Fri. Mar 6th, 2026

ಬೆಂಗಳೂರು ‘ಗ್ಯಾಸ್ ಚೇಂಬರ್’ ಆಗದಂತೆ ತಡೆಯಲು ಶಾಸಕರ ಸಭೆ: ಸಚಿವ ಈಶ್ವರ ಖಂಡ್ರೆ

Share this with Friends

ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಯ ಮಾದರಿಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ಕೂಡ ವಾಯುಮಾಲಿನ್ಯದ ಕೂಪವಾಗಿ ‘ಗ್ಯಾಸ್ ಚೇಂಬರ್’ ಆಗದಂತೆ ತಡೆಯಲು ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ನಗರದ ಎಲ್ಲಾ 28 ಶಾಸಕರ ವಿಶೇಷ ಸಭೆಯನ್ನು ಶೀಘ್ರವೇ ಹಮ್ಮಿಕೊಳ್ಳಲಾಗುವುದು ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.

ರಾಜಾಜಿನಗರ ಶಾಸಕ ಎಸ್. ಸುರೇಶ್ ಕುಮಾರ್ ಅವರ ಮನವಿ ಮೇರೆಗೆ ನಡೆದ ಉನ್ನತಾಧಿಕಾರಿಗಳ ಸಭೆಯಲ್ಲಿ ಸಚಿವರು ಈ ವಿಷಯ ತಿಳಿಸಿದರು. ನಗರದ ಪರಿಸರ ರಕ್ಷಣೆ ಕೇವಲ ಸರ್ಕಾರದ ಜವಾಬ್ದಾರಿಯಷ್ಟೇ ಅಲ್ಲ, ಇದಕ್ಕೆ ಪಕ್ಷಾತೀತವಾಗಿ ಎಲ್ಲಾ ಜನಪ್ರತಿನಿಧಿಗಳ ಸಹಕಾರ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.

ಮಕ್ಕಳ ಆರೋಗ್ಯದ ಬಗ್ಗೆ ಕಳವಳ:

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸುರೇಶ್ ಕುಮಾರ್ ಅವರು, “ರಸ್ತೆ ಧೂಳಿನಿಂದಾಗಿ ನಗರದ ವಾಯು ಗುಣಮಟ್ಟ ಕುಸಿಯುತ್ತಿದೆ. ಇದರಿಂದ ಮಕ್ಕಳಲ್ಲಿ ಉಸಿರಾಟದ ಸಮಸ್ಯೆ ಗಂಭೀರವಾಗುತ್ತಿದ್ದು, ವೈದ್ಯರು ನಗರ ಬಿಟ್ಟು ಹೊರವಲಯಕ್ಕೆ ತೆರಳುವಂತೆ ಪೋಷಕರಿಗೆ ಸಲಹೆ ನೀಡುತ್ತಿದ್ದಾರೆ. ಇದು ಅಪಾಯಕಾರಿ ಮುನ್ಸೂಚನೆ” ಎಂದು ಸಚಿವರ ಗಮನಕ್ಕೆ ತಂದರು.

ನೋಟಿಸ್ ನೀಡಲು ಸೂಚನೆ:

ಸಚಿವ ಈಶ್ವರ ಖಂಡ್ರೆ ಪ್ರತಿಕ್ರಿಯಿಸಿ, “ಬೆಂಗಳೂರಿನ 24 ವಿವಿಧ ಕೇಂದ್ರಗಳಲ್ಲಿ ವಾಯು ಗುಣಮಟ್ಟವನ್ನು ನಿರಂತರವಾಗಿ ಗಮನಿಸಲಾಗುತ್ತಿದೆ. ಯಾವುದೇ ಭಾಗದಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) 100ರ ಗಡಿ ದಾಟಿದರೆ, ತಕ್ಷಣವೇ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳಿಗೆ ನೋಟಿಸ್ ನೀಡಿ. ಸೂಚನೆ ನೀಡಿದ ನಂತರವೂ ಮಾಲಿನ್ಯ ನಿಯಂತ್ರಣಕ್ಕೆ ಬರದಿದ್ದರೆ ಅಂತಹ ಅಧಿಕಾರಿಗಳ ಮೇಲೆ ಕಾನೂನು ರೀತಿ ಮೊಕದ್ದಮೆ ದಾಖಲಿಸಿ” ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದರು.

