ಬೆಂಗಳೂರು: ಮಾಲೂರು ತಾಲ್ಲೂಕಿನ 184 ಹಳ್ಳಿಗಳ ದಶಕಗಳ ಕಾಲದ ಕುಡಿಯುವ ನೀರಿನ ಕನಸು ನನಸಾಗುವ ಕಾಲ ಹತ್ತಿರ ಬಂದಿದೆ. ಮಾರ್ಕಂಡಯ್ಯ ಜಲಾಶಯದಿಂದ ಈ ಗ್ರಾಮಗಳಿಗೆ ನೀರು ಪೂರೈಸುವ ಯೋಜನೆಯನ್ನು ಶೀಘ್ರವಾಗಿ ಜಾರಿಗೆ ತರಲು ಸರ್ಕಾರ ಬದ್ಧವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಮಾಲೂರು ಶಾಸಕ ಕೆ.ವೈ. ನಂಜೇಗೌಡ ಹಾಗೂ ಉನ್ನತ ಅಧಿಕಾರಿಗಳೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು. 2008ರಲ್ಲಿ ಆರಂಭವಾಗಿದ್ದ ಈ ಯೋಜನೆಯು ತಾಂತ್ರಿಕ ಹಾಗೂ ವಿವಿಧ ಕಾರಣಗಳಿಂದಾಗಿ ಅರ್ಧಕ್ಕೆ ನಿಂತಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಚಿವರು, ಯೋಜನೆಗೆ ಎದುರಾಗಿರುವ ಅಡೆತಡೆಗಳನ್ನು ನಿವಾರಿಸಿ ತಕ್ಷಣವೇ ಕಾಮಗಾರಿ ಮುಂದುವರಿಸಲು ಸೂಚಿಸಿದರು.
“ರಾಜ್ಯದ ಪ್ರತಿ ಹಳ್ಳಿಗೂ ಸುಸ್ಥಿರ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದು ನಮ್ಮ ಸರ್ಕಾರದ ಆದ್ಯತೆ. ಈ ನಿಟ್ಟಿನಲ್ಲಿ ಮಾಲೂರು ತಾಲ್ಲೂಕಿನ ಈ ಬೃಹತ್ ಯೋಜನೆಗೆ ಮರುಜೀವ ನೀಡಲಾಗುವುದು,” ಎಂದು ಸಚಿವರು ಭರವಸೆ ನೀಡಿದರು. ಅಲ್ಲದೆ, ಮುಂದಿನ ಸಭೆಯ ವೇಳೆಗೆ ಯೋಜನೆಯ ಸವಾಲುಗಳು ಮತ್ತು ಅವುಗಳಿಗೆ ಇರುವ ಪರಿಹಾರಗಳ ಕುರಿತು ಸಮಗ್ರ ವರದಿ ನೀಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಸಭೆಯಲ್ಲಿ ಇಲಾಖೆಯ ಅಧಿಕಾರಿಗಳಾದ ಸಮೀರ್ ಶುಕ್ಲ, ರಣದೀಪ್ ಡಿ, ಡಾ. ಅರುಂಧತಿದೇವಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

