ಮೈಸೂರು,ಜೂ.20: ವಿಶ್ವದ ಎಲ್ಲ ಜೀವರಾಶಿಗೂ ಅದಮ್ಯ ಚೇತನ ನೀಡುವ ಶಕ್ತಿ ಸಂಗೀತಕ್ಕಿದೆ ಎಂದು ಕಾಂಗ್ರೆಸ್ ಮುಖಂಡ ಎನ್ ಎಂ ನವೀನ್ ಕುಮಾರ್ ಹೇಳಿದರು.
ನಗರದ ರಾಮಾನುಜ ರಸ್ತೆಯಲ್ಲಿರುವ ನಮೋ ಯೋಗ ಭವನದಲ್ಲಿ ಶ್ರೀ ಭುವನೇಶ್ವರಿ ಸೇವಾ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಅಂತರಾಷ್ಟ್ರೀಯ ಸಂಗೀತ ದಿನಾಚರಣೆ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.
ಪ್ರದೇಶ, ಭಾಷೆಗೂ ಮೀರಿ ತನ್ನ ಛಾಪು ಮೂಡಿಸುವ ಶಕ್ತಿ ಸಂಗೀತಕ್ಕಿದೆ. ಹಿಂದೂಸ್ತಾನಿ ಹಾಗೂ ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಅನನ್ಯ ಕೊಡುಗೆ ನೀಡಿರುವ ಲತಾ ಮಂಗೇಷ್ಕರ್, ಭೀಮಸೇನ್ ಜೋಶಿ, ಗಂಗೂಬಾಯಿ ಹಾನಗಲ್ ಮೊದಲಾದವರು ಸ್ಮರಣೀಯರು ಎಂದು ಹೇಳಿದರು
ಹಿರಿಯ ಸಮಾಜ ಸೇವಕರಾದ ಡಾಕ್ಟರ್ ಕೆ ರಘುರಾಮ್ ವಾಜಪೇಯಿ ಮಾತನಾಡಿ
1982ರಿಂದ ವಿಶ್ವ ಸಂಗೀತ ದಿನ ಆಚರಣೆಗೆ ಬಂದಿದೆ. ಸಂಗೀತವು ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆ ಮೇಲೆ ಪ್ರಭಾವ ಬೀರಲಿದೆ. ಸಂಗೀತ ಆಸ್ವಾದನೆಯಿಂದ ಮಾನಸಿಕ ಉಲ್ಲಾಸ, ನೆಮ್ಮದಿ, ಏಕಾಗ್ರತೆ ಹಾಗೂ ಶ್ರದ್ಧೆ ವೃದ್ಧಿಗೆ ಸಹಕಾರಿ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ ಸರ್ಕಾರ ವಿಶ್ವ ಸಂಗೀತ ದಿನಾಚರಣೆಯನ್ನು ಆಚರಿಸಬೇಕು, ಆ ಮೂಲಕ ಯುವಕರಲ್ಲಿ ಸಾಂಸ್ಕೃತಿಕ ಅಭಿರುಚಿಗೆ ಒತ್ತಾಸೆಯಾಗಿ ನಿಲ್ಲಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ಸಂಗೀತ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ಬಂದಿರುವ ಹಿರಿಯ ಸಂಗೀತ ಸಾಧಕರಾದ ಜಗದೀಶ್ ಎಂ ಸಿ,ದತ್ತಾತ್ರೇಯ ಎ ವಿ ,ಷಣ್ಮುಗ , ಶಶಿಕಲಾ ಚಂದ್ರಶೇಖರ್ , ಮಂಜುಳಾ, ಭರತ್ ಶಿವಕುಮಾರ ಶಾಸ್ತ್ರಿ,
ಎ ಪಿ ನಾಗೇಂದ್ರ ಪ್ರಸಾದ್ , ಶ್ರೀದೇವಿ
ಕುಳೇನೂರ್ , ಗೋವಿಂದ್ ರಾಜ್ ಬೀರೀಹುಂಡಿ,ಮಹಾದೇವ್ ಅವರಿಗೆ
ಕಲಾ ಸಾರಥಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಹಿರಿಯ ಗಾಯಕರು ಹಾಗೂ ಕವಿಗಳಾದ ಅಪರ್ಣ ಪುಣ್ಯಕೋಟಿ , ನಗರ ಪಾಲಿಕೆ ಮಾಜಿ ಸದಸ್ಯರಾದ ಮಾ ವಿ ರಾಮಪ್ರಸಾದ್, ಸಮಾಜ ಸೇವಕರಾದ ವಿದ್ಯಾ, ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಮಹಿಳಾ ಪ್ರಮುಖ್ ನಾಗಮಣಿ ಜೆ, ಶ್ರೀ ಭುವನೇಶ್ವರಿ ಸೇವಾ ಟ್ರಸ್ಟ್ ಅಧ್ಯಕ್ಷರಾದ ನಾಗಶ್ರೀ ಸುಚಿಂದ್ರ, ಸಚಿಂದ್ರ, ರಂಗನಾಥ್, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.