ಬೆಂಗಳೂರು: ಜಾತಿನಿಂದನೆ ಪ್ರಕರಣದಲ್ಲಿ ಜಾಮೀನು ಪಡೆದು ಹೊರಬಂದ ಕೂಡಲೇ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಅತ್ಯಾಚಾರ ಪ್ರಕರಣದಲ್ಲಿ ಕಗ್ಗಲಿಪುರ ಪೊಲೀಸರು ಅರೆಸ್ಟ್ ಮಾಡಿದರು.
ಜಾತಿನಿಂದನೆ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಗುರುವಾರ ಜಾಮೀನು ಮಂಜೂರು ಮಾಡಿತ್ತು,ಆದರೆ ಎಲ್ಲ ಪ್ರಕ್ರಿಯೆ ಮುಗಿಸಿ ಶುಕ್ರವಾರ ಮುನಿರತ್ನ ಜೈಲಿನಿಂದ ಹೊರಬಂದರು,ಅದಕ್ಕಾಗಿಯೇ ಕಾದಿದ್ದ ಕಗ್ಗಲಿಪುರ ಪೊಲೀಸರು ತಕ್ಷಣ ಅವರನ್ನು ಬಂಧಿಸಿ ಕರೆದೊಯ್ದರು.
ಮಾಗಡಿ ಡಿವೈಎಸ್ಪಿ ಪ್ರವೀಣ್ ಹಾಗೂ ರಾಮನಗರ ಡಿವೈಎಸ್ಪಿ ದಿನಕರ್ ಶೆಟ್ಟಿ ನೇತೃತ್ವದಲ್ಲಿ ಬಿಗಿ ಭದ್ರತೆಯಲ್ಲಿ ಶಾಸಕ ಮುನಿರತ್ನ ಅವರನ್ನ ಬಂಧಿಸಲಾಯಿತು
ಮಾರ್ಗಮಧ್ಯೆಯೇ ವೈದ್ಯಕೀಯ ತಪಾಸಣೆ ಮುಗಿದ ಬಳಿಕ ಪೊಲೀಸರು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿ ಸಂಜೆ ವೇಳೆಗೆ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಿದ್ದಾರೆ.
ಶಾಸಕ ಮುನಿರತ್ನ ಸೇರಿದಂತೆ ಒಟ್ಟು 7 ಆರೋಪಿಗಳ ವಿರುದ್ಧ ಬುಧವಾರ ಸಂಜೆ ರಾಮನಗರ ಜಿಲ್ಲೆಯ ಕಗ್ಗಲೀಪುರ ಠಾಣೆಯಲ್ಲಿ ಅತ್ಯಾಚಾರ ಕೇಸ್ ದಾಖಲಾಗಿತ್ತು.
ಕಗ್ಗಲೀಪುರದ ಖಾಸಗಿ ರೆಸಾರ್ಟ್‌ನಲ್ಲಿ ಅತ್ಯಾಚಾರ ನಡೆದಿರುವುದಾಗಿ 40 ವರ್ಷದ ಮಹಿಳೆ ದೂರು ದಾಖಲಿಸಿದ್ದರು.
ಸಂತ್ರಸ್ತೆಯ ದೂರಿನ ಅನ್ವಯ ಪೊಲೀಸರು ಮುನಿರತ್ನ ನಾಯ್ಡು, ವಿಜಯ್ ಕುಮಾರ್, ಸುಧಾಕರ, ಕಿರಣ್ ಕುಮಾರ್, ಲೋಹಿತ್ ಗೌಡ, ಮಂಜುನಾಥ , ಲೋಕಿ ವಿರುದ್ಧ ಎಫ್‌ಐಆರ್ ದಾಖಲಿಸಿ ಮುನಿರತ್ನರನ್ನ ಬಂಧಿಸಿದ್ದಾರೆ.