ನವದೆಹಲಿ: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ದಿನಾಂಕ ಘೋಷಣೆಯಾಗಿದೆ.
ನವದೆಹಲಿಯ ವಿಜ್ಞಾನ ಭವನದಲ್ಲಿ
ಸುದ್ದಿಗೋಷ್ಠಿಯಲ್ಲಿ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ದಿನಾಂಕ ಘೋಷಿಸಿದರು.
ಶಿಗ್ಗಾಂವಿ ಶಾಸಕರಾಗಿದ್ದ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹಾವೇರಿಯಿಂದ, ಚನ್ನಪಟ್ಟಣ ಶಾಸಕರಾಗಿದ್ದ ಹೆಚ್. ಡಿ ಕುಮಾರಸ್ವಾಮಿ ಮಂಡ್ಯ ಕ್ಷೇತ್ರದಿಂದ ಲೋಕಸಭೆಗೆ ಪ್ರವೇಶಿಸಿದ್ದಾರೆ.ಅದೇ ರೀತಿ ಈ.ತುಕಾರಾಮ್ ಸಂಡೂರಿನಿಂದ ಶಾಸಕರಾಗಿ,ನಂತರ ಬಳ್ಳಾರಿಯಿಂದ ಸ್ಪರ್ಧಿಸಿ ಸಂಸದರಾಗಿದ್ದಾರೆ.
ಹಾಗಾಗಿ ಶಿಗ್ಗಾಂವಿ,ಚನ್ನಪಟ್ಟಣ,ಸಂಡೂರು ಕ್ಷೇತ್ರಗಳಿಗೆ ನವೆಂಬರ್ 13 ರಂದು ಉಪಚುನಾವಣೆ ನಡೆಯಲಿದೆ ಎಂದು ಆಯುಕ್ತರು ತಿಳಿಸಿದರು.
ಇದೇ ವೇಳೆ ಕೇಂದ್ರ ಚುನಾವಣಾ ಆಯೋಗವು ಮಹಾರಾಷ್ಟ್ರ ಹಾಗೂ ಜಾರ್ಖಂಡ್ ವಿಧಾನಸಭಾ ಚುನಾವಣೆಗಳಿಗೆ ದಿನಾಂಕ ಘೋಷಣೆ ಮಾಡಿದೆ.
ಮಹಾರಾಷ್ಟ್ರದಲ್ಲಿ 1 ಹಂತದಲ್ಲಿ 288 ಕ್ಷೇತ್ರಗಳಿಗೆ ನವೆಂಬರ್ 20 ರಂದು ಮತದಾನ ನಡೆಯಲಿದೆ. ಜಾರ್ಖಂಡ್ ನಲ್ಲಿ 2 ಹಂತಗಳಲ್ಲಿ 81 ಕ್ಷೇತ್ರಗಳಿಗೆ ನವೆಂಬರ್ 13 ರಂದು ಮೊದಲ ಹಂತದ ಮತದಾನ, 2ನೇ ಹಂತದ ಮತದಾನ ನವೆಂಬರ್ 20 ರಂದು ನಿಗದಿಯಾಗಿದೆ. ನವೆಂಬರ್ 23 ರಂದು ಮತ ಎಣಿಕೆ ನಡೆಯಲಿದೆ ಎಂದು ರಾಜೀವ್ ಕುಮಾರ್ ತಿಳಿಸಿದರು.
ಇತ್ತೀಚೆಗೆ ಪೂರ್ಣಗೊಂಡ ಹರಿಯಾಣ, ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆಗಳಲ್ಲಿ ಯಾವುದೇ ಉಪಚುನಾವಣೆಗಳು ಇಲ್ಲ ಎಂದು ಮುಖ್ಯ ಆಯುಕ್ತರು ಘೋಷಿಸಿದರು.