ಮಂಗಳೂರು: ರಾಜ್ಯ ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸದ ಕುರಿತು ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿರುವ ಚರ್ಚೆಗಳಿಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಇಂದು ತೆರೆ ಎಳೆದಿದ್ದಾರೆ. “ಶಾಸಕರು ವಿದೇಶಕ್ಕೆ ಪ್ರವಾಸ ಹೋಗುವುದು ಅವರ ವೈಯಕ್ತಿಕ ನಿರ್ಧಾರ, ಇದರಲ್ಲಿ ಸರ್ಕಾರದ ಪಾತ್ರವಾಗಲಿ ಅಥವಾ ಪಕ್ಷದ ಒತ್ತಡವಾಗಲಿ ಇಲ್ಲ” ಎಂದು ಅವರು ಸ್ಪಷ್ಟಪಡಿಸಿದರು.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸ್ ಹೊರಠಾಣೆ ಉದ್ಘಾಟಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಸಕರ ಪ್ರವಾಸದ ಕುರಿತಾದ ಚರ್ಚೆ ನಡೆಯುತ್ತಿದೆ. “ಶಾಸಕರು ತಮ್ಮ ಸ್ವಂತ ಆಸಕ್ತಿಯಿಂದ ಪ್ರವಾಸಕ್ಕೆ ತೆರಳುತ್ತಿದ್ದಾರೆ. ಯಾರನ್ನೂ ಬಲವಂತವಾಗಿ ಕಳುಹಿಸುತ್ತಿಲ್ಲ ಅಥವಾ ಹೋಗಬೇಡಿ ಎಂದು ತಡೆಯುತ್ತಿಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಅವರದ್ದೇ ಆದ ನಿರ್ಧಾರ ತೆಗೆದುಕೊಳ್ಳುವ ಹಕ್ಕಿದೆ,” ಎಂದರು.
ಶಾಸಕರು ವಿದೇಶಕ್ಕೆ ತೆರಳುತ್ತಿರುವುದರಿಂದ ಮುಂಬರುವ ರಾಜ್ಯ ಬಜೆಟ್ ಸಿದ್ಧತೆಗೆ ಯಾವುದೇ ತೊಂದರೆಯಾಗುವುದಿಲ್ಲ. ಬಜೆಟ್ ಅನ್ನು ಮುಖ್ಯಮಂತ್ರಿಗಳು ಮತ್ತು ಹಣಕಾಸು ಇಲಾಖೆ ಸಿದ್ಧಪಡಿಸುತ್ತದೆ, ಇದರಲ್ಲಿ ಶಾಸಕರ ನೇರ ಪಾತ್ರವಿರುವುದಿಲ್ಲ,ಅಲ್ಲದೆ ಈ ಪ್ರವಾಸದಿಂದಾಗಿ ಪಕ್ಷದೊಳಗೆ ಯಾವುದೇ ಅಸಮಾಧಾನ ಅಥವಾ ಭಿನ್ನಮತ ಸೃಷ್ಟಿಯಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ದಕ್ಷಿಣ ಕನ್ನಡದಲ್ಲಿ ಕಾನೂನು ಸುವ್ಯವಸ್ಥೆ: ಕರಾವಳಿ ಭಾಗದಲ್ಲಿ ಕೋಮು ಘರ್ಷಣೆಗಳು ಮತ್ತು ಮಾದಕ ದ್ರವ್ಯಕ್ಕೆ ಸಂಬಂಧಿಸಿದ ಅಪರಾಧಗಳು ಗಣನೀಯವಾಗಿ ಕಡಿಮೆಯಾಗುತ್ತಿದ್ದು, ಶಾಂತಿಯುತ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಗೃಹ ಸಚಿವರು ಅಭಿಪ್ರಾಯಪಟ್ಟರು.
ಚಿಕ್ಕಮಗಳೂರು ಕಲ್ಲು ತೂರಾಟ ಪ್ರಕರಣ: ಚಿಕ್ಕಮಗಳೂರಿನಲ್ಲಿ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಸಂತ್ರಸ್ತರು ದಲಿತ ಸಮುದಾಯದವರಾದ ಕಾರಣ ಪಿಸಿಆರ್ (PCR) ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಲು ಸೂಚಿಸಲಾಗಿದೆ ಎಂದು ಹೇಳಿದರು.
ಪೊಲೀಸ್ ವಸತಿ ಯೋಜನೆ: ಮಂಗಳೂರಿನ ಪೊಲೀಸರಿಗೆ ಒಂದು ವರ್ಷದೊಳಗೆ 100 ನೂತನ ವಸತಿಗೃಹಗಳನ್ನು ನಿರ್ಮಿಸಿಕೊಡುವ ಭರವಸೆ ನೀಡಿದರು. 2030ರ ವೇಳೆಗೆ ಇಲಾಖೆಯ ಎಲ್ಲಾ ಸಿಬ್ಬಂದಿಗೆ ವಸತಿ ಸೌಲಭ್ಯ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದು ಅವರು ತಿಳಿಸಿದರು.
ದಲಿತ ಸಿಎಂ ಚರ್ಚೆ: ಸದ್ಯಕ್ಕೆ ಪಕ್ಷದಲ್ಲಿ ದಲಿತ ಮುಖ್ಯಮಂತ್ರಿ ಕುರಿತು ಯಾವುದೇ ಚರ್ಚೆ ನಡೆಯುತ್ತಿಲ್ಲ ಎಂದು ತಿಳಿಸಿದರು.

