ತುಮಕೂರು, ಏ.19: ಹುಬ್ಬಳ್ಳಿಯ ಬಿವಿಬಿ ಇಂಜಿನಿಯರ್ ಕಾಲೇಜಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಕೊಲೆಗೂ ರಾಜಕೀಯಕ್ಕೂ ಸಂಬಂಧವಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಪರಮೇಶ್ವರ್, ಕೊಲೆಯಾದ ನೇಹಾ ಮತ್ತು ಆರೋಪಿ ಫಯಾಜ್ ಪ್ರೀತಿಸುತ್ತಿದ್ದರು, ನಂತರ ಫಯಾಜ್ನಿಂದ ನೇಹಾ ದೂರವಾಗಲು ಯತ್ನಿಸಿದ್ದು, ಕೋಪಗೊಂಡ ಫಯಾಜ್ ನೇಹಾಳನ್ನ ಕೊಲೆ ಮಾಡಿದ್ದಾನೆ ಎಂದು ಹೇಳಿದರು.
ಘಟನೆ ನಡೆದ ವೇಳೆ ಮಗಳ ಜೊತೆ ಇದ್ದ, ತಾಯಿ ಮೇಲೂ ಹಲ್ಲೆ ಮಾಡಲಾಗಿದೆ, ಆದರೆ ನೇಹಾ ತಾಯಿಯನ್ನು ರಕ್ಷಣೆ ಮಾಡಲಾಗಿದೆ. ಇದರಲ್ಲಿ ಲವ್ ಜಿಹಾದ್ ಕಂಡು ಬಂದಿಲ್ಲ, ತನ್ನನ್ನು ಬಿಟ್ಟು ಬೇರೆಯವನನ್ನು ಮದುವೆ ಮಾಡಿಕೊಳ್ಳುತ್ತಾಳೆ ಎಂದುಕೊಂಡು ಕೊಲೆ ಮಾಡಿದ್ದು, ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ಜೈ ಶ್ರೀರಾಮ್ ಎಂದು ಕೂಗಿದ್ದಕ್ಕೆ ಯುವಕರ ಮೇಲೆ ಹಲ್ಲೆ ಮಾಡಿದ್ದು ದುರದೃಷ್ಟಕರ, ಕಾನೂನಿನ ವಿರುದ್ಧ ನಡೆದುಕೊಂಡರೆ ಯಾರನ್ನೂ ರಕ್ಷಣೆ ಮಾಡುವುದಿಲ್ಲಾ,ರಾಜ್ಯದ ಜನತೆಗೆ ಗೃಹ ಸಚಿವನಾಗಿ ಭರವಸೆ ಕೊಡಲು ಬಯಸುತ್ತೇನೆ ಎಂದು ಪರಮೇಶ್ವರ್ ತಿಳಿಸಿದರು.
ಯಾರನ್ನೂ ರಕ್ಷಣೆ ಮಾಡುವುದಾಗಲಿ, ಓಲೈಸುವುದಾಗಲಿ ಮಾಡುವುದಿಲ್ಲ, ಯಾವುದೇ ಮುಲಾಜಿಲ್ಲದೆ ಕಾನೂನಿನಡಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.