ಮೈಸೂರು, ಏ.13: ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಮೈಸೂರಿಗೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ನಾಳೆ ಸಂಜೆ 4 ಗಂಟೆಗೆ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಮೋದಿಯವರು ಭಾಷಣ ಮಾಡಲಿದ್ದಾರೆ.
ಮೋದಿ ಆಗಮಿಸುವ ರಸ್ತೆಗಳು ಹಾಗೂ ಮಹಾರಾಜ ಕಾಲೇಜು ಸುತ್ತ,ಮುತ್ತ ಭಾರೀ ಬಂದೋಬಸ್ತ್ ಮಾಡಲಾಗಿದೆ, ಇಂದು ಬೆಳಗಿನಿಂದಲೇ ಹಿರಿಯ ಪೊಲೀಸ್ ಅಧಿಕಾರಿಗಳು ಗಸ್ತು ತಿರುಗಿ ಭದ್ರತೆಯನ್ನು ಪರಿಶೀಲಿಸಿದರು.
ಮಧ್ಯಪ್ರದೇಶದಿಂದ ನೇರ ಮೈಸೂರಿಗೆ ಆಗಮಿಸಲಿರುವ ಪ್ರಧಾನಿ, ಮಹಾರಾಜ ಕಾಲೇಜು ಮೈದಾನದಲ್ಲಿ ಕಾರ್ಯಕರ್ತರನ್ನು ದ್ದೇಶಿಸಿ ಮಾತನಾಡುವರು.
ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳ ಪರ ಮತಯಾಚಿಸಲಿರುವರು. ವೇದಿಕೆಯಲ್ಲಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಹಾಗೂ ಅಭ್ಯರ್ಥಿಗಳಾದ ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್, ಎಚ್. ಡಿ ಕುಮಾರಸ್ವಾಮಿ, ಎಸ್ ಬಾಲರಾಜ್, ಪ್ರಜ್ವಲ್ ರೇವಣ್ಣ ಸೇರಿದಂತೆ ಅನೇಕ ಮುಖಂಡರು ಪಾಲ್ಗೊಳ್ಳುವರು.
ಮಹಾರಾಜ ಕಾಲೇಜು ಮೈದಾನದಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲೇ ಬಿಜೆಪಿ ಜೆಡಿಎಸ್ ಸಮಾವೇಶ ನಡೆಯುತ್ತಿರುವುದರಿಂದ ಮೈತ್ರಿ ಪಕ್ಷಗಳ ಕಾರ್ಯಕರ್ತರು ಮುಖಂಡರ ಉತ್ಸಾಹ ಮೇರೆ ಮೀರಿದೆ.
ಸುಮಾರು ಒಂದು ಗಂಟೆ ಅಂದರೆ4 ಯಿಂದ 5 ವರೆಗೆ ಮೋದಿ ಪ್ರಚಾರ ಭಾಷಣ ಮಾಡಲಿದ್ದು ನಂತರ ಮಂಗಳೂರಿಗೆ ತೆರಳಿ ಅಲ್ಲಿ ರೋಡ್ ಷನಲ್ಲಿ ಪಾಲ್ಗೊಳ್ಳುವರು.