Thu. Mar 5th, 2026

ಎಲ್ಲಾ ತಾಯಂದಿರ ಆಶೀರ್ವಾದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಮೇಲಿರಲಿ: ಡಿಕೆ ಶಿವಕುಮಾರ್

Share this with Friends

ಬೆಂಗಳೂರು:ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಅಧಿಕಾರ ಹಸ್ತಾಂತರ ವಿಚಾರದ ಕುರಿತ ಬಿಸಿ ಬಿಸಿ ಚರ್ಚೆಯ ನಡುವೆ ರಾಜ್ಯದ ಎಲ್ಲಾ ತಾಯಂದಿರ ಆಶೀರ್ವಾದ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಮೇಲಿರಲಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅಚ್ಚರಿ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ.

ಅರಮನೆ ಮೈದಾನದಲ್ಲಿ ನಡೆದ ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳು ಹಾಗೂ ಅಂಗನವಾಡಿ ಕೇಂದ್ರಗಳ ಸ್ಥಾಪನೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,“ರಾಜ್ಯದಲ್ಲಿ ಮತ್ತೊಮ್ಮೆ ನಿಮ್ಮ ಸೇವೆಯನ್ನು ಮಾಡಲು ಅವಕಾಶ ಕಲ್ಪಿಸಿ ಕೊಡಬೇಕು. ಎಲ್ಲಾ ತಾಯಂದಿರ ಆಶೀರ್ವಾದ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಮೇಲಿರಲಿ. ಪ್ರತಿಯೊಬ್ಬರ ಮನೆಯ ದೀಪ ಬೆಳಗುವ ಕಾರ್ಯಕ್ರಮ ಕಾಂಗ್ರೆಸ್‌ ಸರ್ಕಾರ ಮಾಡಿದೆ, ಮಾಡಲಿದೆ” ಎಂದರು.

“ದೇವರು ವರ, ಶಾಪ ನೀಡುವುದಿಲ್ಲ. ಬದಲಾಗಿ ಅವಕಾಶ ನೀಡುತ್ತಾನೆ. ತಮಗೆ ಸಿಕ್ಕ ಅವಕಾಶದಲ್ಲಿ ಸಾಕಷ್ಟು ಜನಪರ ಕೆಲಸ ಮಾಡುತ್ತಿರುವ ಲಕ್ಷ್ಮಿ ಹೆಬ್ಬಾಳಕರ ಅವರು ಪ್ರಾರಂಭಿಸಿರುವ ಅಕ್ಕ ಪಡೆ ಹಾಗೂ ಗೃಹಲಕ್ಷ್ಮಿ ವಿವಿದ್ದೋದ್ದೇಶ ಸಹಕಾರ ಸಂಘ ಇತಿಹಾಸದಲ್ಲಿ ಮಾದರಿಯಾಗಿ ಉಳಿಯಲಿದೆ” ಎಂದರು.

“ಇಂದು ಸ್ತ್ರೀ ಶಕ್ತಿ ಸಂಘಗಳು ಸಮಾಜದ ಶಕ್ತಿಗಳಾಗಿ ಬೆಳೆದಿವೆ. ಇದರಿಂದ ಆರ್ಥಿಕವಾದ ಶಕ್ತಿ ಲಭಿಸಿದೆ. ತಮ್ಮ ಕುಟುಂಬಗಳನ್ನು ಸಲಹುತ್ತಿದ್ದಾರೆ. ಇಂತಹ ಶಕ್ತಿಯನ್ನು ಕಾಂಗ್ರೆಸ್‌ ಮಹಿಳೆಯರಿಗೆ ನೀಡಿದೆ. ಇಂತಹ ಯಶಸ್ವಿ ಕಾರ್ಯಕ್ರಮ ಇಡೀ ದೇಶದಲ್ಲಿ ಯಾರು ಮಾಡಿಲ್ಲ”.

“ವರದಕ್ಷಿಣೆ ನಿಷೇಧ, ಬಾಲ್ಯವಿವಾಹ ತಡೆ ಕಾಯ್ದೆ, ಈಗ ಅಕ್ಕ ಪಡೆ ಯೋಜನೆ ನೀಡಿದ್ದೇವೆ. ಮಹಿಳಾ ಪರವಾಗಿ  ಆಲೋಚಿಸದ ವಿಪಕ್ಷಗಳನ್ನು ನಾನು ಟೀಕೆ ಮಾಡುವುದಿಲ್ಲ. ನಂಬಿಕೆಗಿಂತ ದೊಡ್ಡ ದೇವರಿಲ್ಲ ಎಂದು ಸರ್ವಜ್ಞ ತನ್ನ ತ್ರಿಪದಿಯಲ್ಲಿ ಹೇಳುತ್ತಾನೆ. ಅದೇ ರೀತಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ವೇಳೆಯಲ್ಲಿ ನಮ್ಮ ತಾಯಂದಿರ ಮೇಲೆ ಅಪಾರವಾದ ನಂಬಿಕೆಯನ್ನು ಇಟ್ಟುಕೊಂಡು ಅನೇಕ ಮಹಿಳಾಪರವಾದ ಯೋಜನೆಗಳನ್ನು ಜಾರಿಗೆ ತಂದಿದೆ” ಎಂದರು.

ಮೋದಿಯವರ ಟೀಕೆಗಳನ್ನು ಸುಳ್ಳು ಮಾಡಿದ್ದೇವೆ; ಅವರು ನಮ್ಮ ಯೋಜನೆಗಳನ್ನು ನಕಲು ಮಾಡಿದ್ದಾರೆ

“ಗ್ಯಾರಂಟಿ ಯೋಜನೆಗಳನ್ನು ಸಾಕಾರಗೊಳಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿಯವರು ಟೀಕೆ ಮಾಡಿದರು. ಇಂದು 1.26 ಕೋಟಿ ಮಹಿಳೆಯರ ಖಾತೆಗೆ ನೇರವಾಗಿ ಹಣ ಹಾಕುತ್ತಿದ್ದೇವೆ. ಈಗ ಬಿಜೆಪಿಯವರು ಬೇರೆ, ಬೇರೆ ರಾಜ್ಯಗಳಲ್ಲಿ ನಮ್ಮ ಯೋಜನೆಗಳನ್ನು ನಕಲು ಮಾಡಿದ್ದಾರೆ. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಮ್ಮ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳಲ್ಲಿ ಮೂರು ಯೋಜನೆಗಳು ನೇರವಾಗಿ ಮಹಿಳೆಯರ ಬಲವನ್ನು ಹೆಚ್ಚಿಸಿದೆ. ಹೆಣ್ಣು ಕುಟುಂಬದ ಕಣ್ಣು ಎನ್ನುವ ಮಾತಿನ ಮೇಲೆ ನಂಬಿಕೆಯಿಟ್ಟು ಕೆಲಸ ಮಾಡುತ್ತಿದ್ದೇವೆ” ಎಂದರು.


Share this with Friends

Related Post