ಮೈಸೂರು, ಮಾ.9: ಮೈಸೂರಿನ ಅಗ್ರಹಾರ ವಾಣಿವಿಲಾಸ ರಸ್ತೆಯಲ್ಲಿರುವ ಶ್ರೀ ಮಹಾಗಣಪತಿ ದೇವಾಲಯದ ಆವರಣದಲ್ಲಿನ ಶ್ರೀ ಮೃತ್ಯುಂಜಯೇಶ್ವರನಿಗೆ ಇಂದೂ ಕೂಡಾ ವಿಶೇಷ ಪೂಜೆ ನೆರವೇರಿಸಲಾಯಿತು.
ಮಹಾಶಿವರಾತ್ರಿ ಪ್ರಯುಕ್ತ ನಿನ್ನೆ ಮುಂಜಾನೆಯಿಂದ ಇಂದು ಬೆಳಗಿನವರೆಗೂ ನಾಲ್ಕು ಜಾಮದಲ್ಲಿ ಶಿವನಿಗೆ ವಿವಿಧ ಅಭಿಷೇಕ ಮಾಡಿ ವಿಶಿಷ್ಟ ಅಲಂಕಾರ ಮಾಡಲಾಗಿತ್ತು.
ಇಂದು ಮಹಾದೇವ ದ್ರಾಕ್ಷಿ,ಸಪೋಟ,ಕಿತ್ತಳೆ ಹೀಗೆ ವಿವಿಧ ಬಗೆಯ ಹಣ್ಣುಗಳಿಂದ ಅಲಂಕಾರಗೊಂಡು ಕಂಗೊಳಿಸುತ್ತಿದ್ದು ನೋಡಲು ಎರಡು ಕಣ್ಣು ಸಾಲದೆಂಬಂತಿತ್ತು.
ಇದೇ ದೇವಾಲಯದ ಆವರಣದಲ್ಲಿರುವ ಪಾರ್ವತಿ ದೇವಿಗೆ ಅರ್ಧನಾರೀಶ್ವರನ ಅಲಂಕಾರ ಮಾಡಲಾಗಿದ್ದು ಭವ್ಯವಾಗಿತ್ತು.
ಇಂದು ದೇವಾಲಯದ ಆವರಣದಲ್ಲಿ ಶಿವನ ಮೂರ್ತಿ ಪ್ರತಿಷ್ಟಾಪಿಸಿ ಕಲಶಗಳನ್ನಿಟ್ಟು ಪೂಜಿಸಿ ಹೋಮವನ್ನು ಕೂಡಾ ಹಮ್ಮಿಕೊಳ್ಳಲಾಗಿತ್ತು,
ಬಹಳಷ್ಟು ಭಕ್ತಾದಿಗಳು ಆಗಮಿಸಿ ಮೃತ್ಯುಂಜಯೇಶ್ವರನಿಗೆ ನಮಿಸಿ ಪ್ರಸಾದ ಸ್ವೀಕರಿಸಿ ಪುನೀತರಾದರು.
ಈ ದೇವಾಲಯಗಳ ಅರ್ಚಕರು ಕಳೆದ ಎರಡು ದಿನಗಳಿಂದ ಹಗಲು ರಾತ್ರಿ ಎನ್ನದೆ ದೇವರುಗಳ ಅಲಂಕಾರ,ವಿಶೇಷ ಪೂಜೆ,ಅಭಿಷೇಕ ಸೇರಿ ವಿವಿಧ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು.