Mon. Dec 23rd, 2024

ಸಂಸದ ವಿ.ಶ್ರೀನಿವಾಸ್ ಪ್ರಸಾದ್ ನಿಧನ

Share this with Friends

ಮೈಸೂರು,ಏ. 30: ಮಾಜಿ ಸಚಿವ, ಬಿಜೆಪಿ ಸಂಸದ ವಿ. ಶ್ರೀನಿವಾಸ ಪ್ರಸಾದ್ ಅವರು ಇಹಲೋಕ ತ್ಯಜಿಸಿದ್ದಾರೆ.

ಅವರಿಗೆ 76 ವರ್ಷಗಳಾಗಿತ್ತು.ಕಳೆದ ಕೆಲದಿನಗಳಿಂದ ಅನಾರೊಗ್ಯಕ್ಕೆ ಒಳಗಾಗಿದ್ದರು.ಭಾನುವಾರ ಮಧ್ಯರಾತ್ರಿ 1.30 ಕ್ಕೆ ಇಹಲೋಕ ತ್ಯಜಿಸಿದ್ದಾರೆ.

ಐದು ದಶಕಗಳ ಸುದೀರ್ಘ ಸಕ್ರಿಯ ರಾಜಕಾರಣದಲ್ಲಿದ್ದು, ಮಾರ್ಚ್​ನಲ್ಲಿ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದರು.

ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಮಲ ಅರಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ವಿ. ಶ್ರೀನಿವಾಸ ಪ್ರಸಾದ್
ಕೆಲವು ದಿನಗಳ ಹಿಂದೆ ಕಾಲು ನೋವು, ಮೂತ್ರಪಿಂಡ‌ ಸೋಂಕು ಸೇರಿದಂತೆ ಇತರ ರೋಗ ಸಂಬಂಧದಿಂದ ಆಸ್ಪತ್ರೆಗೆ ದಾಖಲಾಗಿದ್ದರು.‌

ಆದರೆ, ಚಿಕಿತ್ಸೆ ಫಲಕಾರಿಯಾಗದೇ
ಭಾನುವಾರ ಮಧ್ಯರಾತ್ರಿ 1.30 ಕ್ಕೆ ಇಹಲೋಕ ತ್ಯಜಿಸಿದ್ದಾರೆ.

ವಿ. ಶ್ರೀನಿವಾಸ ಪ್ರಸಾದ್ ಅವರು ಪತ್ನಿ‌ ಭಾಗ್ಯಲಕ್ಷ್ಮಿ, ಮೂವರು ಪುತ್ರಿಯರಾದ ಪ್ರತಿಮಾ, ಪೂರ್ಣಿಮಾ, ಪೂನಂ, ಅಳಿಯಂದಿರಾದ ನಂಜನಗೂಡು ಮಾಜಿ ಶಾಸಕ ಹರ್ಷವರ್ಧನ್, ಡಾ.ಮೋಹನ್ ಸೇರಿದಂತೆ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

1974 ರ ಮಾರ್ಚ್ 17 ರಂದು ಮೈಸೂರಿನ ಕೃಷ್ಣರಾಜ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ವಿ. ಶ್ರೀನಿವಾಸ ಪ್ರಸಾದ್ ಅವರು ಪ್ರಥಮ ಬಾರಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

1974ರ ಉಪ ಚುನಾವಣೆಯಿಂದ 2019 ರ ಲೋಕಸಭಾ ಚುನಾವಣೆ ತನಕ‌ ಒಟ್ಟು 14 ಬಾರಿ ಚುನಾವಣೆಗೆ ಸ್ಪರ್ಧೆ ಮಾಡಿದ್ದರು.‌ ಇದರಲ್ಲಿ,‌ 6 ಬಾರಿ ಲೋಕಸಭಾ ಚುನಾವಣೆ ಮತ್ತು ಎರಡು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾದಿಸಿದ್ದರು.

ಚುನಾವಣೆಯಲ್ಲಿ ಸೋಲು – ಗೆಲುವು ಕಂಡಿದ್ದರೂ ಎಂದಿಗೂ ಅವರು ಧೃತಿಗೆಡದೇ ಅಂಬೇಡ್ಕರ್ ಚಿಂತನೆ, ದಲಿತಪರ ಹೋರಾಟದ ಮುಖ್ಯ ಧ್ವನಿಯಾಗಿದ್ದರು.

ಅವರು ದಲಿತರ ಏಳಿಗೆಗಾಗಿ ಶ್ರಮಿಸಿದ್ದರು, ಉತ್ತಮ ಸಂಸದೀಯಪಟುವಾಗಿದ್ದರು, ಎಲ್ಲಾ ಚರ್ಚೆಗಳಲ್ಲೂ ಭಾಗಿಯಾಗುತ್ತಿದ್ದರು. ಸಂಸತ್​​ನಲ್ಲಿ ಅಂಬೇಡ್ಕರ್​​ ವಿಚಾರಧಾರೆಗಳನ್ನು ನಿರರ್ಗಳವಾಗಿ ಮಂಡಿಸುತ್ತಿದ್ದರು. ದಲಿತ ನಾಯಕರಾಗಿ ಸಮಾಜದಲ್ಲಿ ಸಾಕಷ್ಟು ತುಳಿತಕ್ಕೆ ಒಳಗಾದವರ ಪರವಾಗಿ ನಿಲ್ಲುತ್ತಿದ್ದರು.

27 ವರ್ಷಗಳ ಸಂಸತ್​ ಸದಸ್ಯರಾಗಿದ್ದ ವೇಳೆ ಇಂದಿರಾ ಗಾಂಧಿ, ರಾಜೀವ್ ಗಾಂಧಿ, ವಿ.ಪಿ.ಸಿಂಗ್, ಚಂದ್ರಶೇಖರ್, ಪಿ.ವಿ.ನರಸಿಂಹರಾವ್, ಅಟಲ್ ಬಿಹಾರಿ ವಾಜಪೇಯಿ, ಪ್ರಧಾನಿ ನರೇಂದ್ರ ಮೋದಿ, ಅಂದರೆ ಒಟ್ಟು 7 ಪ್ರಧಾನಿಗಳನ್ನು, ಅವರ ಆಡಳಿತ ವೈಖರಿಯನ್ನು ಶ್ರೀನಿವಾಸ್ ಪ್ರಸಾದ್ ಕಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಮುಖ್ಯ ಮಂತ್ರಿ ಸಿದ್ದರಾಮಯ್ಯ,ಡಿಸಿಎಂ ಡಿ.ಕೆ.ಶಿವಕುಮಾರ್,
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ,ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ,
ಹೆಚ್.ಡಿ.ಕುಮಾರಸ್ವಾಮಿ,ಜಗದೀಶ್ ಶೆಟ್ಟರ್,ಡಿ.ವಿ.ಸದಾನಂದಗೌಡ,ಸಚಿವರಾದ ಹೆಚ್.ಸಿ.ಮಹದೇವಪ್ಪ,ಕೆ.ವೆಂಕಟೇಶ್,ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ,ಪ್ರತಿ ಪಕ್ಷದ ನಾಯಕ ಆರ್.ಅಶೋಕ್ ಸೇರಿದಂತೆ ಸಚಿವರು,ಮಾಜಿ ಸಚಿವರು,ಶಾಸಕರು,ಮಾಜಿ ಶಾಸಕರು ಹಾಗೂ ಪಕ್ಷಾತೀತವಾಗಿ ಎಲ್ಲರೂ ಶ್ರೀನಿವಾಸ್ ಪ್ರಸಾದ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ


Share this with Friends

Related Post