Sat. Nov 2nd, 2024

ಮಹಿಳೆಯರ ಯಶಸ್ಸಿಗೆ ಪುರುಷರೂ ಕಾರಣ: ಜಿಲ್ಲಾ ನ್ಯಾಯಾಧೀಶೆ ಬಿ.ಎಸ್. ಭಾರತಿ

Share this with Friends

ಚಾಮರಾಜನಗರ, ಮಾ.15: ದೇಶದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಹಲವಾರು ಮಹಿಳೆಯರ ಯಶಸ್ಸಿಗೆ ಪುರುಷರು ಸಹ ಕಾರಣ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಬಿ.ಎಸ್. ಭಾರತಿ ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರು ಕೂಡ ಉನ್ನತ ಶಿಕ್ಷಣ ಪಡೆದು ದೇಶದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಇತ್ತೀಚಿನ ಬೆಳವಣಿಗೆ.
ಮಹಿಳೆಯರ ಯಶಸ್ಸಿನ ಹಿಂದೆ ಸಾಕಷ್ಟು ಪುರುಷರ ಕಠಿಣ ಪರಿಶ್ರಮವಿದೆ. ಮಹಿಳೆಯರು ದಕ್ಷತೆ, ಪ್ರಾಮಾಣಿಕತೆ ಹಾಗೂ ನಿಷ್ಠೆಯಿಂದ ಸೇವೆ ಸಲ್ಲಿಸುವ ಮೂಲಕ ಮಹಿಳಾ ದಿನಾಚರಣೆಗೆ ಸಾರ್ಥಕತೆ ತಂದಿದ್ದಾರೆ ಎಂದು ಅವರು ತಿಳಿಸಿದರು.

ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಮಾತನಾಡಿ ಚಾಮರಾಜನಗರ ಸುಂದರವಾದ ಜಿಲ್ಲೆಯಾಗಿದ್ದು, ಇಲ್ಲಿ ಸೇವೆ ಸಲ್ಲಿಸುವ ಪುಣ್ಯದ ಕೆಲಸ ನಮ್ಮದಾಗಿದೆ ಎಂದರು.

ಜಿಲ್ಲೆಯಲ್ಲಿ ಹೆಚ್ಚಿನ ಮಹಿಳಾ ಅಧಿಕಾರಿಗಳಿದ್ದು, ಒಂದು ತಂಡವಾಗಿ ಸೇವೆ ಸಲ್ಲಿಸಿ ಜಿಲ್ಲೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ನ್ಯಾಯಾಂಗ ವ್ಯವಸ್ಥೆ ಸಮನ್ವಯದಿಂದ ಕೆಲಸ ಮಾಡಲಿವೆ ಎಂದು ತಿಳಿಸಿದರು.

ಜಿಲ್ಲಾ ವಕೀಲರ ಸಂಘದ ಆಧ್ಯಕ್ಷ ಉಮ್ಮತ್ತೂರು ಇಂದು ಶೇಖರ್ ಮಾತನಾಡಿ ಹೆಣ್ಣು ಸಹನಾಮಯಿ,ಸಹಜೀವನಕ್ಕೆ ಅವಳೇ ಮಾದರಿ, ಭಾರತ ಇಡೀ ಜಗತ್ತಿಗೆ ಉತ್ತಮ ಸಂಸ್ಕಾರವನ್ನು ನೀಡಿದ ದೇಶ. ಇದರಲ್ಲಿ ಮಹಿಳೆಯರ ಪಾಲು ಅಧಿಕವಾಗಿದೆ, ಆದರೂ ಇತ್ತಿಚೀನ ದಿನಗಳಲ್ಲಿ ಹೆಚ್ಚಿನ ವಿವಾಹ ವಿಚ್ಛೇದನಾ ಪ್ರಕರಣಗಳು ದಾಖಲಾಗುತ್ತಿದೆ. ಇದು ಅತಂಕಕಾರಿ ಸಂಗತಿ ಎಂದು ವಿಷಾದಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಕೊಳ್ಳೇಗಾಲ ಹೆಚ್ಚುವರಿ ಜಿಲ್ಲಾ ಸೆಷೆನ್ಸ್ ನ್ಯಾಯಾಧೀಶರಾದ ಎನ್.ಆರ್. ಲೋಕಪ್ಪ,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ಶ್ರೀಧರ ಮತ್ತಿತರರು ಹಾಜರಿದ್ದರು.

ಈ ವೇಳೆ ಜಿಲ್ಲೆಯ ಮಹಿಳಾ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ಅಲ್ಲದೆ ಸಾಂಸ್ಕೃತಿಕ ಸ್ಪರ್ಧೆ ಹಾಗೂ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.


Share this with Friends

Related Post