Fri. Mar 6th, 2026

ಮೆಟ್ರೋ ದರ ಏರಿಕೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ: ಡಿಸಿಎಂ ಡಿಕೆ ಶಿವಕುಮಾರ್

Share this with Friends

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣ ದರ ಪರಿಷ್ಕರಣೆಗೂ ರಾಜ್ಯ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ, ಇದು ನಮ್ಮ ವ್ಯಾಪ್ತಿಗೂ ಬರುವುದಿಲ್ಲ ನಮ್ಮೊಂದಿಗೆ ಯಾರೂ ಚರ್ಚೆಯನ್ನೂ ಮಾಡಿಲ್ಲ,ಕೇಂದ್ರ ಸರ್ಕಾರ ರಚಿಸಿರುವ ಸಮಿತಿ ಇದನ್ನೆಲ್ಲಾ ತೀರ್ಮಾನ ಮಾಡಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮೆಟ್ರೋ ದರ ಏರಿಕೆಗೆ ಸರ್ಕಾರ ಒಪ್ಪಿಗೆ ನೀಡಿದೆ ಎಂಬ ಸುದ್ದಿ ಹರಿದಾಡುತ್ತಿದೆ ಆದರೆ, “ನನ್ನ ಬಳಿಗೆ ಇನ್ನು ಯಾವುದೇ ಫೈಲ್ ಬಂದಿಲ್ಲ. ಕೇಂದ್ರ ಸರ್ಕಾರದ ಕಾರ್ಯದರ್ಶಿ, ಬಿಎಂಆರ್ ಸಿಎಲ್ ಮುಖ್ಯಸ್ಥರು ಎಂದು ಸಮಿತಿ ಇದೆ. ಅವರು ಬೆಲೆ ಏರಿಕೆ ತೀರ್ಮಾನ ಮಾಡಿದ್ದು, ನನಗೆ ಅಧಿಕೃತ ಮಾಹಿತಿ ಬಂದಿಲ್ಲ. ನಾನು ಮಾಧ್ಯಮಗಳಲ್ಲಿ ವರದಿ ನೋಡಿದ್ದೇನೆ” ಎಂದರು.

ಬಿಜೆಪಿಯವರು ರಾಜ್ಯ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿದ್ದಾರೆ, “ಅವರು ತಮ್ಮದೇ ಕೇಂದ್ರ ಸಚಿವರಿಗೆ ಈ ವಿಚಾರ ಹೇಳಬೇಕು. ಅವರು ಹೇಳಲು ಸಾಧ್ಯವೇ?”ಮೆಟ್ರೋ ದರ ಏರಿಕೆ ವಿಚಾರ ರಾಜ್ಯ ಸರ್ಕಾರದವರೆಗೆ ಬರುವುದಿಲ್ಲ. ಕೇಂದ್ರದ ಸಚಿವಲಯದ ಕಾರ್ಯದರ್ಶಿ ಈ ಸಮಿತಿಯ ಮುಖ್ಯಸ್ಥರು. ರಾಜ್ಯದಿಂದ ನಾಲ್ಕು ಜನ ಪ್ರತಿನಿಧಿ ಇದ್ದರೂ ತೀರ್ಮಾನ ಮಾಡುವುದು ಅವರೇ” ಎಂದು ತಿಳಿಸಿದರು.

ರಾಜ್ಯ ಸರ್ಕಾರ ಮನಸ್ಸು ಮಾಡಿದರೆ ಸಮಿತಿ ಸದಸ್ಯರನ್ನು ಬದಲಿಸಿ ದರ ನಿಯಂತ್ರಣ ಮಾಡಬಹುದು ಎಂಬ ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ. ಮೋಹನ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಹೇಗೆ ಬದಲಾವಣೆ ಮಾಡಲು ಸಾಧ್ಯ. ಅವರು ಕರ್ನಾಟಕದವರನ್ನೇ ಈ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲು ಅನುಮತಿ ಕೊಡಿಸಲಿ. ಕೇಂದ್ರ ಸರ್ಕಾರ ಮೆಟ್ರೋ ಯೋಜನೆಗೆ ನೀಡುವುದು ಕೇವಲ 12-13% ಮಾತ್ರ. ಕೇಂದ್ರದವರು ಅಧ್ಯಕ್ಷರಾಗಿರುತ್ತಾರೆ ಎಂದು ಈ ಹಿಂದೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಅವರು ನಮಗೆ ಅನುಮತಿ ಕೊಡಿಸಲಿ” ಎಂದು ತಿರುಗೇಟು ನೀಡಿದರು.

ಮೆಟ್ರೋ ದರ ಏರಿಕೆಗೆ ರಾಜ್ಯ ಸರ್ಕಾರದ ಒಪ್ಪಿಗೆ ಇಲ್ಲವೆ ಎಂದು ಕೇಳಿದಾಗ, “ಈ ವಿಚಾರ ನಮಗೆ ಸಂಬಂಧವಿಲ್ಲ. ಈ ಬಗ್ಗೆ ಅವರು ನಮ್ಮ ಜೊತೆ ಚರ್ಚೆ ಮಾಡಿಲ್ಲ. ಹೀಗಾಗಿ ನಾನು ಸಚಿವ ಸಂಪುಟದಲ್ಲಿ ಹಾಗೂ ಸಿಎಂ ಜೊತೆ ಈ ಬಗ್ಗೆ ಚರ್ಚೆ ಕೂಡ ಮಾಡಲು ಆಗಿಲ್ಲ” ಎಂದರು.

