ಬೆಂಗಳೂರು. ಮಾ.17 : ಕನ್ನಡ ಚಿತ್ರರಂಗದ ಹಿರಿಯ ನಟ ನವರಸ ನಾಯಕ ಜಗ್ಗೇಶ್ 61ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.ಅವರ ಅಭಿಮಾನಿಗಳು ಜಗ್ಗೇಶ್ಗೆ ಶುಭಾಶಯ ತಿಳಿಸುತ್ತಿದ್ದಾರೆ. ಅವರ ನಟನೆಯ ‘ರಂಗನಾಯಕ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿದೆ. ಈ ಕಾರಣಕ್ಕೆ ಅವರಿಗೆ ಬರ್ತ್ಡೇ ವಿಶೇಷ ಎನಿಸಿಕೊಂಡಿದೆ.ಸಾಕಷ್ಟು ಏಳುಬೀಳುಗಳನ್ನು ಕಂಡಿರುವ ಜಗ್ಗೇಶ್ ನಟನಾಗಿ, ರಾಜಕೀಯ ನಾಯಕನಾಗಿ ಯಶಸ್ಸು ಕಂಡಿದ್ದಾರೆ
ರಾಜ್ಕುಮಾರ್ ಅವರ ಕುಟುಂಬದ ಜೊತೆ ಜಗ್ಗೇಶ್ಗೆ ವಿಶೇಷ ಗೌರವ ಹಾಗೂ ಪ್ರೀತಿ ಇದೆ. ರಾಜ್ಕುಮಾರ್ ಅವರನ್ನು ಕಂಡರೆ ಜಗ್ಗೇಶ್ಗೆ ಎಲ್ಲಿಲ್ಲದ ಗೌರವ. ಪುನೀತ್ ಜೊತೆ ಅವರಿಗೆ ಅವಿನಾಭಾವ ಸಂಬಂಧ ಇತ್ತು. ಈ ಇಬ್ಬರೂ ಹುಟ್ಟಿದ ದಿನಾಂಕ ಒಂದೇ ಅನ್ನೋದು ವಿಶೇಷ.
ಹಾಸ್ಯ ನಟನಾಗಿ, ನಿರ್ದೇಶಕನಾಗಿ, ಗಾಯಕನಾಗಿ ಮಿಂಚಿರುವ ಜಗ್ಗೇಶ್ ಸಿನಿಮಾಗಳಲ್ಲಿ ಎಲ್ಲಾ ಪಾತ್ರವನ್ನು ನಿಭಾಯಿಸುವ ಮೂಲಕ ನವರಸ ನಾಯಕನೆಂದೇ ಖ್ಯಾತಿ ಪಡೆದಿದ್ದಾರೆ. 1982ರಲ್ಲಿ ತೆರೆಕಂಡ ಅನಂತ್ ನಾಗ್ ಅವರ ‘ಇಬ್ಬನಿ ಕರಗಿತು’ ಚಿತ್ರದಲ್ಲಿ ಅಭಿನಯಿಸುವ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದರು. ಹಲವಾರು ವರ್ಷಗಳ ಕಾಲ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಜಗ್ಗೇಶ್ 1992ರಲ್ಲಿ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ‘ತರ್ಲೆ ನನ್ಮಗ’ ಚಿತ್ರದಲ್ಲಿ ಮೊದಲ ಬಾರಿ ನಾಯಕ ನಟನಾಗಿ ಅಭಿನಯಿಸಿದರು.
2012ರಲ್ಲಿ ತಮ್ಮ ಮಗ ಗುರುರಾಜ್ ಅವರಿಗೆ ಆಕ್ಷನ್ ಕಟ್ ಹೇಳುವ ಮೂಲಕ ನಿರ್ದೇಶಕನಾಗಿಯೂ ಹೆಸರು ಮಾಡಿದರು. ಜಗ್ಗೇಶ್ ಅಭಿನಯದ ‘ರಂಗನಾಯಕ’ ಚಿತ್ರ ಇದೇ ತಿಂಗಳು ಶಿವರಾತ್ರಿಯ ಹಬ್ಬದಂದು ತೆರೆಕಂಡಿತ್ತು, ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡುವ ಮೂಲಕ ರಾಜ್ಯದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಜಗ್ಗೇಶ್ ಅವರು ಸ್ಯಾಂಡಲ್ವುಡ್ ಬಿಟ್ಟು ಹೊರ ಹೋಗಿಲ್ಲ. ಪರಭಾಷೆಯಿಂದ ಹಲವು ಆಫರ್ಗಳು ಬಂದರೂ ಅವರು ಅಲ್ಲಿಗೆ ಹೋದವರಲ್ಲ. ಕಲಾ ಸೇವೆಯನ್ನು ಕೇವಲ ಕನ್ನಡಕ್ಕೆ ಮಾತ್ರ ಸೀಮಿತ ಮಾಡಿದ್ದಾರೆ ಅವರು. ಜಗ್ಗೇಶ್ ಅವರು ನಟನೆಯ ಜೊತೆಗೆ ನಿರ್ದೇಶನ ಹಾಗೂ ನಿರ್ಮಾಣ ಮಾಡಿದ್ದಾರೆ. ‘ಗುರು’ ಹಾಗೂ ‘ಮೇಲುಕೋಟೆ ಮಂಜ’ ಹೆಸರಿನ ಚಿತ್ರವನ್ನು ನಿರ್ದೇಶನ ಮಾಡಿದ್ದರು. ‘ಮೇಕಪ್’ ಹೆಸರಿನ ಸಿನಿಮಾನ ಅವರು ನಿರ್ಮಾಣ ಮಾಡಿದ್ದರು. ಈ ಚಿತ್ರಕ್ಕೆ ಅವರ ಮಗ ಗುರುರಾಜ್ ನಿರ್ದೇಶನ ಮಾಡಿದ್ದರು. ಸಿಂಗೀತಂ ಶ್ರೀನಿವಾಸರಾವ್ ಈ ಸಿನಿಮಾನ ನಿರ್ದೇಶನ ಮಾಡಿದ್ದರು.