ಬಳ್ಳಾರಿ,ಫೆ.18: ಬಳ್ಳಾರಿಯ
ಹರಗಿನಡೋಣಿ ಗ್ರಾಮದಲ್ಲಿ ಜಿಲ್ಲಾ ಉಸ್ತುವರಿ ಸಚಿವರಾದ ಬಿ.ನಾಗೇಂದ್ರ
ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಿದರು.
ಶಾಸಕರ ನಿಧಿಯಿಂದ 30 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕುಡಿಯುವ ನೀರಿನ ಯೋಜನೆಗೆ ಬಿ.ನಾಗೇಂದ್ರ ಚಾಲನೆ ನೀಡಿ ನೀರು ಬೊಗಸೆಯಲ್ಲಿ ಹಿಡಿದು ಖುಷಿ ಪಟ್ಟರು.
ಹಲವು ದಶಕಗಳ ಬೇಡಿಕೆಯಾಗಿದ್ದ ಈ ಕುಡಿಯುವ ನೀರಿನ ಯೋಜನೆಗೆ ಚಾಲನೆ ದೊರೆತಿರುವುದರಿಂದ ಗ್ರಾಮಸ್ಥರಲ್ಲಿ ಸಂಭ್ರಮ ಮನೆಮಾಡಿತ್ತು.
ಪೈಪ್‍ಲೈನ್ ಮೂಲಕ ನೀರು ಚುಮ್ಮಿದ ಕೂಡಲೇ ಸಚಿವರೊಂದಿಗೆ ಗ್ರಾಮಸ್ಥರು ಸಂಭ್ರಮಿಸಿದರು.
ಯೋಜನೆಗೆ ಚಾಲನೆ ನೀಡಿ ಮಾತನಾಡಿದ ನಾಗೇಂದ್ರ ಅವರು, ಶಾಸಕರ ಅನುದಾನದ ಅಡಿಯಲ್ಲಿ ಹರಗಿನ ಡೋಣಿ ಗಾಮಕ್ಕೆ ಅಲ್ಲಿಪುರ ಕೆರೆಯಿಂದ ಸುಮಾರು ಒಂಬತ್ತು ಕಿಲೋಮೀಟರ್ ಉದ್ದದ ಪೈಪ್ ಲೈನ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗಿದೆ. ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಯೋಜನೆಗೆ ಚಾಲನೆ ನೀಡಿರುವುದು ನನಗೆ ಸಂತಸ ತಂದಿದೆ ಎಂದು ಹೇಳಿದರು.
ಈ ಅತ್ಯಗತ್ಯ ಯೋಜನೆಯ ಈಡೇರಿಕೆಗೆ ಆಗ್ರಹಿಸಿ ಹರಗಿನಡೋಣಿ ಗ್ರಾಮಸ್ಥರು ಹಲವು ಬಾರಿ ಚುನಾವಣೆಗಳನ್ನು ಬಹಿಷ್ಕರಿಸುವ ಮೂಲಕ ಪ್ರತಿಭಟನೆ ನಡೆಸಿದ್ದನ್ನು ಸಚಿವ ನಾಗೇಂದ್ರ ಸ್ಮರಿಸಿದರು.
25ಕೋಟಿ ವೆಚ್ಚದಲ್ಲಿ ಗ್ರಾಮಕ್ಕೆ ಹೊಂದಿಕೊಂಡಂತೆ ಕುಡಿಯುವ ನೀರಿನ ಕೆರೆ ನಿರ್ಮಾಣ ಮಾಡುವ ಮೂಲಕ ದಶಗಳಿಂದ ಹರಗಿನಡೋಡಿ ಗ್ರಾಮ ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆಗೆ ಮುಂಬರುವ ವರ್ಷದೊಳಗೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದು ಎಂದು ಈ ವೇಳೆ ಸಚಿವರು ಭರವಸೆ ನೀಡಿದರು.