Thu. Mar 5th, 2026

ನನ್ನ ಶ್ರಮ, ನನ್ನ ಸಂಪಾದನೆ, ನನ್ನ ಆಸ್ತಿ, ನನಗೆ ಇಷ್ಟವಾದ ಶೂ, ವಾಚ್ ಧರಿಸುವೆ: ಡಿಸಿಎಂ ಡಿ.ಕೆ. ಶಿವಕುಮಾರ್

Share this with Friends

ಹಾಸನ:ನಾನು 1 ಸಾವಿರ ರೂಪಾಯಿ ವಾಚನ್ನೂ ಕಟ್ಟುವೆ, 10 ಲಕ್ಷ ರೂಪಾಯಿ ವಾಚನ್ನೂ ಕಟ್ಟುವೆ. ಅದು ನನಗೆ ಬಿಟ್ಟ ವಿಚಾರ. ನನ್ನ ಶ್ರಮ, ನನ್ನ ಸಂಪಾದನೆ, ನನ್ನ ಆಸ್ತಿ ಎಂದು ವಾಚ್ ವಿಚಾರವನ್ನ ಟೀಕೆ ಮಾಡಿದ ಛಲವಾದಿ ನಾರಾಯಣಸ್ವಾಮಿಗೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಹಾಸನದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು,ಪಾಪ, ವಿರೋಧ ಪಕ್ಷದ ನಾಯಕರಿಗೆ ಅನುಭವದ ಕೊರತೆ ಇದೆ. ಅವರಿಗೆ ಚುನಾವಣೆ ನಿಂತ ಅನುಭವವೂ ಇಲ್ಲ. ಹೀಗಾಗಿ ಗೊತ್ತಿಲ್ಲದೆ ಮಾತನಾಡಿದ್ದಾರೆ. ಅವರು ವಿರೋಧ ಪಕ್ಷದ ನಾಯಕ ಸ್ಥಾನದಲ್ಲಿರುವುದರಿಂದ ಪ್ರತಿಕ್ರಿಯೆ ನೀಡಿದ್ದೇನೆ. ಬೇರೆಯವರಾಗಿದ್ದರೆ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ನನ್ನ ವ್ಯವಹಾರ, ನನ್ನ ಬದುಕು ಏನು ಎಂದು ಬಿಜೆಪಿಯ ಶೇಕಡಾ 90 ರಷ್ಟು ನಾಯಕರಿಗೆ ಗೊತ್ತಿದೆ” ಎಂದು ತಿಳಿಸಿದರು.

 “ನಾನು ನನ್ನ ದುಡ್ಡಲ್ಲಿ ಎಷ್ಟು ವಾಚ್ ಬೇಕಾದರೂ ಖರೀದಿ ಮಾಡುತ್ತೇನೆ. ಖರೀದಿ ಮಾಡುವ ಶಕ್ತಿ ನನಗಿದೆ. ಯಾರು ಯಾವ ಪ್ಯಾಂಟ್ ಹಾಕುತ್ತಾರೆ, ಯಾವ ವಾಚ್ ಹಾಕುತ್ತಾರೆ, ಯಾವ ಕನ್ನಡಕ ಹಾಕುತ್ತಾರೆ ಎಂದು ನಾನು ಪ್ರಶ್ನೆ ಮಾಡುವುದಿಲ್ಲ. ಇದು ವೈಯಕ್ತಿಕ ವಿಚಾರ, ಅವರವರ ಆಸೆಗಳು. ಕೆಲವರು ಒಂದು ಸಾವಿರದ ಶೂ ಧರಿಸಿದರೆ ಮತ್ತೆ ಕೆಲವರು 1 ಲಕ್ಷದ ಶೂ ಧರಿಸುತ್ತಾರೆ. ನಾನು 1 ಸಾವಿರ ರೂಪಾಯಿ ವಾಚನ್ನೂ ಕಟ್ಟುವೆ, 10 ಲಕ್ಷ ರೂಪಾಯಿ ವಾಚನ್ನೂ ಕಟ್ಟುವೆ. ಅದು ನನಗೆ ಬಿಟ್ಟ ವಿಚಾರ. ನನ್ನ ಶ್ರಮ, ನನ್ನ ಸಂಪಾದನೆ, ನನ್ನ ಆಸ್ತಿ ಎಂದರು.

ಜನಪರ ಕೆಲಸ ಮಾಡಿ ಗುರಿ ಮುಟ್ಟುತ್ತೇವೆ:

ಭಾಷಣದ ವೇಳೆ ಮುಂದಿನ ದಿನಗಳಲ್ಲಿ ಹೊಸ ಪರ್ವ ಆರಂಭವಾಗಲಿದೆ, ಹೊಸ ಗುರಿ ಮುಟ್ಟೋಣ ಎಂದು ಹೇಳಿದಿರಿ, ಯಾವಾಗ ಗುರಿ ಮುಟ್ಟುತ್ತೀರಿ ಎಂದು ಕೇಳಿದಾಗ, “ನಾವು ಜನರ ಪರವಾಗಿ ಕೆಲಸ ಮಾಡಿದಾಗ ಮಾತ್ರವಲ್ಲವೇ ಗುರಿ ಮುಟ್ಟುವುದು. ನಮ್ಮ ಸಾಧನೆಗಳು ಜನರನ್ನು ತಲುಪುತ್ತಿದೆ. ಗ್ಯಾರಂಟಿ ಯೋಜನೆಯಿಂದ ಜನರಿಗೆ 1.11 ಲಕ್ಷ ಕೋಟಿಯಷ್ಟು ಹಣ ಜನರಿಗೆ ತಲುಪುತ್ತಿದ್ದಂತೆ ಗ್ಯಾರಂಟಿ ಸಮಾವೇಶ ಮಾಡಬೇಕು ಎಂದು ನಾನು ಹಾಗೂ ಕೃಷ್ಣ ಭೈರೇಗೌಡ ಅವರು ಚರ್ಚೆ ಮಾಡುತ್ತಿದ್ದೆವು. ಹೀಗೆ ನಮ್ಮ ಹೊಸ ಆಲೋಚನೆಗಳಿವೆ. ಅವುಗಳನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ” ಎಂದರು.


Share this with Friends

Related Post