Mon. Dec 23rd, 2024

ಎನ್ ಡಿ ಎ,ಯುಪಿಎ ಅವಧಿಯ ಅಂಕಿ ಅಂಶ ಬಿಡುಗಡೆ ಮಾಡಿ ಅಶೋಕ್ ತಿರುಗೇಟು

Share this with Friends

ಬೆಂಗಳೂರು,ಏ.28: ಕೇಂದ್ರ ಸರ್ಕಾರ ಬರ ಪರಿಹಾರದ ಹಣ ಕಡಿಮೆ ನೀಡಿದೆ ಎಂದು ಸಿಎಂ ನೇತೃತ್ವದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿದ್ದರೆ ಇದಕ್ಕೆ ಬಿಜೆಪಿ ಕಿಡಿಕಾರಿದೆ.

ಈ ಬಗ್ಗೆ ವಿಪಕ್ಷ ನಾಯಕ ಆರ್‌ ಅಶೋಕ್‌ ಪತ್ರಿಕಾಗೋಷ್ಠಿಯಲ್ಲಿ ಅಂಕಿ ಅಂಶ ಬಿಡುಗಡೆ ಮಾಡಿ ವಾಗ್ದಾಳಿ ನಡೆಸಿದರು.

ಯುಪಿಎ ಕೊಟ್ಟಿದ್ದ ಪರಿಹಾರ ನೋಡಿದರೆ ಸ್ಮಶಾನದಲ್ಲಿ ಬಾಯಿ ಬಡಿದುಕೊಳ್ಳಬೇಕು ಎಂದು ವಿಪಕ್ಷ ನಾಯಕ ಆರ್‌ ಅಶೋಕ್‌ ಟೀಕಿಸಿದರು.

ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರೇ ನಾವು 4,860 ಕೋಟಿ ರೂ. ಪರಿಹಾರ ಕೇಳಿದ್ದೇವೆ ಅಂತ ಹೇಳಿದ್ದಾರೆ. ಕೇಂದ್ರ 3,454 ಕೋಟಿ ರೂ. ನೀಡಿದೆ. ಸಿದ್ದರಾಮಯ್ಯಗೆ ಎರಡು ನಾಲಿಗೆ ಇದೆಯೋ ಹತ್ತು ನಾಲಿಗೆ ಇದೆಯೋ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್‌ ಇಬ್ಬರೂ ಸುಳ್ಳು ರಾಮಯ್ಯ, ಸುಳ್ಳು ಕುಮಾರ್, ಬುರುಡೆ ಕುಮಾರ್ ಎಂದು ವಾಗ್ದಾಳಿ ನಡೆಸಿದರು.

ಇದೇ ವೇಳೆ ಯುಪಿಎ ಮತ್ತು ಎನ್‌ಡಿಎ ಅವಧಿಯಲ್ಲಿ ಬರ ಪರಿಹಾರಕ್ಕೆ ಸಂಬಂಧಿಸಿದ ದಾಖಲೆ ರಿಲೀಸ್‌ ಮಾಡಿ ವಾಗ್ದಾಳಿ ನಡೆಸಿದರು.

ಕಳೆದ ಹತ್ತು ವರ್ಷಗಳ ಯುಪಿಎ ಅವಧಿಯಲ್ಲಿ ನಾವು 44,838.59 ಕೋಟಿ ರೂ. ಕೇಳಿದ್ದರೆ ಅವರು ಕೊಟ್ಟಿದ್ದು ಕೇವಲ 3,579.22 ಕೋಟಿ ರೂ. ಮಾತ್ರ.

ಕಳೆದ ಹತ್ತು ವರ್ಷದಲ್ಲಿ ಎನ್‌ಡಿಎ ಸರ್ಕಾರದ ಬಳಿ 25,728 ಕೋಟಿ ರೂ. ಕೇಳಿದ್ದರೆ 11,482 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಅಂಕಿ ಅಂಶ ಬಿಡುಗಡೆ ಮಾಡಿದರು.

