ನವದೆಹಲಿ: ಕುವೆಂಪು ಅವರು ರಾಷ್ಟ್ರಕವಿಯಷ್ಟೇ ಅಲ್ಲ, ಅವರು ವಿಶ್ವಕವಿ. ಮನುಕುಲದ ಒಳಿತಿಗಾಗಿ ಸಾಹಿತ್ಯ ರಚಿಸಿದ ಅವರು, ಯುಗದ ಕವಿಯೂ ಆಗಿದ್ದಾರೆ. ಅಂಥ ಶ್ರೇಷ್ಟರಿಗೆ ಭಾರತ ರತ್ನ ಸಿಗಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.
ನವದೆಹಲಿಯಲ್ಲಿ ಮೈಸೂರಿನ ಕುವೆಂಪು ವಿಶ್ವಮಾನವ ಕ್ಷೇಮಾಭಿವೃದ್ಧಿ ಟ್ರಸ್ಟ್ ಹಾಗೂ ದೆಹಲಿ ಕರ್ನಾಟಕ ಸಂಘ ಹಮ್ಮಿಕೊಂಡಿದ್ದ ರಾಷ್ಟ್ರಕವಿ ಕುವೆಂಪು ಅವರ ಕೊಡುಗೆ ಮತ್ತು ಸಾಧನೆ ಕುರಿತ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕುವೆಂಪು ಅವರ ಸಾಹಿತ್ಯವನ್ನು ನಾನು ಓದಿದ್ದೇನೆ. ಮುಖ್ಯವಾಗಿ ಅವರ ಎರಡು ಕಾದಂಬರಿಗಳ ಜತೆಗೆ, ಅವರ ಆತ್ಮಕಥನ ʼನೆನಪಿನ ದೋಣಿಯಲ್ಲಿʼ ಶ್ರೆದ್ಧೆಯಿಂದ ಓದಿದ್ದೇನೆ. ಆ ಕೃತಿಯನ್ನು ಕುವೆಂಪು ಅವರು ಹೃದಯದಿಂದ ಬರೆದಿದ್ದಾರೇನೋ ಅನ್ನುವಷ್ಟು ಅನನ್ಯವಾಗಿದೆ. ಅಂಥ ಶ್ರೇಷ್ಟರಿಗೆ ಭಾರತ ರತ್ನ ಸಿಗಬೇಕು ಎಂದರು.
ಬೋಧಿಸಿ ಎಂದಿದ್ದು ಧರ್ಮ ಸಂಘರ್ಷ ಉಂಟು ಮಾಡುವುದಕ್ಕಲ್ಲ:
ಶಾಲಾ ಹಂತದಿಂದಲೇ ಭಗವದ್ಗೀತೆಯನ್ನು ಮಕ್ಕಳಿಗೆ ಬೋಧಿಸಬೇಕು. ಇದು ಅತ್ಯಂತ ಉತ್ತಮ ಶೈಕ್ಷಣಿಕ ಸುಧಾರಣಾ ಕ್ರಮವಾಗುತ್ತದೆ ಎಂದು ಕುಮಾರಸ್ವಾಮಿ ಪುನರುಚ್ಚರಿಸಿದರು.ಭಗವದ್ಗೀತೆಯನ್ನು ಬೋಧಿಸಬೇಕು ಎಂದು ಎಂದು ನಾನು ಹೇಳಿದ್ದು ರಾಜಕೀಯ ಉದ್ದೇಶ ಅಥವಾ ಯಾವುದೇ ಧರ್ಮ ಸಂಘರ್ಷ ಉಂಟು ಮಾಡುವುದಕ್ಕಲ್ಲ. ಉತ್ತಮ ಸಮಾಜ ನಿರ್ಮಾಣ ಮಾಡುವ ಅಗತ್ಯದ ದೃಷ್ಟಿಯಿಂದ ಹೇಳಿದ್ದೇನೆ ಎಂದು ಅವರು ಒತ್ತಿ ಹೇಳಿದರು.
ಭಗವದ್ಗೀತೆಯ ಉದಾತ್ತ, ಶ್ರೇಷ್ಟ ಮೌಲ್ಯಗಳ ಬಗ್ಗೆ ಹೊಸದಾಗಿ ತಿಳಿಹೇಳುವ ಅಗತ್ಯವಿಲ್ಲ. ಆದರೆ ಷಸಮಾಜದಲ್ಲಿ ನೈತಿಕ ಮೌಲ್ಯಗಳು ಅಧಃಪತನ ಆಗುತ್ತಿರುವ ಸಂದರ್ಭದಲ್ಲಿ ಗೀತೆಯ ಅಗತ್ಯ ಇನ್ನೂ ಹೆಚ್ಚಿದೆ. ಮಾನವ ಕುಲಕ್ಕೆ ಕೃಷ್ಣನ ಉಪದೇಶವು ದಾರಿದೀಪವಾಗಿದೆ. ಹೀಗಾಗಿ ಮಕ್ಕಳಿಗೆ ಬೋಧಿಸಬೇಕಾದ ಅಗತ್ಯವಿದೆ ಎಂದು ಹೇಳಿದ್ದೇನೆ. ಪಠ್ಯದಲ್ಲಿ ಭಗವದ್ಗೀತೆಯನ್ನು ಅಳವಡಿಸುವಂತೆ ಕೋರಿ ಕೇಂದ್ರ ಶಿಕ್ಷಣ ಸಚಿವರಿಗೆ ಪತ್ರವನ್ನು ಕೂಡ ಬರೆದಿದ್ದೇನೆ. ಅದನ್ನೇ ಕೆಲವರು ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಅವರು ನುಡಿದರು.
ನಮಗೆ ಎಲ್ಲವೂ ಇದೆ, ತಾಂತ್ರಿಕವಾಗಿ ಮತ್ತು ಆರ್ಥಿಕವಾಗಿ ಬೆಳೆಯುತ್ತಿದ್ದೇವೆ. ಆದರೆ ಮೌಲ್ಯಗಳ ವಿಷಯಕ್ಕೆ ಬಂದಾಗ ಪಾತಾಳಕ್ಕೆ ಹೋಗುತ್ತಿದ್ದೇವೆ. ಯಾಕೆ ಹೀಗೆ ಆಗುತ್ತಿದೆ ಎಂಬುದನ್ನು ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಇವತ್ತು ಯಾರೇ ಆದರೂ ನೆಮ್ಮದಿಯಾಗಿ ನಿದ್ರೆ ಮಾಡುವ ಪರಿಸ್ಥಿತಿ ಇಲ್ಲ. ಅಂಥ ಪ್ರಾಮಾಣಿಕತೆಯನ್ನು ಯಾರೂ ಹೊಂದಿಲ್ಲ. ಹಾಗಾದರೆ ಮುಂದಿನ ತಲೆಮಾರಿಗೆ ಏನು ಕೊಡಬೇಕು ಎಂಬುದನ್ನು ಪೋಷಕರು ತೀರ್ಮಾನ ಮಾಡಬೇಕು ಎಂದು ಸಚಿವರು ಸೂಚ್ಯವಾಗಿ ಹೇಳಿದರು.

