ಮೈಸೂರು, ಏ.14: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ, ಮೈಸೂರಿನಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿಯವರು ಅಬ್ಬರದ ಭಾಷಣ ಮಾಡಿದರು.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಏರ್ಪಡಿಸಲಾಗಿದ್ದ ಬಿಜೆಪಿ ಜೆಡಿಎಸ್ ಮೈತ್ರಿ ಸಮಾವೇಶದಲ್ಲಿ ಮೋದಿ ಪಾಲ್ಗೊಂಡರು.
ಹೆಲಿಕಾಪ್ಟರ್ ನಲ್ಲಿ ಬಂದಿಳಿದ ಮೋದಿ ಅವರನ್ನು ಬಿಜೆಪಿಯ ಘಟಾನುಘಟಿ ನಾಯಕರುಗಳು ಭವ್ಯ ಮತ್ತು ಆತ್ಮೀಯ ಸ್ವಾಗತ ನೀಡಿ ಬರಮಾಡಿಕೊಂಡರು.
ನಂತರ ರಸ್ತೆ ಮಾರ್ಗವಾಗಿ ಮಹಾರಾಜ ಕಾಲೇಜು ಮೈದಾನವನ್ನು ಮೋದಿ ತಲುಪಿದರು.
ಮೋದಿಯವರು ವೇದಿಕೆಗೆ ಸಮೀಸುತ್ತಿದ್ದಂತೆ ಎಲ್ಲೆಲ್ಲೂ ಮೋದಿ,ಮೋದಿ ಎಂಬ ಜಯಕಾರ ಮೊಳಗಿತು.ಮೋದಿ ವೇದಿಕೆಗೆ ಆಗಮಿಸುತ್ತಿದ್ದಂತೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರಿಗೆ ನಮಸ್ಕರಿಸಿದರು.
ನಂತರ ವೇದಿಕೆಯಲ್ಲಿ ಹಾಜರಿದ್ದ ಮಾಜಿ ಮುಖ್ಯಮಂತ್ರಿಬಿ.ಎಸ್.ಯಡಿಯೂರಪ್ಪ,
ಎಸ್.ಎ.ರಾಮದಾಸ್,ಪ್ರತಾಪ್ ಸಿಂಹ,ಜಿ.ಟಿ.ದೇವೇಗೌಡ ಹಾಗೂ ನಾಲಕ್ಕೂ ಕ್ಷೇತ್ರಗಳ ಅಭ್ಯರ್ಥಿಗಳಾದ ಹೆಚ್. ಡಿ ಕುಮಾರಸ್ವಾಮಿ, ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್,ಪ್ರಜ್ವಲ್ ರೇವಣ್ಣ,ಬಾಲರಾಜ್ ಮೋದಿಯವರಿಗೆ ನಮಸ್ಕರಿಸಿದರು.
ಒಂದೇ ವೇದಿಕೆಯಲ್ಲಿ ಪ್ರಧಾನಿ ನಾಲ್ಕು ಕ್ಷೇತ್ರಗಳ ಎನ್‌ಡಿಎ ಅಭ್ಯರ್ಥಿಗಳ ಪರ ಮತ ಭೇಟೆ ಮಾಡಿದ್ದು ವಿಶೇಷವಾಗಿತ್ತು.
ವೇದಿಕೆಯಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಪ್ರಧಾನಿ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಂಡರು.
ಈ ವೇಳೆ ಮೋದಿ ಅವರಿಗೆ ಮೈಸೂರು ಪೇಟ ತೊಡಿಸಿ ಶಾಲು ಹೊದಿಸಿ ಗೌರವಿಸಲಾಯಿತು.
ನಂತರ ಎಚ್ ಡಿ ದೇವೇಗೌಡರು ಮಾತನಾಡಿ ಕಾಂಗ್ರೆಸ್ ನ ಗ್ಯಾರಂಟಿಗಳನ್ನು ಟೀಕಿಸಿದರು ಮತ್ತು ಕಾಂಗ್ರೆಸ್ ನಿಂದ ತಮ್ಮ ಪಕ್ಷಕ್ಕೆ ಆದ ಅನ್ಯಾಯಗಳನ್ನು ಬಿಡಿಸಿಟ್ಟರು.
ನರೇಂದ್ರ ಮೋದಿ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮೈಸೂರಿನ ಜನರಿಗೆ ನಮಸ್ಕಾರ ಎಂದು ಭಾಷಣ ಪ್ರಾರಂಭಿಸಿದರು. ಆಗ ಎಲ್ಲೆಲ್ಲೂ ಚಪ್ಪಾಳೆ, ಶಿಳ್ಳೆ, ಹರ್ಷೋದ್ಗಾರ ಮೊಳಗಿತು.
ಈ ಮೋದಿ ಇರುವ ತನಕ ದೇಶದ ಜನತೆ ಭಯಪಡುವಂತಿಲ್ಲ ನಾನು ಸದಾ ನಿಮಗಾಗಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು. ಇದೇ ವೇಳೆ ಕಾಂಗ್ರೆಸ್ ಕುರಿತು ಮೋದಿ ಟೀಕಾ ಪ್ರಹಾರ ಕೂಡ ನಡೆಸಿದರು.
ನಮ್ಮ ಎನ್ ಡಿಎ ಅಭ್ಯರ್ಥಿಗಳನ್ನು ಬಹುಮತದಿಂದ ಗೆಲ್ಲಿಸಿ ಕೊಡಬೇಕೆಂದೂ ನಾವು ನಿಮ್ಮೆಲ್ಲರಿಗಾಗಿ ಶ್ರಮಿಸುತ್ತೇವೆ ಎಂದು ಮೋದಿ ಭರವಸೆ ನೀಡಿದರು.