Sun. Mar 8th, 2026

ಮೋದಿ ವಿದೇಶಾಂಗ ನೀತಿಯಿಂದ ದೇಶದ ಗೌರವಕ್ಕೆ ಧಕ್ಕೆ: ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

Share this with Friends

ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಅವರ ದೋಷಪೂರಿತ ವಿದೇಶಾಂಗ ನೀತಿಯಿಂದಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಘನತೆಗೆ ಧಕ್ಕೆಯಾಗುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಚಿತ್ತಾಪುರ ಪಟ್ಟಣದಲ್ಲಿ ಭಾನುವಾರ ಸುಮಾರು 1069 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದ  ಅವರು,”ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸ್ನೇಹದ ಹೆಸರಿನಲ್ಲಿ ಮೋದಿ ದೇಶದ ಹಿತಾಸಕ್ತಿಯನ್ನು ಅಡವಿಟ್ಟಿದ್ದಾರೆ. ರಷ್ಯಾದಿಂದ ತೈಲ ಖರೀದಿಸಲು ಅಮೆರಿಕ ಕೇವಲ ಒಂದು ತಿಂಗಳ ಕಾಲಾವಕಾಶ ನೀಡಿದೆ. ಅಮೆರಿಕದ ಸೂಚನೆಯಂತೆ ಮೋದಿ ನಡೆಯುತ್ತಿರುವುದು ದುರದೃಷ್ಟಕರ. ಟ್ರಂಪ್ ಅವರು ಭಾರತದ ಉತ್ಪನ್ನಗಳ ಮೇಲೆ ತೆರಿಗೆ ಹೇರುವುದಾಗಿ ಬೆದರಿಕೆ ಹಾಕುತ್ತಿದ್ದರೂ ಮೋದಿ ಮೌನ ವಹಿಸಿದ್ದಾರೆ. ‘ಎಪ್ಸ್ಟೀನ್ ಫೈಲ್ಸ್’ನಲ್ಲಿರುವ ಮಾಹಿತಿಯನ್ನು ಬಳಸಿ ಟ್ರಂಪ್ ಅವರು ಮೋದಿಯವರನ್ನು ನಿಯಂತ್ರಿಸುತ್ತಿರುವ ಸಾಧ್ಯತೆಯಿದೆ” ಎಂದು ಖರ್ಗೆ ಗಂಭೀರ ಆರೋಪ ಮಾಡಿದರು.

ವಿಶ್ವಶಾಂತಿಗೆ ಭಂಗ:

ಮಧ್ಯಪ್ರಾಚ್ಯದ ಸಂಘರ್ಷದ ಕುರಿತು ಪ್ರಸ್ತಾಪಿಸಿದ ಅವರು, “ನೆಹರೂ ಕಾಲದ ಅಲಿಪ್ತ ನೀತಿ ವಿಶ್ವಶಾಂತಿಗೆ ಪೂರಕವಾಗಿತ್ತು. ಆದರೆ ಮೋದಿಯವರ ಇಸ್ರೇಲ್ ಭೇಟಿಯ ನಂತರ ಇರಾನ್ ಮೇಲೆ ಬಾಂಬ್ ದಾಳಿ ನಡೆದಿದೆ. ಇರಾನ್ ಮುಖ್ಯಸ್ಥರ ಹತ್ಯೆಯಾದಾಗ ಅಂತಹ ದೇಶಗಳು ಶಾಂತಿಯಿಂದ ಇರಲು ಸಾಧ್ಯವೇ? ಮೋದಿಯವರ ಇಂತಹ ನಡೆಗಳು ಜಾಗತಿಕ ಅಶಾಂತಿಗೆ ಕಾರಣವಾಗುತ್ತಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

75 ವರ್ಷಗಳ ಪರಂಪರೆ ಎಲ್ಲಿ?:

