ಬೆಂಗಳೂರು: ರಾಜಧಾನಿಯಲ್ಲಿ ಮಾದಕ ವಸ್ತುಗಳ ಜಾಲವನ್ನು ಮಟ್ಟಹಾಕಲು ಸಿಸಿಬಿ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಬರೋಬ್ಬರಿ 11.50 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದ್ದು, ಇಬ್ಬರು ಅಂತರರಾಜ್ಯ ಪೆಡ್ಲರ್ಗಳನ್ನು ಬಂಧಿಸಲಾಗಿದೆ.
ಈ ಕುರಿತು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಗಳನ್ನು ಹಂಚಿಕೊಂಡಿದ್ದಾರೆ.ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಎಸಿಪಿ ಎಚ್.ಕೆ. ಮಹಾನಂದ ಅವರ ಮಾರ್ಗದರ್ಶನದಲ್ಲಿ ಪಿಐಗಳಾದ ಮಂಜಪ್ಪ ಸಿ.ಎ., ರಕ್ಷಿತ್ ಎ.ಕೆ. ಮತ್ತು ವಿ.ಡಿ. ಶಿವರಾಜು ಅವರ ತಂಡ ಬಾಗಲೂರು ಠಾಣಾ ವ್ಯಾಪ್ತಿಯಲ್ಲಿ ಈ ದಾಳಿ ನಡೆಸಿದೆ. ಈ ವೇಳೆ ಹೊರರಾಜ್ಯದ ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ 8,335 ಎಲ್ಎಸ್ಡಿ (LSD) ಸ್ಟ್ರಿಪ್ಸ್, 5 ಕೆಜಿ ಹೈಡ್ರೋ ಗಾಂಜಾ ಮತ್ತು 534 ಗ್ರಾಂ ಚರಸ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದ ಎಲ್ಎಸ್ಡಿ ಸ್ಟ್ರಿಪ್ಸ್ಗಳನ್ನು ಜಪ್ತಿ ಮಾಡಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಅಂಚೆ ಮೂಲಕ ಡ್ರಗ್ಸ್ ಆಮದು:
ಇನ್ನೊಂದು ಪ್ರಕರಣದಲ್ಲಿ, ಕೆ.ಜಿ. ನಗರ ವ್ಯಾಪ್ತಿಯಲ್ಲಿ ಅಕ್ರಮವಾಗಿ ಅಂಚೆ ಮೂಲಕ ವಿದೇಶದಿಂದ ತರಿಸಲಾಗಿದ್ದ 1.5 ಕೆಜಿ ಹೈಡ್ರೋ ಗಾಂಜಾವನ್ನು ಸಿಸಿಬಿ ಪತ್ತೆಹಚ್ಚಿದೆ. ಪಾರ್ಸೆಲ್ನಲ್ಲಿ ಬಂದಿದ್ದ ಚಾಕೊಲೇಟ್ ಮತ್ತು ಬಿಸ್ಕೆಟ್ ಡಬ್ಬಿಗಳಲ್ಲಿ ಅತ್ಯಂತ ಚಾಣಾಕ್ಷತನದಿಂದ ಈ ಮಾದಕ ವಸ್ತುವನ್ನು ಬಚ್ಚಿಡಲಾಗಿತ್ತು. ಈ ಜಾಲದ ಹಿಂದೆ ಥೈಲ್ಯಾಂಡ್ನಲ್ಲಿರುವ ಕೇರಳ ಮೂಲದ ವ್ಯಕ್ತಿಯೊಬ್ಬನ ಕೈವಾಡವಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಕಠಿಣ ಕ್ರಮದ ಎಚ್ಚರಿಕೆ:
ನಗರದ ಯುವಜನತೆಯನ್ನು ಗುರಿಯಾಗಿಸಿಕೊಂಡು ಇಂತಹ ದುಬಾರಿ ಮಾದಕ ವಸ್ತುಗಳನ್ನು ಪೂರೈಸಲಾಗುತ್ತಿದೆ. ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಆಯುಕ್ತರು ಶ್ಲಾಘಿಸಿದ್ದಾರೆ. “ಡ್ರಗ್ ಮುಕ್ತ ಬೆಂಗಳೂರು” ಅಭಿಯಾನದ ಅಡಿಯಲ್ಲಿ ಮಾದಕ ವಸ್ತು ಜಾಲದ ಮೂಲವನ್ನು ಪತ್ತೆಹಚ್ಚಲು ತನಿಖೆ ಚುರುಕುಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