ಪ್ಲಾಸ್ಟಿಕ್ ನಿಯಂತ್ರಣ ಮತ್ತು ರಸ್ತೆ ಧೂಳಿನ ನಿರ್ವಹಣೆಗೆ ಬಿಬಿಎಂಪಿಯೊಂದಿಗೆ ಸಮನ್ವಯ ಸಾಧಿಸಿ ಕೆಲಸ ಮಾಡುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಉದ್ಯಾನ ನಗರಿ ಬೆಂಗಳೂರು ದೆಹಲಿಯಂತೆ ‘ಗ್ಯಾಸ್ ಚೇಂಬರ್’ ಆಗುವುದನ್ನು ತಪ್ಪಿಸಲು ಮತ್ತು ನಗರದ ಪರಿಸರ ಸಮತೋಲನ ಕಾಪಾಡಲು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಗರದ ಎಲ್ಲಾ 28 ಶಾಸಕರು ಹಾಗೂ ಉನ್ನತಾಧಿಕಾರಿಗಳ ವಿಶೇಷ ಸಭೆ ಕರೆಯಲಾಗುವುದು ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.

ತ್ಯಾಜ್ಯ ಸಂಸ್ಕರಣೆಯ ವರದಿಗೆ ಗಡುವು:

ನಗರದ ಜಲಮೂಲಗಳು ಕಲುಷಿತಗೊಳ್ಳುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ ಸಚಿವರು, ರಾಜ್ಯದಲ್ಲಿರುವ ತ್ಯಾಜ್ಯ ಶುದ್ಧೀಕರಣ ಘಟಕಗಳ (STP) ಸ್ಥಿತಿಗತಿ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. “ಎಷ್ಟು ಘಟಕಗಳು ಕಾರ್ಯನಿರ್ವಹಿಸುತ್ತಿವೆ? ಎಷ್ಟು ಎಂ.ಎಲ್.ಡಿ. ದ್ರವ ತ್ಯಾಜ್ಯ ಸಂಸ್ಕರಣೆಯಾಗುತ್ತಿದೆ ಮತ್ತು ಎಷ್ಟು ನೀರು ಸಂಸ್ಕರಣೆಯಾಗದೆ ಜಲಮೂಲ ಸೇರುತ್ತಿದೆ ಎಂಬ ಬಗ್ಗೆ ಒಂದು ತಿಂಗಳೊಳಗೆ ಸಮಗ್ರ ವರದಿ ನೀಡಬೇಕು” ಎಂದು ಇಲಾಖಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಬಿಸಿಲ ಬೇಗೆಗೆ ಹಸಿರು ಹೊದಿಕೆ ಮದ್ದು:

“ಒಂದು ಕಾಲದಲ್ಲಿ ನಿವೃತ್ತರ ಸ್ವರ್ಗ ಹಾಗೂ ಹವಾನಿಯಂತ್ರಿತ ನಗರವೆಂದು ಪ್ರಖ್ಯಾತಿ ಪಡೆದಿದ್ದ ಬೆಂಗಳೂರಿನಲ್ಲಿ ಇಂದು ಬಿಸಿಲ ಬೇಗೆ ಹೆಚ್ಚುತ್ತಿದೆ. ಜಾಗತಿಕ ತಾಪಮಾನ ಏರಿಕೆಯ ಪರಿಣಾಮ ನಗರದ ಮೇಲಾಗುತ್ತಿದೆ. ಇದನ್ನು ತಡೆಯಲು ಹಸಿರು ಹೊದಿಕೆಯನ್ನು ಹೆಚ್ಚಿಸುವುದು ಮತ್ತು ವಾಯು ಗುಣಮಟ್ಟವನ್ನು ಸುಧಾರಿಸುವುದು ನಮ್ಮ ಮೊದಲ ಆದ್ಯತೆ” ಎಂದು ಸಚಿವರು ವಿವರಿಸಿದರು.

ಪ್ಲಾಸ್ಟಿಕ್ ನಿಯಂತ್ರಣಕ್ಕೆ ಜಾಗೃತ ದಳ:

ಏಕಬಳಕೆಯ ಪ್ಲಾಸ್ಟಿಕ್ ಪಿಡುಗನ್ನು ಹೋಗಲಾಡಿಸಲು ಕೇವಲ ಕಾನೂನು ಸಾಲದು, ಜನಜಾಗೃತಿ ಅತ್ಯಗತ್ಯ ಎಂದ ಅವರು, ಸ್ಥಳೀಯ ಸಂಸ್ಥೆಗಳ ಸಹಯೋಗದೊಂದಿಗೆ ವಿಶೇಷ ‘ಜಾಗೃತ ದಳ’ ರಚಿಸಿ ನಿರಂತರ ನಿಗಾ ವಹಿಸಲು ನಿರ್ದೇಶನ ನೀಡಿದರು.

ಸಭೆಯಲ್ಲಿ ವಾಯು ಮತ್ತು ಜಲ ಕಾಯಿದೆಗಳಡಿ ಮಾಲಿನ್ಯ ನಿಯಂತ್ರಣಕ್ಕೆ ಕೈಗೊಳ್ಳಲಾದ ಕಾನೂನು ಕ್ರಮಗಳ ಬಗ್ಗೆಯೂ ಸುದೀರ್ಘ ಚರ್ಚೆ ನಡೆಸಲಾಯಿತು.


Share this with Friends

Related Post