ಕಾಂಗ್ರೆಸ್ ಆಡಳಿತದ 75 ವರ್ಷಗಳಲ್ಲಿ ದೇಶದ ಸಾರ್ವಭೌಮತ್ವಕ್ಕೆ ಯಾರೂ ಧಕ್ಕೆ ತಂದಿರಲಿಲ್ಲ. ಅಂದು ಪಾಕಿಸ್ತಾನವನ್ನು ವಿಭಜಿಸುವ ಧೈರ್ಯವನ್ನು ಕಾಂಗ್ರೆಸ್ ಸರ್ಕಾರ ತೋರಿತ್ತು. ಆದರೆ ಈಗಿನ ಬಿಜೆಪಿ ನಾಯಕರಿಗೆ ಅಂತಹ ಬದ್ಧತೆ ಇಲ್ಲ. ಕೇವಲ ರಾಜ್ಯ ಸರ್ಕಾರದ ಮೇಲೆ ಟೀಕೆ ಮಾಡುವುದೇ ಅವರ ಕೆಲಸವಾಗಿದೆ ಎಂದು ಅವರು ಗುಡುಗಿದರು.

ಸ್ವಾತಂತ್ರ್ಯಕ್ಕೆ ಹನಿ ರಕ್ತ ಸುರಿಸದವರು ನಮ್ಮನ್ನು ಟೀಕಿಸುತ್ತಿದ್ದಾರೆ: 

 “ದೇಶದ ಸ್ವಾತಂತ್ರ್ಯಕ್ಕಾಗಿ ಒಂದು ಹನಿ ರಕ್ತವನ್ನೂ ಹರಿಸದ ಬಿಜೆಪಿ ಮತ್ತು ಆರ್ಎಸ್ಎಸ್ ನಾಯಕರು ಇಂದು ಕಾಂಗ್ರೆಸ್ ನಾಯಕರನ್ನು ಟೀಕಿಸುವುದನ್ನೇ ಕೆಲಸ ಮಾಡಿಕೊಂಡಿದ್ದಾರೆ” ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ವಾಗ್ದಾಳಿ ನಡೆಸಿ ಬಿಜೆಪಿಯ ದ್ವೇಷದ ರಾಜಕಾರಣ ಮತ್ತು ಪ್ರಾದೇಶಿಕ ಅಭಿವೃದ್ಧಿಯಲ್ಲಿನ ಅವರ ವಿಫಲತೆಯನ್ನು ಅಂಕಿಅಂಶಗಳ ಸಮೇತ ಬಿಚ್ಚಿಟ್ಟರು.

ಬಿಜೆಪಿಗೆ ಬೈಯ್ಯುವುದೇ ಕೆಲಸ:

“ಬಿಜೆಪಿ ನಾಯಕರಿಗೆ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾತನಾಡುವ ಬದಲು ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅಥವಾ ನನಗೆ ಬೈಯ್ಯುವುದೇ ದಿನನಿತ್ಯದ ಕಾಯಕವಾಗಿದೆ. ಆದರೆ, ಜಿಲ್ಲೆಯ ಗದಗ-ವಾಡಿ ರೈಲ್ವೆ ಲೈನ್ ಆಗಲಿ, ಪ್ರಮುಖ ಹೆದ್ದಾರಿಗಳಾಗಲಿ ನಿರ್ಮಾಣವಾಗಿದ್ದು ಕಾಂಗ್ರೆಸ್ ಅವಧಿಯಲ್ಲಿ ಎನ್ನುವುದನ್ನು ಅವರು ಮರೆಯಬಾರದು” ಎಂದು ತಿರುಗೇಟು ನೀಡಿದರು.

ಆರ್ಟಿಕಲ್ 371(ಜೆ) ಹೋರಾಟದ ಸ್ಮರಣೆ:

