ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣ ದರವನ್ನು ಫೆಬ್ರವರಿ 9, 2026 ರಿಂದ ಜಾರಿಗೆ ಬರುವಂತೆ ಶೇಕಡಾ 5% ರಷ್ಟು ಅಂದರೆ ಕನಿಷ್ಠ 1 ರೂ.ಗರಿಷ್ಠ 5 ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ಅಧಿಕೃತವಾಗಿ ಪ್ರಕಟಿಸಿದೆ.
ಕನಿಷ್ಠ ಟಿಕೆಟ್ ದರ ₹10 ರಿಂದ ₹11 ಕ್ಕೆ ಮತ್ತು ಗರಿಷ್ಠ ದರ ₹90 ರಿಂದ ₹95 ಕ್ಕೆ ಏರಿಕೆಯಾಗಲಿದೆ. ದರ ಪರಿಷ್ಕರಣಾ ಸಮಿತಿಯ (FFC) ಶಿಫಾರಸಿನಂತೆ ಪ್ರತಿ ವರ್ಷ ಗರಿಷ್ಠ ಶೇ. 5ರವರೆಗೆ ದರ ಹೆಚ್ಚಿಸಲು ಅವಕಾಶವಿದ್ದು, ಅದರಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೆಟ್ರೋ ತಿಳಿಸಿದೆ.
ಸ್ಮಾರ್ಟ್ ಕಾರ್ಡ್ ಮತ್ತು ಎನ್ಸಿಎಂಸಿ ಬಳಕೆದಾರರಿಗೆ ಸಿಗುವ ಅಸ್ತಿತ್ವದಲ್ಲಿರುವ ರಿಯಾಯಿತಿಗಳು ಮುಂದುವರಿಯಲಿವೆ:
ಪೀಕ್ ಸಮಯದಲ್ಲಿ ಶೇ. 5 ರಿಯಾಯಿತಿ.
ಪೀಕ್ ಅಲ್ಲದ ಸಮಯದಲ್ಲಿ ಶೇ. 10 ರಿಯಾಯಿತಿ.
ಭಾನುವಾರ ಮತ್ತು ರಾಷ್ಟ್ರೀಯ ರಜಾದಿನಗಳಲ್ಲಿ ಶೇ. 10 ರಿಯಾಯಿತಿ ನೀಡಿದೆ.
96.10 ಕಿ.ಮೀ ಉದ್ದದ ಸಂಪೂರ್ಣ ಮೆಟ್ರೋ ಜಾಲದ 10 ದರ ವಲಯಗಳಿಗೂ ಈ ಹೆಚ್ಚಳ ಅನ್ವಯವಾಗಲಿದೆ. ನಿರ್ವಹಣಾ ವೆಚ್ಚದ ಹೆಚ್ಚಳ ಮತ್ತು ಆರ್ಥಿಕ ಸುಸ್ಥಿರತೆಯನ್ನು ಕಾಯ್ದುಕೊಳ್ಳಲು ಈ ಅಲ್ಪ ಪ್ರಮಾಣದ ವಾರ್ಷಿಕ ದರ ಏರಿಕೆ ಅನಿವಾರ್ಯ ಎಂದು ಮೆಟ್ರೋ ರೈಲು ನಿಗಮ ಸಮರ್ಥಿಸಿಕೊಂಡಿದೆ.
ದರ ನಿಗದಿ ಸಮಿತಿ (FFC) ಪ್ರಕಾರ BMRCLಗೆ 7.5 ವರ್ಷಗಳ ನಂತರ ಪರಿಷ್ಕೃತ ದರ ರಚನೆಯನ್ನು ಮತ್ತು 29 ರಿಂದ 10 ರವರೆಗಿನ ದರದ ವಲಯಗಳನ್ನು ಶಿಫಾರಸು ಮಾಡುವಾಗ ದರ ಪರಿಷ್ಕರಣೆ ಸರಾಸರಿ ಶೇ 51.55 ರಷ್ಟು ಹೆಚ್ಚಳಕ್ಕೆ ಕಾರಣವಾಯಿತು. ಭವಿಷ್ಯದಲ್ಲಿ ಇಂತಹ ದರ ಹೆಚ್ಚಳದ ಪರಿಸ್ಥಿತಿಯನ್ನು ತಪ್ಪಿಸುವ ದೃಷ್ಟಿಯೊಂದಿಗೆ, ಸಮಿತಿಯು ತನ್ನ ವರದಿಯಲ್ಲಿ ಪಾರದರ್ಶಕ ವಾರ್ಷಿಕ ಸ್ವಯಂಚಾಲಿತ ದರ ಪರಿಷ್ಕರಣೆ ಸೂತ್ರವನ್ನು, ವಾರ್ಷಿಕ ಕಾರ್ಯಾಚರಣೆ ಮತ್ತು ನಿರ್ವಹಣೆಯ ಶೇಕಡಾವಾರು ವೆಚ್ಚ ಅಥವಾ ವಾರ್ಷಿಕ ಶೇ 5 ಯಾವುದು ಕಡಿಮೆಯೋ ಮತ್ತು ಮುಂದಿನ ಒಂದು ರೂಪಾಯಿಗೆ ಪೂರ್ಣಾಂಕಗೊಳಿಸಿ ದರವನ್ನು ಪರಿಷ್ಕರಿಸಲು ಶಿಫಾರಸು ಮಾಡಿದೆ. ಈ ಕಾರ್ಯವಿಧಾನವು, ವಾರ್ಷಿಕವಾಗಿ ಅಲ್ಪ ದರ ಹೆಚ್ಚಳಕ್ಕೆ ಸಹಾಯ ಮಾಡುತ್ತದೆ ಎಂದು ಮೆಟ್ರೋ ತಿಳಿಸಿದೆ.
ದರಪಟ್ಟಿ:


