ಬೆಂಗಳೂರು: ಸಿಲಿಕಾನ್ ಸಿಟಿ ಜನತೆ ಈಗಾಗಲೇ ಮೆಟ್ರೋ ದರ ಏರಿಕೆಯ ಬಿಸಿಯಿಂದ ತತ್ತರಿಸಿರುವ ಬೆನ್ನಲ್ಲೇ, ಎರಡನೇ ಬಾರಿಗೆ ದರ ಹೆಚ್ಚಿಸಲು ರಾಜ್ಯ ಸರ್ಕಾರ ಮತ್ತು ಬಿಎಂಆರ್‌ಸಿಎಲ್ (BMRCL) ಸಂಚು ರೂಪಿಸಿವೆ ಎಂದು ಸಂಸದ ತೇಜಸ್ವಿ ಸೂರ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೆಟ್ರೋ ದರ ಏರಿಕೆ ವಿಚಾರದಲ್ಲಿ ರಾಜ್ಯ ಸರ್ಕಾರ ಜನತೆಗೆ ಸತತವಾಗಿ ಸುಳ್ಳು ಮಾಹಿತಿ ನೀಡುತ್ತಿದೆ ಎಂದು ಆರೋಪಿಸಿದರು.
“ಮೆಟ್ರೋ ದರ ಏರಿಕೆಗೂ ನಮಗೂ ಸಂಬಂಧವಿಲ್ಲ, ಇದು ಕೇಂದ್ರ ಸರ್ಕಾರದ ತೀರ್ಮಾನ ಎಂದು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಆದರೆ ವಾಸ್ತವವೇ ಬೇರೆ,” ಎಂದು ಸೂರ್ಯ ಕಿಡಿಕಾರಿದರು.
ದರ ನಿಗದಿ ಸಮಿತಿ (Fare Fixation Committee) ರಚಿಸುವಂತೆ ರಾಜ್ಯ ಸರ್ಕಾರವು ಕೇಂದ್ರಕ್ಕೆ ಒಂದಲ್ಲ, ಎರಡಲ್ಲ, ಬರೋಬ್ಬರಿ ನಾಲ್ಕು ಬಾರಿ ಪತ್ರ ಬರೆದಿದೆ. ರಾಜ್ಯದ ಸತತ ಒತ್ತಾಯದ ನಂತರವೇ ಕೇಂದ್ರ ಸರ್ಕಾರ ಈ ಸಮಿತಿಯನ್ನು ರಚಿಸಿದೆಯೇ ಹೊರತು, ಸ್ವಯಂಪ್ರೇರಿತವಾಗಿ ಅಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯ ಸರ್ಕಾರದ್ದೇ ಜವಾಬ್ದಾರಿ: “ಬಿಎಂಆರ್‌ಸಿಎಲ್ ಎಂಬುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಯೋಜನೆಯಾಗಿದೆ (SPV). ಇವೆರಡರ ನಡುವಿನ ಒಪ್ಪಂದದ (MoU) ಪ್ರಕಾರ, ದರ ನಿಗದಿ ಮಾಡುವ ಪ್ರಾಥಮಿಕ ಜವಾಬ್ದಾರಿ ರಾಜ್ಯ ಸರ್ಕಾರದ್ದೇ ಆಗಿರುತ್ತದೆ,” ಎಂದು ಅವರು ವಿವರಿಸಿದರು.
ದೇಶದಲ್ಲೇ ಅತ್ಯಂತ ದುಬಾರಿ ಮೆಟ್ರೋ?
ಕಳೆದ ಬಾರಿ ಶೇ. 71 ರಷ್ಟು ದರ ಏರಿಕೆ ಮಾಡಿದ್ದರಿಂದಾಗಿ, ಕಳೆದ 8-10 ತಿಂಗಳಿನಿಂದ ಬೆಂಗಳೂರು ಮೆಟ್ರೋ ದೇಶದಲ್ಲೇ ಅತ್ಯಂತ ದುಬಾರಿ ಮೆಟ್ರೋ ಎಂಬ ಕುಖ್ಯಾತಿಗೆ ಒಳಗಾಗಿದೆ. ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುವ ಇಂತಹ ಕ್ರಮಗಳನ್ನು ಬಿಟ್ಟು, ಜನಸ್ನೇಹಿ ಆಡಳಿತ ನೀಡುವಂತೆ ಅವರು ಸರ್ಕಾರವನ್ನು ಒತ್ತಾಯಿಸಿದರು.

