Fri. Mar 6th, 2026

‘ಖಾಲಿ ಟ್ರಂಕ್’ ಹಿಡಿದು ಸಂಸದ ತೇಜಸ್ವಿ ಸೂರ್ಯ ಪ್ರತಿಭಟನೆ: ಪೊಲೀಸರಿಂದ ವಶಕ್ಕೆ

Share this with Friends

ಬೆಂಗಳೂರು:ಜಯನಗರ ಮೆಟ್ರೋ ನಿಲ್ದಾಣದ ಬಳಿ ‘ಖಾಲಿ ಟ್ರಂಕ್’ ಹಿಡಿದು ವಿನೂತನವಾಗಿ ಪ್ರತಿಭಟನೆ ನಡೆಸಲು ಮುಂದಾದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ಮತ್ತು ಭಾರತೀಯ ಜನತಾ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರಾದ ತೇಜಸ್ವಿ ಸೂರ್ಯ ಅವರನ್ನು ಇಂದು ಬೆಳಿಗ್ಗೆ ಪೊಲೀಸರು ವಶಕ್ಕೆ ಪಡೆದರು.

ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆಯನ್ನು ವಿರೋಧಿಸಿ ಮತ್ತು ರಾಜ್ಯ ಸರ್ಕಾರದ ಆರ್ಥಿಕ ನೀತಿಗಳನ್ನು ಖಂಡಿಸಿ ಅವರು ಬೆಂಗಳೂರಿನ ಜಯನಗರ ಮೆಟ್ರೋ ನಿಲ್ದಾಣದ ಬಳಿ ‘ಖಾಲಿ ಟ್ರಂಕ್’ ಹಿಡಿದು ವಿನೂತನವಾಗಿ ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿ ಹದಗೆಟ್ಟಿದೆ ಮತ್ತು ಖಜಾನೆ ಖಾಲಿಯಾಗಿದೆ ಎಂಬುದನ್ನು ಸಾಂಕೇತಿಕವಾಗಿ ಬಿಂಬಿಸಲು ತೇಜಸ್ವಿ ಸೂರ್ಯ ಅವರು ‘ಖಾಲಿ ಟ್ರಂಕ್’ ಹಿಡಿದು ಮೆಟ್ರೋ ನಿಲ್ದಾಣಕ್ಕೆ ಆಗಮಿಸಿದರು.

ಈ ವೇಳೆ ಅನುಮತಿಯಿಲ್ಲದೆ ಪ್ರತಿಭಟನೆ ನಡೆಸಲು ಮುಂದಾದ ಕಾರಣಕ್ಕೆ ಸಂಸದರನ್ನು ಪೊಲೀಸರು ತಡೆದು ವಶಕ್ಕೆ ಪಡೆದರು. ಕಳೆದ ರಾತ್ರಿಯಷ್ಟೇ ಮುನ್ನೆಚ್ಚರಿಕಾ ಕ್ರಮವಾಗಿ ಅವರಿಗೆ ನೋಟಿಸ್ ನೀಡಲಾಗಿತ್ತು.ಆದರೂ ಪ್ರತಿಭಟ‌ನೆಗೆ ಮುಂದಾಗಿದ್ದಕ್ಕೆ ಅವರನ್ನು ವಶಕ್ಕೆ ಪಡೆಯಲಾಯಿತು.

ಪೊಲೀಸರು ವಶಕ್ಕೆ ಪಡೆದ ಕುರಿತು ಪ್ರತಿಕ್ರಿಯಿಸಿದ ಅವರು,ನನ್ನನ್ನು ಬಂಧಿಸುವುದರಿಂದ ನನ್ನ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ. ಸತ್ಯವನ್ನು ಬಹಿರಂಗಪಡಿಸಿದ್ದಕ್ಕಾಗಿ ಕಾಂಗ್ರೆಸ್ ಸರ್ಕಾರ ನನ್ನನ್ನು ಬಂಧಿಸಿರುವುದು ನಾಚಿಕೆಗೇಡಿನ ಸಂಗತಿ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಇದು ‘ಖಾಲಿ ಟ್ರಂಕ್’ ಸರ್ಕಾರ (Khali Trunk Govt). ರಾಜ್ಯದ ಬೊಕ್ಕಸ ಖಾಲಿಯಾಗಿದೆ, ಇದರ ಬೆಲೆಯನ್ನು ನಾಗರಿಕರು ಮೆಟ್ರೋ ದರ ಏರಿಕೆ ಮೂಲಕ ಪಾವತಿಸುತ್ತಿದ್ದಾರೆ” ಎಂದು ಟೀಕಿಸಿದರು.

 “ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ರಾಜ್ಯದ ಆರ್ಥಿಕ ಸ್ಥಿತಿಗತಿಯ ಬಗ್ಗೆ ‘ಶ್ವೇತ ಪತ್ರ’ ಹೊರಡಿಸಬೇಕು. ಕರ್ನಾಟಕದಲ್ಲಿ ಜೀವನ ಯಾಕೆ ಇಷ್ಟು ದುಬಾರಿಯಾಗುತ್ತಿದೆ. “ನಾವು ಕೈಗೆಟುಕುವ ದರದ ಸಾರ್ವಜನಿಕ ಸಾರಿಗೆ ಮತ್ತು ಉತ್ತರದಾಯಿತ್ವವನ್ನು ಕೇಳುತ್ತಿರುವುದಕ್ಕೆ ಸರ್ಕಾರ ನಮ್ಮನ್ನು ಬಂಧಿಸುತ್ತಿದೆ. ಉತ್ತಮ ರಸ್ತೆ ಮತ್ತು ಮೂಲಸೌಕರ್ಯ ನೀಡುವ ಬದಲು ಸರ್ಕಾರ ಬಂಧನದಲ್ಲಿ ತೊಡಗಿದೆ” ಎಂದು ಕಿಡಿಕಾರಿದರು.

ಮೆಟ್ರೋ ಪ್ರಯಾಣ ದರವನ್ನು ಪ್ರತಿ ಕಿಲೋಮೀಟರ್‌ಗೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದ್ದು, ಇದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಕಳೆದ ಕೆಲವು ದಿನಗಳಿಂದ ಸರಣಿ ಪ್ರತಿಭಟನೆಗಳನ್ನು ಹಮ್ಮಿಕೊಂಡಿದೆ. ಅದರ ಭಾಗವಾಗಿ ಇಂದು ಪ್ರತಿಭಟನೆಗೆ ಮುಂದಾದಾಗ ಸಂಸದರನ್ನು ವಶಕ್ಕೆ ಪಡೆದ ನಂತರ ಪೋಲೀಸರು ಅವರನ್ನು ಸಮೀಪದ ಪೊಲೀಸ್ ಠಾಣೆಗೆ ಕರೆದೊಯ್ದು, ನಂತರ ಬಿಡುಗಡೆಗೊಳಿಸಿದರು.


Share this with Friends

Related Post