ಚಾಮರಾಜನಗರ, ಏ.12: ಹನೂರು ಸಮೀಪದ ಸತ್ತೇಗಾಲ ಚೆಕ್ ಪೋಸ್ಟ್ ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 2 ಕೆ.ಜಿ. 170 ಗ್ರಾಂ ಚಿನ್ನಾಭರಣಗಳನ್ನು ಎಫ್.ಎಸ್.ಟಿ ತಂಡ ವಶಕ್ಕೆ ಪಡೆದಿದೆ.
ಸತ್ತೇಗಾಲ ಚೆಕ್ ಪೋಸ್ಟ್ ನಲ್ಲಿ ಬೆಂಗಳೂರಿನಿಂದ ಕೊಳ್ಳೆಗಾಲಕ್ಕೆ ಬರುತ್ತಿದ್ದ ಕೆಎ-17 ಜಡ್-9447 ಸಂಖ್ಯೆಯ ಹುಂಡೈ ವೆನ್ಯೂ ಕಾರಿನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಕಾರ್ತಿಕ್ ಮತ್ತು ಚಿರಾಂತ್ ಎಂಬುವವರಿಂದ ಚಿನ್ನಾಭರಣಗಳನ್ನು ಎಫ್.ಎಸ್.ಟಿ ತಂಡದ ಅಧಿಕಾರಿ ಎಂ. ರವಿಶಂಕರ್ ಅವರು ವಶಪಡಿಸಿಕೊಂಡಿದ್ದಾರೆ.
ವಿಚಾರಣೆ ವೇಳೆ ಸಮಂಜಸ ಉತ್ತರ ದೊರೆಯದ ಹಿನ್ನೆಲೆಯಲ್ಲಿ ಚಿನ್ನವನ್ನು (1,57,87,000 ರೂ. ಮೌಲ್ಯ) ವಶಕ್ಕೆ ಪಡೆದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆದಾಯ ತೆರಿಗೆ ಇಲಾಖೆಯ ಅನ್ವೇಷಣೆ ವಿಭಾಗದ ಸಹಾಯಕ ನಿರ್ದೇಶಕರಾದ ಆರ್. ರಂಗನಾಥ್, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಾದ ಜಿ. ರಘು, ಜಿ. ದಿವಾಕರ್ ಅವರು ಪರಿಶೀಲನಾ ಕಾರ್ಯ ಮುಂದುವರಿಸಿದ್ದಾರೆ.