Fri. Mar 6th, 2026

ಔಷಧೋದ್ಯಮದಕ್ಕೆ ಅಗತ್ಯ ಸಹಕಾರ: ದಿನೇಶ್ ಗುಂಡೂರಾವ್ ಭರವಸೆ

Share this with Friends

ಬೆಂಗಳೂರು:ಕರ್ನಾಟಕ ಸರ್ಕಾರವು ಔಷಧೋದ್ಯಮದ ಜೊತೆ ಗಟ್ಟಿಯಾಗಿ ನಿಲ್ಲಲಿದೆ. ಜಾಗತಿಕ ಮಟ್ಟದಲ್ಲಿ ನಮ್ಮ ರಾಜ್ಯದ ಘನತೆ ಮತ್ತು ಉದ್ಯಮದ ಗೌರವವನ್ನು ಹೆಚ್ಚಿಸಲು ಬೇಕಾದ ಎಲ್ಲಾ ಸಹಕಾರವನ್ನು ನೀಡಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದ್ದಾರೆ.

ಬೆಂಗಳೂರಿನ‌ ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ’74ನೇ ಇಂಡಿಯನ್ ಫಾರ್ಮಸಿ ಕಾಂಗ್ರೆಸ್’ (IPC) ಸಮ್ಮೇಳನದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ​ಪ್ರತಿಯೊಬ್ಬರ ಜೀವವೂ ಅತ್ಯಂತ ಅಮೂಲ್ಯ ಹಾಗಾಗಿ ಅಂಕಿ- ಅಂಶಗಳಿಗಿಂತಲೂ ಜನರ ಪ್ರಾಣ ಉಳಿಸುವುದು ಮುಖ್ಯ. ನಮ್ಮಿಂದ ತಡೆಗಟ್ಟುವ ಅವಕಾಶ ಇದ್ದಾಗಲೂ ಒಂದು ಸಾವು ಸಂಭವಿಸಿದರೂ, ಇಡೀ ವ್ಯವಸ್ಥೆಯನ್ನು ಮರುಪರಿಶೀಲನೆ ನಡೆಸಬೇಕಾಗುತ್ತದೆ ಮತ್ತು ಅಗತ್ಯ ಬದಲಾವಣೆ ತರಬೇಕಾಗುತ್ತದೆ. ಅದಕ್ಕೆಲ್ಲ ನಾವು ಬದ್ಧರಾಗಿದ್ದೇವೆ ಎಂದರು.

​ನಮ್ಮ ರಾಜ್ಯದ ಔಷಧೋದ್ಯಮವು ಜಾಗತಿಕ ಮಟ್ಟದ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಸದಾ ಶ್ರಮಿಸುತ್ತಿದೆ. ಇಲ್ಲಿ ಉತ್ಪಾದನೆಯ ಪ್ರಮಾಣಕ್ಕಿಂತ ಗುಣಮಟ್ಟಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಅಲ್ಲದೆ, ರಾಜ್ಯದಲ್ಲಿ ನಮ್ಮ ಸರ್ಕಾರ ಬಂದಾಗಿನಿಂದ ಔಷಧ ಉತ್ಪಾದನೆ ಮತ್ತು ವಿತರಣೆಯಲ್ಲಿ ಸಂಪೂರ್ಣ ಪಾರದರ್ಶಕತೆ ತರಲು ಕ್ರಮ ಕೈಗೊಂಡಿದ್ದೇವೆ. ‘ಔಷಧ ಮತ್ತು ಸೌಂದರ್ಯವರ್ಧಕಗಳ ಕಾಯ್ದೆ’ಗೆ ಮಹತ್ವದ ತಿದ್ದುಪಡಿಗಳನ್ನು ತಂದು ಕೇಂದ್ರ ಸರ್ಕಾರದ ಅನುಮೋದನೆಗೆ ಕಳುಹಿಸಿದ್ದೇವೆ ಎಂದರು.

​ಕರ್ನಾಟಕ ಸರ್ಕಾರವು ಔಷಧೋದ್ಯಮದ ಜೊತೆ ಗಟ್ಟಿಯಾಗಿ ನಿಲ್ಲಲಿದೆ. ಜಾಗತಿಕ ಮಟ್ಟದಲ್ಲಿ ನಮ್ಮ ರಾಜ್ಯದ ಘನತೆ ಮತ್ತು ಉದ್ಯಮದ ಗೌರವವನ್ನು ಹೆಚ್ಚಿಸಲು ಬೇಕಾದ ಎಲ್ಲಾ ಸಹಕಾರವನ್ನು ನೀಡುತ್ತೇವೆ. ಅಲ್ಲದೆ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದೇಶದ ನಾನಾ ಪ್ರಖ್ಯಾತ ಔಷಧ ತಯಾರಿಕಾ ಕಂಪನಿಗಳ ಪ್ರತಿನಿಧಿಗಳಲ್ಲಿ ಔಷಧ ಕ್ಷೇತ್ರದ ಸುಧಾರಣೆಗೆ ಸಂಬಂಧಿಸಿದಂತೆ ಸಲಹೆಗಳನ್ನು ನೀಡುವಂತೆ ಕೋರಿ, ಆರೋಗ್ಯ ಕ್ಷೇತ್ರದ ಹಿತದೃಷ್ಟಿಯಿಂದ ನಾವು ಅವರ ಸಲಹೆಗಳನ್ನು ಮುಕ್ತವಾಗಿ ಸ್ವಾಗತಿಸುತ್ತೇವೆ ಎಂಬುದಾಗಿ ತಿಳಿಸಿದರು.

ಒಟ್ಟಾರೆ ರಾಜ್ಯದ ಜನರ ಬಳಿಗೆ ಆರೋಗ್ಯ ಸೇವೆಗಳನ್ನು ತಲುಪಿಸಿದಷ್ಟೇ ಪರಿಣಾಮಕಾರಿಯಾಗಿ, ಗುಣಮಟ್ಟದಲ್ಲಿ ರಾಜಿಮಾಡಿಕೊಳ್ಳದೆ ಅಗತ್ಯ ಔಷಧಿಗಳ ತಯಾರಿಕೆಗೆ ಒತ್ತು ನೀಡುವುದಾಗಿ ವಿವರಿಸಿದರು.

ಇದೇ ಸಂದರ್ಭದಲ್ಲಿ​ ಔಷಧ ಕ್ಷೇತ್ರದೊಳಗೆ ಆಗಿರುವ ನೂತನ ಆವಿಷ್ಕಾರಗಳ ಪ್ರದರ್ಶನ ವೀಕ್ಷಿಸುವುದರ‌ ಜೊತೆಗೆ ಆರೋಗ್ಯ ಇಲಾಖೆಯ ‘ಆಹಾರ ಮತ್ತು ಔಷಧ ನಿಯಂತ್ರಣ’ ಮಳಿಗೆಗಳಿಗೂ ಭೇಟಿ ನೀಡಿ ಮಾಹಿತಿ ಪಡೆದರು.


Share this with Friends

Related Post