ಮೈಸೂರು,ಜೂ.30: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಕೋಟ್ಯಂತರ ರೂಪಾಯಿ ಹಗರಣ ಆಗಿದೆ ಎಂದು ಆರೋಪಿಸಿ ಮೂಡ ಮುಂಭಾಗ ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಸುಮಾರು ನಾಲ್ಕರಿಂದ ಐದು ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ಅಕ್ರಮವಾಗಿ ಹಂಚಿ, ಮೈಸೂರಿನ ಇತಿಹಾಸದಲ್ಲಿಯೇ ಭಾರೀ ಪ್ರಮಾಣದ ಭೂ ದರೋಡೆ ಮಾಡಿರುವುದು ಮೂಡಾ ದಲ್ಲಿ ಬೆಳಕಿಗೆ ಬಂದಿದೆ ಇದು ಖಂಡನೀಯ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಬದಲಿ ನಿವೇಶನ ನೀಡದಂತೆ ಎರಡು ವರ್ಷದ ಹಿಂದೆಯೇ ಸರ್ಕಾರ ಆದೇಶಿಸಿ ಅಗತ್ಯ ಬಿದ್ದರೆ ಮಾತ್ರ ಅನುಮತಿ ಪಡೆದು ಹಂಚಿಕೆ ಮಾಡುವಂತೆ ತಾಕೀತು ಮಾಡಿದ್ದರೂ, ಸರ್ಕಾರದ ನಿಯಮಗಳನ್ನು ಉಲ್ಲಂಘನೆ ಮಾಡಿ ನಿಯಮ ಬಾಹಿರವಾಗಿ, ಬದಲಿ ನಿವೇಶನ ಹಂಚಿಕೆ ಮಾಡಿ ಸುಮಾರು 3 ಸಾವಿರ ಕೋಟಿ ಹಗರಣ ಮಾಡಿ, ಸರ್ಕಾರಕ್ಕೆ ಸಾವಿರಾರು ಕೋಟಿ ನಷ್ಟ ಮಾಡಿರುವುದು ಕಾನೂನು ಬಾಹಿರವಾಗಿದೆ ಎಂದು ಆರೋಪಿಸಿದರು.
ಮೂಡ ಆಯುಕ್ತ ದಿನೇಶ್ ಕುಮಾರ್ ಮೂಡಾ ಕಚೇರಿಯಲ್ಲಿ ಬಹಳಷ್ಟು ಫೈಲ್ ಗಳೇ ಸಿಗದಂತೆ ಮಾಡಿ, ಊರಾಚೆಯ ಹಳ್ಳಿ ಸೈಟ್ ಗಳಿಗೂ ಮೈಸೂರಿನ ಐಷಾರಾಮಿ ಲೇಔಟ್ ನಲ್ಲಿ ಬದಲಿ ನಿವೇಶನಗಳನ್ನು ನೀಡಿದ್ದಾರೆ. ಇದರ ಜೊತೆಗೆ ಅವರ ಮನೆಯಲ್ಲಿಯೇ ಸುಮಾರು 146 ಸೈಟ್ ಫೈಲ್ ಗಳು ಸಿಕ್ಕಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಸದಸ್ಯರು ಹೇಳಿದರು.
ಇದು ಹಿಂದೆಂದೂ ಕೇಳರಿಯದಂತಹ ರಾಜ್ಯದ ಅತಿ ದೊಡ್ಡ ಹಗರಣಗಳಲ್ಲೊಂದಾಗಿದ್ದು, ಇದರ ಹಿಂದೆ ರಾಜ್ಯ ಸರ್ಕಾರದ ಅನೇಕ ಕಾಣದ ಕೈಗಳು ಇವೆ ಎಂದು ಕಾಣಿಸುತ್ತಿದೆ.
ಸರ್ಕಾರ ಕೂಡಲೇ ಕಟ್ಟುನಿಟ್ಟಾಗಿ ಪ್ರಾಮಾಣಿಕವಾಗಿ ತನಿಖೆ ಮಾಡಿ, ತಪ್ಪಿತಸ್ಥರನ್ನು ಜೈಲಿಗಟ್ಟಿ ಅಕ್ರಮ ಮಾರಾಟ ಮಾಡಿ ಬದಲಿ ನಿವೇಶನ ನೀಡಿರುವ ನಿವೇಶನಗಳನ್ನು ಹಿಂಪಡೆದು ನಮ್ಮ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಸ್ಥಾಪಿಸಿದ ಮುಡಾವನ್ನು ಭೂಗಳ್ಳರಿಂದ ರಕ್ಷಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ವಹಿಸಿದ್ದರು. ಪ್ರಭುಶಂಕರ್ ಎಂ ಬಿ, ಕೃಷ್ಣಪ್ಪ, ಕುಮಾರ್ ಗೌಡ, ಶಿವಲಿಂಗಯ್ಯ, ಅಂಬಾಅರಸ್, ನೇಹಾ, ಮಂಜುಳಾ, ಭಾಗ್ಯಮ್ಮ, ನಾರಾಯಣಗೌಡ, ಪರಿಸರ ಚಂದ್ರು, ವಿಜಯೇಂದ್ರ, ಆನಂದ್, ರಾಮಕೃಷ್ಣ, ರವಿ ಒಲಂಪಿಯ, ರಾಧಾಕೃಷ್ಣ, ಅಕ್ಬರ್, ರವೀಶ್, ಸ್ವಾಮಿ ಗೌಡ, ಆರ್ ಮಹದೇವ್, ದರ್ಶನ್ ಗೌಡ, ಪ್ರದೀಪ್, ದಿನೇಶ್, ರಘು ಅರಸ್, ವಿಷ್ಣು, ಬಸವರಾಜು, ಹನುಮಂತಯ್ಯ, ರಮೇಶ್, ಗಣೇಶ್, ಶಿವನಾಯಕ್ ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.