಲ್ಲಿ ದೂರು ನೀಡಲಾಗಿದೆ. ಬಮೂಲ್ ವ್ಯಾಪ್ತಿಯ ಮೂರು ಜಿಲ್ಲೆಗಳ ರಾಸುಗಳಿಗೆ ವಾರ್ಷಿಕ ಸುಮಾರು 40 ಕೋಟಿ ರೂ.ಗಳಷ್ಟು ವಿಮೆ ಮಾಡಿಸಲಾಗುತ್ತಿದೆ. ಆದರೆ, ಈ ವಿಮೆ ಯೋಜನೆಯಲ್ಲಿ ಸಂಪೂರ್ಣ ಅಕ್ರಮ ನಡೆದಿದೆ. ಒಕ್ಕೂಟದ ಹಿರಿಯ ಅಧಿಕಾರಿಗಳು ಕಮಿಷನ್ ರೂಪದಲ್ಲಿ ಕೋಟ್ಯಂತರ ರೂ. ಹಣವನ್ನು ಜೇಬಿಗೆ ತುಂಬಿಸಿಕೊಂಡಿದ್ದಾರೆ. ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಅವರು ವಿಮೆ ಯೋಜನೆ ವಿಚಾರದಲ್ಲಿ ಚುನಾಯಿತ ಆಡಳಿತ ಮಂಡಳಿಯನ್ನು ಕತ್ತಲಲ್ಲಿಟ್ಟು, ಏಕಪಕ್ಷೀಯ ನಿರ್ಣಯ ಕೈಗೊಂಡಿರುವುದು ಬಯಲಾಗಿದೆ.ಕೆಟಿಟಿಪಿ ಹಾಗೂ ಒಕ್ಕೂಟದ ನಿಯಮಾವಳಿಗೆ ವಿರುದ್ಧವಾಗಿ ಮಧ್ಯವರ್ತಿ ಏಜೆನ್ಸಿ ಮೂಲಕ ವಿಮಾ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ‘ಡೀಲ್’ ಕುದುರಿಸಿ ಅಕ್ರಮ ಎಸಗಿದ್ದಾರೆ. ಇದರಿಂದ ಒಕ್ಕೂಟಕ್ಕೆ ಮಾತ್ರವಲ್ಲದೇ, ಹೈನುಗಾರರಿಗೂ ಹೆಚ್ಚಿನ ನಷ್ಟ ಉಂಟಾಗಿದೆ.
ಮಧ್ಯವರ್ತಿ ಏಜೆನ್ಸಿಗಳ ಮೂಲಕ ಡೀಲ್!
ಬಮೂಲ‌್‌ನಿಂದ ಪ್ರತಿ ವರ್ಷ ಒಕ್ಕೂಟದ ವ್ಯಾಪ್ತಿಯ ರಾಸುಗಳಿಗೆ ವಿಮೆ ಮಾಡಿಸಲಾಗುತ್ತದೆ. ಕೆಟಿಟಿಪಿ ಹಾಗೂ ಸಹಕಾರ ಸಂಘಗಳ ನಿಯಮಾವಳಿ ಪ್ರಕಾರ ಒಕ್ಕೂಟವು ನೇರವಾಗಿ ವಿಮಾ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು. ಆದರೆ, 2023ರಿಂದ ವಿಮೆ ಕಂಪನಿಗಳ ಬದಲಿಗೆ, ಹೈದರಾಬಾದ್ ಮೂಲದ ಬ್ರೋಕರ್ (ಮಧ್ಯವರ್ತಿ) ಏಜೆನ್ಸಿಗಳ ಮೂಲಕ ವಿಮೆಗೆ ಅವಕಾಶ ನೀಡಲಾಗಿದೆ. ಇದರಿಂದ ವಿಮಾ ಕಂಪನಿಗಳು ಪ್ರತಿ ವಿಮೆಗೆ ಮಧ್ಯವರ್ತಿ ಏಜೆನ್ಸಿಗಳ ಕಮಿಷನ್ ಸೇರಿದಂತೆ ವಿಮಾ ಕಂತಿನಲ್ಲಿ ಶೇ.15ರಷ್ಟು ದರ ಏರಿಕೆ ಮಾಡಿವೆ. ಹೀಗಾಗಿ, 50-50ರ ಅನುಪಾತದಲ್ಲಿ ವಿಮೆಯ ಕಂತು ಪಾವತಿಸುವ ಒಕ್ಕೂಟಕ್ಕೆ ಹಾಗೂ ರಾಸುಗಳ ಮಾಲೀಕರಿಗೆ ವಿಮಾ ಮೊತ್ತ ಸಹಜವಾಗಿ ಏರಿಕೆಯಾಗಿದೆ.ಒಕ್ಕೂಟವು 2023ಕ್ಕೂ ಮೊದಲು ನೇರವಾಗಿ ವಿಮಾ ಕಂಪನಿಗಳೊಂದಿಗೆ ರಾಸುಗಳ ವಿಮಾ ಯೋಜನೆಯ ಒಪ್ಪಂದ ಮಾಡಿಕೊಳ್ಳುತ್ತಿತ್ತು. ಆಗ ಮಧ್ಯವರ್ತಿ ಬ್ರೋಕರ್ ಏಜೆನ್ಸಿಗಳಿಗೆ ಅವಕಾಶವಿರಲಿಲ್ಲ. ಆದರೆ, ಸುರೇಶ್ ಅವರು 2022ರಲ್ಲಿ ಬಮೂಲ್ ವ್ಯವಸ್ಥಾಪಕ ನಿರ್ದೇಶಕರಾಗಿ ಬಂದ ನಂತರ ಹಳೆಯ ಪದ್ಧತಿಗೆ ಇತಿಶ್ರೀಯಾಡಿ ಬ್ರೋಕರ್ ಏಜೆನ್ಸಿಗಳಿಗೆ ಮಣೆ ಹಾಕಿದ್ದಾರೆ. 2022ರಿಂದ ರಾಸುಗಳ ವಿಮೆ ಯೋಜನೆಯಲ್ಲಿ ಹೈದರಾಬಾದ್ ಮೂಲದ ಬ್ರೋಕರ್ ಏಜೆನ್ಸಿಗಳ ಮೂಲಕ ಡೀಲ್ ನಡೆಸಲಾಗಿದೆ. 2022-23ನೇ ಸಾಲಿನಲ್ಲಿ ಫೇಮ್ ಇನ್ಸೂರೆನ್ಸ್ ಬ್ರೋಕಿಂಗ್ ಸರ್ವಿಸಸ್ ಪ್ರೈವೇಟ್ ಲಿ. ಹಾಗೂ 2023-24ನೇ ಸಾಲಿನಲ್ಲಿ ಫೇಮ್ ಇನ್ಸೂರೆನ್ಸ್ ಬ್ರೋಕಿಂಗ್ ಸರ್ವಿಸಸ್ ಪ್ರೈ.ಲಿ. ಮೂಲಕ ರಾಸುಗಳ ವಿಮಾ ಯೋಜನೆ ಕಾರ್ಯಗತಗೊಳಿಸಲಾಗಿದೆ.
