ವಿಜಯಪುರ: “ನಮ್ಮ ತಂದೆಯವರು ಪ್ರಧಾನಿಯಾಗಿದ್ದಾಗ ಈ ಭಾಗದ ನೀರಾವರಿ ಯೋಜನೆಗಳಿಗೆ ನೀಡಿದ ವೇಗವನ್ನು ಮರುಕಳಿಸುವಂತೆ ಮಾಡುವುದು ನನ್ನ ಗುರಿ”ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಪ್ರಕಟಿಸಿದರು.
ಜಿಲ್ಲೆಯಲ್ಲಿ ಇಂದು ಆಯೋಜಿಸಲಾಗಿದ್ದ ಬೃಹತ್ ‘ಜನತಾ ಸಮಾವೇಶ’ ಹಾಗೂ ಜೆಡಿಎಸ್ ಬೆಳ್ಳಿಹಬ್ಬದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವೈಫಲ್ಯಗಳನ್ನು ಪಟ್ಟಿ ಮಾಡುತ್ತಲೇ ಕೇಂದ್ರದ ಸಚಿವರಾಗಿ ಜಿಲ್ಲೆಯ ಹಿತರಕ್ಷಣೆಗೆ ಬದ್ಧವಾಗಿರುವುದಾಗಿ ತಿಳಿಸಿದರು.
ಕುಮಾರಸ್ವಾಮಿಯವರು ತಮ್ಮ ಭಾಷಣದ ಉದ್ದಕ್ಕೂ ಉತ್ತರ ಕರ್ನಾಟಕದ ಜೀವನದಿ ಕೃಷ್ಣೆಯ ಮಡಿಲಲ್ಲಿರುವ ವಿಜಯಪುರ ಜಿಲ್ಲೆಯ ಅಭಿವೃದ್ಧಿಗೆ ಒತ್ತು ನೀಡಿದರು. ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಜಾರಿಯಲ್ಲಿ ವಿಳಂಬವಾಗುತ್ತಿರುವುದಕ್ಕೆ ರಾಜ್ಯ ಸರ್ಕಾರದ ಆಡಳಿತಾತ್ಮಕ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ ಅವರು, ರೈತರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರದಿಂದ ಸಿಗಬೇಕಾದ ಅಗತ್ಯ ಅನುದಾನ ಮತ್ತು ತಾಂತ್ರಿಕ ಸಹಕಾರವನ್ನು ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಇದೇ ವೇಳೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ ಅವರು, “ಗ್ಯಾರಂಟಿ ಹೆಸರಿನಲ್ಲಿ ಮೂಲಸೌಕರ್ಯ ಮತ್ತು ನೀರಾವರಿ ಯೋಜನೆಗಳಿಗೆ ಮೀಸಲಿಡಬೇಕಾದ ಹಣವನ್ನು ಬಳಕೆ ಮಾಡಲಾಗುತ್ತಿದೆ. ಇದರಿಂದ ದೀರ್ಘಾವಧಿಯಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ಮತ್ತು ಕೃಷಿ ವಲಯಕ್ಕೆ ಧಕ್ಕೆಯಾಗಲಿದೆ” ಎಂದು ಎಚ್ಚರಿಸಿದರು. ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿರುವುದಕ್ಕೆ ಸರ್ಕಾರವು ಶ್ವೇತಪತ್ರ ಹೊರಡಿಸಬೇಕು ಎಂದು ಅವರು ಒತ್ತಾಯಿಸಿದರು.
ಸಮಾವೇಶದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಬಗೆಗಿನ ಜನರ ಅಭಿಮಾನವನ್ನು ಕಂಡು ಭಾವುಕರಾದ ಕುಮಾರಸ್ವಾಮಿ, “ಈ ಮಣ್ಣಿನ ಜನರ ಮೇಲೆ ನಮ್ಮ ತಂದೆಯವರಿಗೆ ಇರುವ ಪ್ರೀತಿ ಮತ್ತು ನಿಮ್ಮಲ್ಲಿ ಅವರ ಬಗ್ಗೆ ಇರುವ ಅಭಿಮಾನ ನಮಗೆ ದೊಡ್ಡ ಶಕ್ತಿ. ದೇವೇಗೌಡರು ಪ್ರಧಾನಿಯಾಗಿದ್ದ ಕಾಲದಲ್ಲಿ ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳಿಗೆ ನೀಡಿದ್ದ ವೇಗ ಮತ್ತು ಆದ್ಯತೆಯನ್ನು ಇಂದಿನ ರಾಜಕಾರಣದಲ್ಲಿ ನಾವು ಮತ್ತೆ ತರಬೇಕಿದೆ. ಅಂದು ಅವರು ಹಾಕಿಕೊಟ್ಟ ಬಲಿಷ್ಠ ಬುನಾದಿಯ ಮೇಲೆ ಈ ಭಾಗದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಬೇಕಿದೆ ಅದಕ್ಕಾಗಿ “ನಮ್ಮ ತಂದೆಯವರು ಪ್ರಧಾನಿಯಾಗಿದ್ದಾಗ ಈ ಭಾಗದ ನೀರಾವರಿ ಯೋಜನೆಗಳಿಗೆ ನೀಡಿದ ವೇಗವನ್ನು ಮರುಕಳಿಸುವಂತೆ ಮಾಡುವುದು ನನ್ನ ಗುರಿ” ಎಂದರು.
ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು ಒಗ್ಗಟ್ಟಿನಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುವಂತೆ ಕರೆ ನೀಡುವ ಮೂಲಕ ಮುಂಬರುವ ಸ್ಥಳೀಯ ಚುನಾವಣೆಗಳಿಗೆ ರಣಕಹಳೆ ಮೊಳಗಿಸಿದರು.