ಕೇಂದ್ರ ನೀಡಿದ ಬರ ಪರಿಹಾರದಲ್ಲಿ ಲೂಟಿ ಹೊಡೆಯಬಾರದು,ನಾವು ಕೇಂದ್ರದ ಹಣಕ್ಕೆ ಕಾವಲು ಕಾಯುತ್ತೇವೆ,ಕೇಂದ್ರ ಎಷ್ಟು ಹಣ ಬಿಡುಗಡೆ ಮಾಡಿದೆಯೋ, ನೀವೂ ಅಷ್ಟೇ ಬಿಡುಗಡೆ ಮಾಡಿ. ನೀವು ಅಷ್ಟು ಹಣ ಬಿಡುಗಡೆ ಮಾಡಲು ಸಾಧ್ಯವಾಗದೇ ಇದ್ದರೆ ನಿಮ್ಮದು ಪಾಪರ್ ಸರ್ಕಾರ. ಯೋಗ್ಯತೆ, ಮಾನ ಮರ್ಯಾದೆ ಇದ್ದರೆ ಕೇಂದ್ರದಷ್ಟೇ ನೀವೂ ಬರ ಪರಿಹಾರ ಬಿಡುಗಡೆ ಮಾಡಿ ಎಂದು ಅಶೋಕ್ ಸವಾಲು ಹಾಕಿದರು.

2004-05 ರಲ್ಲಿ ಬರಗಾಲ ಇದ್ದಾಗ ಕರ್ನಾಟಕ 1,147.70 ಕೋಟಿ ರೂ. ಕೇಳಿತ್ತು. ಆದರೆ ಯುಪಿಎ ಸರ್ಕಾರ ನೀಡಿದ್ದು ಕೇವಲ 131 ಕೋಟಿ ರೂ. 2005-06ರಲ್ಲಿ ಅತಿವೃಷ್ಟಿಗೆ 4,297 ಕೋಟಿ ರೂ. ಕೇಳಲಾಗಿತ್ತು. ಯುಪಿಎ ನೀಡಿದ್ದು 358 ಕೋಟಿ ರೂ.. 2006-07ರಲ್ಲಿ ಪ್ರವಾಹ/ಬರಗಾಲಕ್ಕೆ 2.858 ಕೋಟಿ ರೂ. ಕೇಳಲಾಗಿತ್ತು. ನೀಡಿದ್ದು 226 ಕೋಟಿ ರೂ. ಮಾತ್ರ.

2007-08ರಲ್ಲಿ ಜುಲೈನಲ್ಲಿ ಪ್ರವಾಹ ವೇಳೆ 406 ಕೋಟಿ ರೂ. ಕೇಳಿದಾಗ ಕೊಟ್ಟಿದ್ದು ಶೂನ್ಯ. ಇದೇ ವರ್ಷದ ಆಗಸ್ಟ್‌ನಲ್ಲಿ 1,510 ರೂ. ಕೇಳಿದ್ದರೆ ಕೊಟ್ಟಿದ್ದು ಚಿಪ್ಪು. ಅದೇ ವರ್ಷದ ಅಕ್ಟೋಬರ್ ನಲ್ಲಿ 3,941ಕೋಟಿ ರೂ. ಕೇಳಲಾಗಿತ್ತು, ನೀಡಿದ್ದು 178 ಕೋಟಿ ರೂ.

2008-09 ರಲ್ಲಿ ಬರಕ್ಕೆ 516 ಕೋಟಿ ರೂ ಕೇಳಿದ್ದು,ಕೊಟ್ಟಿದ್ದು ಕೇವಲ 1 ಕೋಟಿ. 2009-10 ರಲ್ಲಿ ಪ್ರವಾಹ, ಬರಕ್ಕೆ 7,759 ಕೋಟಿ ರೂಪಗಳನ್ನು ಬಿಜೆಪಿ ಸರ್ಕಾರ ಕೇಳಿತ್ತು. ಆದರೆ ಅವರು ನೀಡಿದ್ದು 957 ಕೋಟಿ ರೂ. ಮಾತ್ರ. 2010-11 ರಲ್ಲಿ ಪ್ರವಾಹಕ್ಕೆ ಸರ್ಕಾರ 1045 ಕೋಟಿ ರೂ. ಕೇಳಿತ್ತು. ಆದರೆ ಒಂದು ರೂ. ನೀಡಲಿಲ್ಲ.