ಚುನಾಯಿತ ಮಂಡಳಿಯ ಅನುಮತಿಯಿಲ್ಲ:
ಬಮೂಲ್ ಆಡಳಿತಾತ್ಮಕ ಹಾಗೂ ಹಣಕಾಸು ವ್ಯವಹಾರ ಸೇರಿದಂತೆ ಪ್ರತಿ ವಿಚಾರದಲ್ಲೂ ಅಧಿಕಾರಿಗಳು ಚುನಾಯಿತ ನಿರ್ದೇಶಕರ ಆಡಳಿತ ಮಂಡಳಿಯ ಒಪ್ಪಿಗೆ ಪಡೆದು ನಿರ್ಧಾರ ಕೈಗೊಳ್ಳಬೇಕು. ಆದರೆ, ರಾಸುಗಳ ವಿಮೆ ಯೋಜನೆ ವಿಚಾರದಲ್ಲಿ ಈ ನಿಯಮಾವಳಿ ಪಾಲಿಸಿಲ್ಲ. ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಹಾಗೂ ಅಧಿಕಾರಿಗಳು ಚುನಾಯಿತ ಮಂಡಳಿಯ ಗಮನಕ್ಕೆ ತರದೆ ಮತ್ತು ಅನುಮತಿಯನ್ನೇ ಪಡೆಯದೆ ಬ್ರೋಕರ್ ಏಜೆನ್ಸಿಗಳ ಮೂಲಕ ವಿಮಾ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಅಕ್ರಮ ಎಸಗಿದ್ದಾರೆ.
ಟೆಂಡರ್‌ಗೂ ಮೊದಲೇ ಕಾರ್ಯಾದೇಶ ಪತ್ರ:
ಕೆಟಿಟಿಪಿ ನಿಯಮಾನುಸಾರ ಟೆಂಡರ್ ಕರೆದು ನಂತರ ವಿಮೆ ಯೋಜನೆಗೆ ವಿಮಾ ಕಂಪನಿಯನ್ನು ಆಯ್ಕೆ ಮಾಡಬೇಕಿತ್ತು. ಆದರೆ, ಟೆಂಡರ್‌ಗೂ ಮೊದಲೇ ಹೈದರಾಬಾದ್ ಮಧ್ಯವರ್ತಿ ಏಜೆನ್ಸಿಗಳಿಗೆ ವಿಮೆ ಯೋಜನೆ ಜಾರಿ ಸಂಬಂಧ ಕಾರ್ಯಾದೇಶ ಪತ್ರ ನೀಡಲಾಗಿದೆ. ಅಂದರೆ ಟೆಂಡರ್ ಪ್ರಕ್ರಿಯೆಗೂ ಮುನ್ನವೇ ವ್ಯವಸ್ಥಾಪಕ ನಿರ್ದೇಶಕರು ಮಧ್ಯವರ್ತಿ ಏಜೆನ್ಸಿಯನ್ನು ನಿರ್ಧರಿಸಿ ಲೋಪ ಎಸಗಿದ್ದಾರೆ.
ಶೇ 15ರಷ್ಟು ಕಿಕ್‌ಬ್ಯಾಕ್:
ಬಮೂಲ್ನಿಂದ ಕಂಪನಿಗಳಿಗೆ ಟೆಂಡರ್ ನೀಡಿದ್ದರೆ, ಒಕ್ಕೂಟಕ್ಕೆ ವಿಮಾ ಕಂತಿನ ಹೆಚ್ಚಿನ ಆರ್ಥಿಕ ಹೊರೆ ತಪ್ಪುತ್ತಿತ್ತು. ಆದರೆ, ಅಧಿಕಾರಿಗಳು ಕಮಿಷನ್ ಆಸೆಗೆ ಮಧ್ಯವರ್ತಿ ಏಜೆನ್ಸಿಗಳಿಗೆ ಮಣೆ ಹಾಕಿ ಒಕ್ಕೂಟಕ್ಕೆ ಆರ್ಥಿಕ ನಷ್ಟ ಉಂಟು ಮಾಡಿದ್ದಾರೆ. ವ್ಯವಸ್ಥಾಪಕ ನಿರ್ದೇಶಕರು ಹಾಗೂ ಆಯಕಟ್ಟಿನ ಹುದ್ದೆಗಳಲ್ಲಿರುವ ಅಧಿಕಾರಿಗಳು ಬ್ರೋಕರೇಜ್ ಏಜೆನ್ಸಿಗಳ ಮೂಲಕ ವಿಮಾ ಕಂಪನಿಗಳಿಗೆ ಟೆಂಡರ್ ಕೊಟ್ಟು ಶೇ 15ರಷ್ಟು ಕಿಕ್‌ಬ್ಯಾಕ್ ಪಡೆದಿರುವ ಆರೋಪ ಕೇಳಿಬಂದಿದೆ. ವ್ಯವಸ್ಥಾಪಕ ನಿರ್ದೇಶಕರೇ ಕಿಕ್ಬ್ಯಾಕ್ನಲ್ಲಿ ಸಿಂಹಪಾಲು ಪಡೆದಿದ್ದಾರೆ ಎಂದು ಒಕ್ಕೂಟದ ಉನ್ನತ ಮೂಲಗಳು ಹೇಳಿವೆ. ಅಕ್ರಮದ ಸಂಬಂಧ ಎನ್.ನರಸಿಂಹಮೂರ್ತಿ ಎಂಬುವರು ಸುರೇಶ್ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದಾರೆ.