ಕಲ್ಯಾಣ ಕರ್ನಾಟಕದ ಭಾಗ್ಯದ ಬಾಗಿಲು ತೆರೆದ ಆರ್ಟಿಕಲ್ 371(ಜೆ) ಜಾರಿ ಬಗ್ಗೆ ಮಾತನಾಡಿದ ಅವರು, “ಅಂದು ಗೃಹ ಸಚಿವರಾಗಿದ್ದ ಅಡ್ವಾಣಿಯವರು ನಮ್ಮ ಬೇಡಿಕೆಗೆ ಸ್ಪಂದಿಸಿರಲಿಲ್ಲ. ಅಂತಹ ಸಂದರ್ಭದಲ್ಲಿ 130 ಸಂಸದರನ್ನು ಒಪ್ಪಿಸಿ ಈ ಕಾಯ್ದೆ ಜಾರಿಗೆ ತರಲು ನಾನು ಪಟ್ಟ ಶ್ರಮ ನನಗೆ ಮಾತ್ರ ಗೊತ್ತು. ಇದು ನನ್ನ ಮಕ್ಕಳಿಗಾಗಿ ತಂದಿದ್ದಲ್ಲ, ಈ ಭಾಗದ ಬಡ ವಿದ್ಯಾರ್ಥಿಗಳಿಗೆ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಸೀಟುಗಳು ಸಿಗಲಿ ಎಂಬ ಕಾರಣಕ್ಕೆ ತಂದಿದ್ದು” ಎಂದರು.

ವಿಮಾನ ನಿಲ್ದಾಣ ಬಂದ್ ಕುರಿತು ಆಕ್ರೋಶ:

“ಕಲಬುರಗಿ ವಿಮಾನ ನಿಲ್ದಾಣಕ್ಕಾಗಿ ಶ್ರೀನಿವಾಸ ಸರಡಗಿ ಗ್ರಾಮದ ರೈತರು 1000 ಎಕರೆ ಭೂಮಿ ನೀಡಿದ್ದಾರೆ. ಅವರಿಗೆ ನಾನು ನಮಸ್ಕರಿಸುತ್ತೇನೆ. ಆದರೆ, ಖರ್ಗೆ ಅವರು ಹೆಚ್ಚಾಗಿ ಓಡಾಡುತ್ತಾರೆ ಎಂಬ ಅಸೂಯೆಯಿಂದ ಇಲ್ಲಿನ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಅಸ್ತವ್ಯಸ್ತಗೊಳಿಸಲಾಗುತ್ತಿದೆ. ನಾನು ದಿನಾಲೂ ಇಲ್ಲಿಗೆ ಬರುತ್ತೇನಾ?” ಎಂದು ಪ್ರಶ್ನಿಸಿದ ಅವರು, ಅಭಿವೃದ್ಧಿಯಲ್ಲಿ ರಾಜಕೀಯ ಮಾಡದಂತೆ ಎಚ್ಚರಿಸಿದರು.

ಯುವಜನತೆ ಎಚ್ಚೆತ್ತುಕೊಳ್ಳಲಿ:

ಬಿಜೆಪಿ ಸರ್ಕಾರ ಯುವಕರಲ್ಲಿ ದ್ವೇಷ ಬಿತ್ತುತ್ತಿದೆ ಎಂದು ಆರೋಪಿಸಿದ ಖರ್ಗೆ, “ಬಡವರ ಮತ್ತು ಯುವಕರ ಭವಿಷ್ಯ ಉಜ್ವಲವಾಗಬೇಕಾದರೆ ಹೊಸ ಯೋಜನೆಗಳು ಬರಬೇಕು. ಆದರೆ ಇವರು ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ, ಅವರಿಗೆ ನಿಮ್ಮ ಬೆಂಬಲ ಸದಾ ಇರಲಿ” ಎಂದು ಮನವಿ ಮಾಡಿದರು. ಇದೇ ವೇಳೆ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಅವರ ರಾಷ್ಟ್ರೀಯ ಮಟ್ಟದ ಧ್ವನಿಯನ್ನು ಶ್ಲಾಘಿಸಿದ ಅವರು, ಕಾಂಗ್ರೆಸ್ ಇನ್ನು 20 ಸೀಟು ಗೆದ್ದಿದ್ದರೆ ಮೋದಿ ಅಧಿಕಾರಕ್ಕೆ ಬರುತ್ತಿರಲಿಲ್ಲ ಎಂದು ವಿಷಾದಿಸಿದರು.


Share this with Friends

Related Post