2011-12 ರಲ್ಲಿ 6,415 ಕೋಟಿ ರೂ. ಕೇಳಿದ್ದಕ್ಕೆ 429 ಕೋಟಿ ರೂ. ನೀಡಿತ್ತು. 2012-13 ರಲ್ಲಿ ಬರಕ್ಕೆ 11,489 ಕೋಟಿ ಕೇಳಿದರೆ 397 ಕೋಟಿ ರೂ. ಕೊಟ್ಟಿದ್ದರು. 2013-14 ರಲ್ಲಿ 2,258 ಕೋಟಿ ಕೇಳಿದ್ದರೆ ಕೊಟ್ಟಿದ್ದು 668 ಕೋಟಿ ಮಾತ್ರ ಎಂದು ಅಶೋಕ್‌ ವಿವರಿಸಿದರು.

ಎನ್‌ಡಿಎ ಅವಧಿಯಲ್ಲಿ
2015-16 ರಲ್ಲಿ 3,831 ಕೋಟಿ ರೂ. ಕೇಳಿದ್ದಕ್ಕೆ 1,853 ಕೋಟಿ ರೂ. ನೀಡಿತ್ತು. 2016-17 ರಲ್ಲಿ ಬರ ಇದ್ದಾಗ 4,703 ಕೋಟಿ ರೂ. ಕೇಳಿದ್ದರೆ ಸರ್ಕಾರ 2,293 ಕೋಟಿ ರೂ. ವಿತರಿಸಿತ್ತು. 2017-18 ರಲ್ಲಿ 3,690 ಕೋಟಿ ರೂ. ಕೇಳಿದ್ದು 1,141 ಕೋಟಿ ರೂ. ನೀಡಿತ್ತು.

2018-19 ರಲ್ಲಿ ರಾಜ್ಯ 2,434 ಕೋಟಿ ರೂ. ಕೇಳಿದ್ದರೆ ಸರ್ಕಾರ 1,248 ಕೋಟಿ ರೂ. ನೀಡಿತ್ತು. 2019-20 ರಲ್ಲಿ 3,837 ಕೋಟಿ ರೂ. ಕೇಳಿದ್ದರೆ 3,412 ಕೋಟಿ ರೂ.ಕೊಟ್ಟಿದೆ. 2020-21 ರಲ್ಲಿ ಪ್ರವಾಹ ಬಂದಾಗ 2,242.48 ಕೋಟಿ ರೂ. ಕೇಳಿದ್ದಕ್ಕೆ 1,480 ಕೋಟಿ ರೂ. ನೀಡಿತ್ತು.

2021-22 ರಲ್ಲಿ ಪ್ರವಾಹ,ಭೂಕುಸಿತ ವೇಳೆ 2122 ಕೋಟಿ ರೂ. ಕೇಳಿದ್ದರೆ ಸರ್ಕಾರ 2,255.8 ಕೋಟಿ ರೂ. ನೀಡಿತ್ತು. 2022-23 ರಲ್ಲಿ 1944 ಕೋಟಿ ರೂ. ಕೇಳಿದ್ದರೆ 1,603 ಕೋಟಿ ರೂ.ನೀಡಿದೆ. 2023-24 ರಲ್ಲಿ18171 ಕೋಟಿ ರೂ. ಕೇಳಿದ್ದರೆ 4,151.42 ಕೋಟಿ ರೂ.(ಎನ್‌ಡಿಆರ್‌ಎಫ್‌+ಎಸ್‌ಡಿಆರ್‌ಎಫ್‌ ಸೇರಿ) ಸಿಕ್ಕಿದೆ ಎಂದು ಅಶೋಕ್‌ ವಿವರಿಸಿದರು.


Share this with Friends

Related Post