ಮುಂಡುಗೊಡು: ಮುಂದಿನ ಶೈಕ್ಷಣಿಕ ವರ್ಷದಿಂದ ನೈತಿಕ ಶಿಕ್ಷಣ (Moral Science)ವನ್ನು ಕಡ್ಡಾಯ ವಿಷಯವಾಗಿ ಜಾರಿಗೆ ತರಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಮುಂಡಗೋಡಿನ ಟಿಬೆಟಿಯನ್ ಕಾಲನಿಯಲ್ಲಿರುವ ಗಾಡೆನ್ ಶಾರ್ಟ್ಸೆ ಥೋಸೆಸಂ ನಾರ್ಲಿಂಗ್ ಶಾಲೆಯ ಸ್ಥಾಪನೆಯ 55ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು,ಕರ್ನಾಟಕ ಸರ್ಕಾರದ ಶಿಕ್ಷಣ ಕ್ಷೇತ್ರದ ಬದ್ಧತೆಯನ್ನು ವಿವರಿಸಿದರು, ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟ, ಮೊಟ್ಟೆ, ಹಾಲು, ರಾಗಿ ಮಾಲ್ಟ್, ಉಚಿತ ಪಠ್ಯಪುಸ್ತಕ, ನೋಟುಪುಸ್ತಕ, ಯೂನಿಫಾರ್ಮ್, ಶೂ ಹಾಗೂ ಸಾಕ್ಸ್‌ಗಳನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು. ರಾಜ್ಯದ ಶಿಕ್ಷಣ ವ್ಯವಸ್ಥೆಯಡಿ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳನ್ನು ಸೇರಿಸಿ ಸುಮಾರು 1.16 ಕೋಟಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ ಎಂದರು.
ಮುಂದಿನ ಶೈಕ್ಷಣಿಕ ವರ್ಷದಿಂದ ನೈತಿಕ ಶಿಕ್ಷಣ (Moral Science)ವನ್ನು ಕಡ್ಡಾಯ ವಿಷಯವಾಗಿ ಜಾರಿಗೆ ತರಲಾಗುವುದು ಎಂದು ಪುನರುಚ್ಚರಿಸಿದ ಅವರು, ಇದು ಮಾನವೀಯ ಮೌಲ್ಯಗಳು, ಆರೋಗ್ಯ, ಪರಿಸರ ಜಾಗೃತಿ, ಸಂಚಾರ ಶಿಸ್ತು ಮತ್ತು ನಾಗರಿಕ ಜವಾಬ್ದಾರಿಯನ್ನು ಬೆಳೆಸಲಿದೆ ಎಂದರು.
ಶಿಕ್ಷಣವು ಭಾಷೆ, ಧರ್ಮ, ರಾಜ್ಯ ಅಥವಾ ದೇಶದ ಗಡಿಗಳನ್ನು ಮೀರಿ ಸಾಗುವ ಶಕ್ತಿಯಾಗಿದೆ ಎಂದು ಹೇಳಿದ ಅವರು, ಶಾಂತಿ ಮತ್ತು ಅಭಿವೃದ್ಧಿಗೆ ಶಿಕ್ಷಣ ಹಾಗೂ ಮಾನವೀಯ ಮೌಲ್ಯಗಳು ಅತ್ಯಗತ್ಯವೆಂದು ಹೇಳಿದರು.
ಕಾರ್ಯಕ್ರಮದ ವೇಳೆ 14ನೇ ದಲೈ ಲಾಮಾ ಅವರ ಆಶೀರ್ವಾದವನ್ನು ಸ್ಮರಿಸಿ, ಭಿಕ್ಷುಗಳು, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಗಣ್ಯರಿಗೆ ಸಚಿವರು ಶುಭಾಶಯಗಳನ್ನು ತಿಳಿಸಿದ ಸಚಿವರು,ಟಿಬೆಟಿಯನ್ ಸಮುದಾಯದೊಂದಿಗೆ ಕರ್ನಾಟಕ ಸರ್ಕಾರ ಸದಾ ನಿಂತಿದೆ ಎಂದು ಭರವಸೆ ನೀಡಿ, ಮಕ್ಕಳಿಗೆ ಉತ್ತಮ ಆರೋಗ್ಯ, ಶಿಕ್ಷಣ ಹಾಗೂ ಮಾನವೀಯ ಮೌಲ್ಯಗಳಿಂದ ಕೂಡಿದ ಭವಿಷ್ಯವನ್ನು ಹಾರೈಸಿದರು.
ಈ ಸಂದರ್ಭದಲ್ಲಿ ಮಧು ಬಂಗಾರಪ್ಪ ಅವರು ಗಣ್ಯ ಅಧಿಕಾರಿಗಳು, ಶಿಕ್ಷಕರು ಹಾಗೂ ಸಹಕಾರಿಗಳಿಗೆ ಗೌರವ ಪ್ರಮಾಣಪತ್ರಗಳನ್ನು ಪ್ರದಾನ ಮಾಡಿದರು.

