ಬೆಂಗಳೂರು:ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಇಂದು ನಮ್ಮ ಮೆಟ್ರೋ ದರ ಏರಿಕೆ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದ್ದು, ರಾಜ್ಯ ಸರ್ಕಾರದ ವಿರುದ್ಧ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಆರ್.ವಿ. ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರೊಂದಿಗೆ ಸಂವಾದ ನಡೆಸಿದ ಅವರು, “Mr CM, Cut the Drama” (ಮಿ. ಸಿಎಂ, ನಾಟಕ ನಿಲ್ಲಿಸಿ) ಎಂಬ ಬರಹವಿರುವ ವಿಶೇಷ ಕಪ್ಪು ಟೀ-ಶರ್ಟ್ ಧರಿಸುವ ಮೂಲಕ ಸರ್ಕಾರದ ದ್ವಂದ್ವ ನೀತಿಯನ್ನು ಬಯಲಿಗೆಳೆಯುವ ಪ್ರಯತ್ನ ನಡೆಸಿದರು.
ನಂತರ ಪತ್ರಿಕಾಗೋಷ್ಠಿ ನಡೆಸು ಮಾತನಾಡಿದ ಅವರು,ಮೆಟ್ರೋ ದರ ಏರಿಕೆಗೆ ಕೇಂದ್ರ ಸರ್ಕಾರವೇ ಕಾರಣ ಎಂಬ ರಾಜ್ಯ ಸರ್ಕಾರದ ವಾದವು ಸಂಪೂರ್ಣ ಸುಳ್ಳು. ರಾಜ್ಯ ಸರ್ಕಾರದ ಹಣಕಾಸು ಮತ್ತು ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳೇ ಮೆಟ್ರೋ ಫೇರ್ ಫಿಕ್ಸೇಶನ್ ಕಮಿಟಿ (FFC) ಮುಂದೆ ಹಾಜರಾಗಿ, ದರ ಹೆಚ್ಚಳಕ್ಕೆ ಮತ್ತು ಪ್ರತಿ ವರ್ಷ ಸ್ವಯಂಚಾಲಿತ ದರ ಏರಿಕೆ (Automatic Annual Revision) ಜಾರಿಗೆ ತರುವಂತೆ ಒತ್ತಾಯಿಸಿದ್ದಾರೆ ಎಂದು ಸೂರ್ಯ ಅವರು ದಾಖಲೆಗಳನ್ನು ಬಿಡುಗಡೆ ಮಾಡಿದರು.
ದರ ಏರಿಕೆ ತಾತ್ಕಾಲಿಕ ತಡೆ: ಫೆಬ್ರವರಿ 9 ರಿಂದ ಜಾರಿಯಾಗಬೇಕಿದ್ದ ಶೇ. 5ರಷ್ಟು ಮೆಟ್ರೋ ದರ ಏರಿಕೆಯನ್ನು ಕೇಂದ್ರ ನಗರಾಭಿವೃದ್ಧಿ ಸಚಿವ ಮನೋಹರ್ ಲಾಲ್ ಖಟ್ಟರ್ ಅವರೊಂದಿಗೆ ಚರ್ಚಿಸಿ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ.ದರ ಕುರಿತು ಕೇಂದ್ರ ಸಚಿವರು ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಆರ್ಥಿಕ ದಿವಾಳಿತನ: ರಾಜ್ಯ ಸರ್ಕಾರವು ಆರ್ಥಿಕವಾಗಿ ಹದಗೆಟ್ಟಿದ್ದು, ಮೆಟ್ರೋಗೆ ನೀಡಬೇಕಿದ್ದ ‘ಶ್ಯಾಡೋ ಕ್ಯಾಶ್ ಸಪೋರ್ಟ್’ ಅನ್ನು ನಿಲ್ಲಿಸಿದೆ. ತನ್ನ ಆರ್ಥಿಕ ವೈಫಲ್ಯವನ್ನು ಮುಚ್ಚಿಹಾಕಲು ಸಾಮಾನ್ಯ ಪ್ರಯಾಣಿಕರ ಮೇಲೆ ದರ ಏರಿಕೆಯ ಹೊರೆ ಹೇರುತ್ತಿದೆ ಎಂದು ಅವರು ಟೀಕಿಸಿದರು.
ದೇಶದಲ್ಲೇ ಅತ್ಯಂತ ದುಬಾರಿ ಮೆಟ್ರೋ: ಬೆಂಗಳೂರು ಮೆಟ್ರೋ ದರಗಳು ಈಗಾಗಲೇ ದೆಹಲಿ ಮತ್ತು ಕೊಚ್ಚಿಗಿಂತ ದುಬಾರಿಯಾಗಿವೆ. ಈ ದರ ಏರಿಕೆ ಅಸೈಜ್ಞಾನಿಕವಾಗಿದ್ದು, ಸಾರ್ವಜನಿಕ ಸಾರಿಗೆಯ ಮೂಲ ಉದ್ದೇಶವನ್ನೇ ಇದು ನಾಶಪಡಿಸುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿಯವರ ನೇತೃತ್ವದ ಆರ್ಥಿಕತೆ: ಇದೇ ಸಂದರ್ಭದಲ್ಲಿ ಭಾರತದ ಆರ್ಥಿಕ ಪ್ರಗತಿಯನ್ನು ಶ್ಲಾಘಿಸಿದ ಅವರು, ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಭಾರತವು ವಿಶ್ವದ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ. ಅಮೆರಿಕ ಮತ್ತು ಯುರೋಪ್ ಒಕ್ಕೂಟದೊಂದಿಗಿನ ವ್ಯಾಪಾರ ಒಪ್ಪಂದಗಳು ಭಾರತದ ರೈತರು ಮತ್ತು ವ್ಯಾಪಾರಿಗಳಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಿವೆ ಎಂದರು.
ರಾಜ್ಯ ಸರ್ಕಾರವು ಕೂಡಲೇ ತನ್ನ ಹಠಮಾರಿ ಧೋರಣೆಯನ್ನು ಬಿಟ್ಟು, ದರ ಏರಿಕೆಯನ್ನು ಶಾಶ್ವತವಾಗಿ ಹಿಂಪಡೆಯಬೇಕು ಮತ್ತು ವೈಜ್ಞಾನಿಕವಾಗಿ ದರ ನಿಗದಿಪಡಿಸಲು ಸಮಿತಿಯನ್ನು ಪುನರ್ ರಚಿಸಬೇಕು ಎಂದು ಸಂಸದರು ಆಗ್ರಹಿಸಿದ್ದಾರೆ

