ಶಿವಮೊಗ್ಗ,ಮಾ.20: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ನಾನು ಗೆಲ್ಲುತ್ತೇನೆ, ನಂತರ ವಿಜಯೇಂದ್ರ ರಾಜ್ಯಾಧ್ಯಕ್ಷರ ಹುದ್ದೆಗೆ ರಾಜೀನಾಮೆ ಕೊಡುವುದು ನಿಶ್ಚಿತ ಎಂದು ಮಾಜಿ ಸಚಿವ ಕೆ.ಎಸ್ ಈಶ್ವಪ್ಪ ಹೇಳಿದ್ದಾರೆ.
ತಮ್ಮ ನಿವಾಸದಲ್ಲಿ ಬೆಂಬಲಿಗರ ಸಭೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಈಶ್ವರಪ್ಪ, ಬಿ.ವೈ ರಾಘವೇಂದ್ರನನ್ನ ಸೋಲಿಸಿ, ಬಿಜೆಪಿ ಕಟ್ಟಾ ಅನುಯಾಯಿಯಾದ ನನ್ನನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಮುಂದಿನ ಜೂನ್‌ನಲ್ಲೇ ಪರಿಷತ್ ಸ್ಥಾನ ಖಾಲಿ ಆಗುತ್ತದೆ, ಮಗನನ್ನ ಎಂಎಲ್‌ಸಿ ಮಾಡುತ್ತೇವೆ, ನಿಮಗೆ ರಾಜ್ಯಪಾಲರ ಹುದ್ದೆ ಕೊಡುತ್ತೇವೆ ಎಂಬುದಾಗಿ ಬಿಜೆಪಿ ಹೈಕಮಾಂಡ್ ನನಗೆ ಆಫರ್ ಕೊಟ್ಟಿದೆ, ನನಗೆ ಸ್ಥಾನಮಾನ ಬೇಡ, ಪಕ್ಷ ಉಳಿಯಬೇಕು, ಬಿಎಸ್‌ವೈ ಕುಟುಂಬದ ಸರ್ವಾಧಿಕಾರದಿಂದ ಮುಕ್ತವಾಬೇಕು ಎಂಬುದಷ್ಟೇ ಮುಖ್ಯ ಎಂದು ತಿಳಿಸಿದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಿರೀಕ್ಷೆಗೆ ಮೀರಿ ಬೆಂಬಲ ಸಿಗುತ್ತಿದೆ. ಸ್ವಾಮೀಜಿಗಳು ಬೆಂಬಲ ಕೊಟ್ಟಿದ್ದಾರೆ,ಸಿಗಂಧೂರು ಚೌಡೇಶ್ವರಿ ಆಶೀರ್ವಾದ ದೊರೆತಿದೆ, ಯಾವ ಕಾರಣಕ್ಕೂ ತೊಂದರೆ ಆಗಲ್ಲ, ನೂರಕ್ಕೆ ನೂರು ನೀವು ಗೆಲ್ಲುತ್ತೀರಾ ಎಂದು ಸ್ವಾಮೀಜಿಗಳು ಹೇಳಿದ್ದಾರೆ,ನಾನು ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಕಡಕ್ಕಾಗಿ ಈಶ್ವರಪ್ಪ ಹೇಳಿದರು.
ರಾಜ್ಯದಲ್ಲಿ ಈ ಬಾರಿ ಬಿಜೆಪಿ 28 ಸ್ಥಾನ ಗೆಲ್ಲಬೇಕು, ನಾನು ಶಿವಮೊಗ್ಗ ಕ್ಷೇತ್ರದಲ್ಲಿ ಕುಟುಂಬದ ವಿರುದ್ಧ ಸ್ಪರ್ಧೆ ಮಾಡಿ ಗೆಲ್ಲುತ್ತೇನೆ, ಗೆದ್ದ ನಂತರ ಬಿಜೆಪಿ ಸೇರುತ್ತೇನೆ ಎಂದೂ ಅವರು ತಿಳಿಸಿದರು.