ಮೈಸೂರು,ಜೂ.11: ನೀಟ್ ಯುಜಿ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂದು ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ ಆಗ್ರಹಿಸಿದ್ದಾರೆ.
ಈ ಬಾರಿಯ ನೀಟ್ ಪರೀಕ್ಷೆ ಫಲಿತಾಂಶವು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ, ನ್ಯಾಯ ಒದಗಿಸಲು ಹಗರಣದ ಪಾರದರ್ಶಕ ತನಿಖೆಯಾಗಬೇಕು ಅವರು ಒತ್ತಾಯಿಸಿದ್ದಾರೆ
ಮೊದಲು ಜೂನ್ 14ರಂದು ನೀಟ್ ಫಲಿತಾಂಶ ಘೋಷಣೆಗೆ ದಿನಾಂಕ ನಿಗದಿಯಾಗಿತ್ತು. ಆದರೆ, ಜೂನ್ 4ರಂದು ಲೋಕಸಭೆ ಚುನಾವಣೆ ಫಲಿತಾಂಶದ ದಿನ ನೀಟ್ ಫಲಿತಾಂಶ ಪ್ರಕಟಿಸಿರುವುದು ಜನರ ಗಮನ ಬೇರೆಡೆ ಸೆಳೆಯಲು ಮಾಡಿದ ತಂತ್ರವಾಗಿರಬಹುದೆಂಬ ಅನುಮಾನ ಮೂಡಿದೆ ಎಂದು ಬಸವರಾಜ್ ಬಸಪ್ಪ ಹೇಳಿದ್ದಾರೆ.
ನೀಟ್ ಫಲಿತಾಂಶದ ವಿರುದ್ಧ ತಮಿಳುನಾಡು ಸೇರಿದಂತೆ ಬೇರೆ ಬೇರೆ ರಾಜ್ಯಗಳು ಧ್ವನಿ ಎತ್ತಿವೆ. ಈ ರಾಜ್ಯಗಳೊಂದಿಗೆ ಕರ್ನಾಟಕವೂ ಸೇರಿದರೆ ಒಳ್ಳೆಯದು. ರಾಜ್ಯಕ್ಕೆ ನೀಟ್‌ಗಿಂತ ಈ ಹಿಂದಿನಂತೆ ಸಿಇಟಿ ಇದ್ದರೆ ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ.
ಹಲವಾರು ವಿದ್ಯಾರ್ಥಿ ಸಂಘಟನೆಗಳು ಇದ್ದರೂ, ಎನ್‌ಎಸ್‌ಯುಐ ಹೊರತುಪಡಿಸಿ, ಬೇರೆ ಯಾವುದೇ ಸಂಘಟನೆಗಳು ಧ್ವನಿ ಎತ್ತದಿರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.