ಬೇರೆ ನಗರಗಳಿಗೆ ಹೋಲಿಕೆ ಮಾಡಿದರೆ ನಮ್ಮ ಮೆಟ್ರೋ ದರ ದುಬಾರಿ ಆಗಿಲ್ಲವೇ ಎಂದು ಕೇಳಿದಾಗ, “ನಾನು ಬೇರೆ ನಗರಗಳ ದರದ ಜೊತೆ ಹೋಲಿಕೆ ಮಾಡಿ ನೋಡುತ್ತೇನೆ” ಎಂದು ತಿಳಿಸಿದರು.

ನೀರಿನ ದರ ಏರಿಕೆ ಪ್ರಸ್ತಾಪ ಇದೆಯೇ ಎಂದು ಕೇಳಿದಾಗ, “ಸಧ್ಯಕ್ಕೆ ಆ ವಿಚಾರ ಚರ್ಚೆ ಇಲ್ಲ” ಎಂದು ತಿಳಿಸಿದರು.

ಜಿಬಿಎ ಚುನಾವಣೆ ವಾರ್ಡ್ ಮೀಸಲಾತಿ ಬಗ್ಗೆ ಕೇಳಿದಾಗ, “ಈ ಪ್ರಕ್ರಿಯೆಯನ್ನು ಅದಕ್ಕೆ ಆದ ಸಮಿತಿ ಮಾಡಲಿದೆ. ಆ ವಿಚಾರ ನಮ್ಮ ವ್ಯಾಪ್ತಿಗೆ ಬರುವುದಿಲ್ಲ” ಎಂದರು.

ಹೈಕಮಾಂಡ್ ನಾಯಕರು ಆದಷ್ಟು ಬೇಗ ಅಧಿಕಾರ ಹಂಚಿಕೆ ಇತ್ಯರ್ಥ ಮಾಡಬೇಕು ಎಂಬ ಶಾಸಕರು ಹಾಗೂ ಸತೀಶ್ ಜಾರಕಿಹೊಳಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಇಂದು ರಾಜಕೀಯ ಚರ್ಚೆ ಮಾಡುವುದು ಬೇಡ” ಎಂದರು.

ಕೆಲವು ಶಾಸಕರನ್ನು ವಿದೇಶಕ್ಕೆ, ಗೋವಾಕ್ಕೆ ಕಳುಹಿಸಲಾಗುತ್ತಿದೆಯೇ ಎಂದು ಕೇಳಿದಾಗ, “ನನಗೆ ಈ ವಿಚಾರ ಗೊತ್ತಿಲ್ಲ. ನಾನು ಈ ವಿಚಾರದಲ್ಲಿ ಭಾಗಿಯಾಗಿಲ್ಲ. ನನ್ನ ಬಳಿ ಯಾರೂ ಈ ವಿಚಾರ ಚರ್ಚೆ ಮಾಡಿಲ್ಲ” ಎಂದರು.

ದೆಹಲಿಗೆ ಹೋಗುತ್ತೀರಾ ಎಂದು ಕೇಳಿದಾಗ, “ನಾಳೆ ಮಂಗಳೂರಿಗೆ ಹೋಗುತ್ತಿದ್ದೇನೆ, ನಾಡಿದ್ದು ರಾಯಚೂರು, ನಂತರ ಗದಗಕ್ಕೆ ಹೋಗುತ್ತಿದ್ದೇನೆ. ದೆಹಲಿಗೆ ಹೋಗುವಾಗ ನಮ್ಮ ಕಾರ್ಯದರ್ಶಿಗಳು ಪ್ರವಾಸ ಪಟ್ಟಿ ಬಿಡುಗಡೆ ಮಾಡುತ್ತಾರೆ” ಎಂದರು.

ಸೂಕ್ತ ಸಮಯದಲ್ಲಿ ಕರೆಸಿ ಮಾತನಾಡಲಾಗುವುದು ಎಂಬ ಹೈಕಮಾಂಡ್ ನಾಯಕರು ಹೇಳಿದ್ದರು, ನೀವು ದೆಹಲಿ ಹೋಗುವ ನಿರೀಕ್ಷೆ ಇದೆಯೇ ಎಂದು ಕೇಳಿದಾಗ, “ನಾನು ದೆಹಲಿಗೆ ಹೋದರೆ, ನಿಮಗೆ ತಿಳಿಸಿಯೇ ಹೋಗುತ್ತೇನೆ” ಎಂದು ತಿಳಿಸಿದರು.

ನೀವು ಉತ್ತಮವಾಗಿ ವಾಲಿಬಾಲ್ ಆಡುತ್ತೀರಿ ಎಂದಾಗ, “ನಾನು ಶಾಲೆಯಲ್ಲಿದ್ದಾಗ ವಾಲಿಬಾಲ್ ಆಡುತ್ತಿದ್ದೆ, ಕ್ರಾಸ್ ಕಂಟ್ರಿ ಓಡುತ್ತಿದ್ದೆ, ಜಾವೆಲಿನ್ ಎಸೆತ, ಕಬ್ಬಡ್ಡಿ ಆಡುತ್ತಿದ್ದೆ” ಎಂದರು.


Share this with Friends

Related Post