ಏಜೆನ್ಸಿಯೊಂದೇ ಹೆಸರಷ್ಟೇ ಬದಲು:
2022-23, 2023-24 ಹಾಗೂ 2024-25ನೇ ಹಣಕಾಸು ವರ್ಷದಲ್ಲಿ ಇದೇ ಮಾದರಿಯಲ್ಲಿ ಆಡಳಿತ ಮಂಡಳಿಯ ಗಮನಕ್ಕೆ ಬಾರದೆ ಮತ್ತು ಪೂರ್ವಾನುಮತಿ ಪಡೆಯದೆ ಬ್ರೋಕರೆಜ್ ಕಂಪನಿಗಳ ಮೂಲಕ ರಾಸುಗಳ ವಿಮೆ ಯೋಜನೆ ಜಾರಿಗೊಳಿಸಲಾಗಿದೆ. ಮೂರೂ ವರ್ಷವೂ ಹೈದರಾಬಾದ್ ಏಜೆನ್ಸಿಗಳ ಜತೆಯೇ ವ್ಯವಹಾರ ನಡೆಸಲಾಗಿದೆ. ಒಂದೇ ಬ್ರೋಕರೇಜ್ ಏಜೆನ್ಸಿಗೆ ಬೇರೆ ಬೇರೆ ಹೆಸರನಿಟ್ಟು ಅವ್ಯವಹಾರ ನಡೆಸಲಾಗಿದೆ.
ವಿಮೆ ಯಾವ ರೀತಿ?
ರಾಸುಗಳಿಗೆ 25 ಸಾವಿರ ರೂ.ನಿಂದ 80 ಸಾವಿರ ರೂ.ವರೆಗೆ ವಿಮೆ ಮಾಡಿಸಬಹುದು. ಪಶು ವೈದ್ಯರು ರಾಸುಗಳ ಮೌಲ್ಯ ನಿರ್ಣಯಿಸಿ ವಿಮಾ ಮೊತ್ತ ನಿಗದಿಪಡಿಸುತ್ತಾರೆ. ಇದರ ಆಧಾರದಲ್ಲಿ ವಿಮಾ ಕಂಪನಿಗಳು ವಿಮೆ ನೀಡಲಿವೆ. ವಿಮಾ ಕಂತಿನಲ್ಲಿ ಶೇ.50ರಷ್ಟನ್ನು ಒಕ್ಕೂಟ ಹಾಗೂ ಉಳಿದ ಶೇ.50ರಷ್ಟು ಕಂತನ್ನು ರಾಸುಗಳ ಮಾಲೀಕರು ಪಾವತಿಸಬೇಕು. ಆದರೆ, ಕಳೆದ ಮೂರು ವರ್ಷವೂ ಬ್ರೋಕರೆಜ್ ಕಂಪನಿಗಳ ಮೂಲಕ ವಿಮಾ ಪ್ರಕ್ರಿಯೆ ನಡೆದಿರುವುದರಿಂದ ವಿಮಾ ಕಂಪನಿಗಳು ಕಂತಿನಲ್ಲಿ ಶೇ.15ರಷ್ಟು ಏರಿಕೆ ಮಾಡಿವೆ.

