ಮೈಸೂರು, ಏ.20: ವಿದ್ಯಾರ್ಥಿನಿ ನೇಹಾ ಕೊಲೆ ಪ್ರಕರಣದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟವಾಗಿ ನುಡಿದರು.
ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ, ನೇಹಾ ಕೊಲೆ ಪ್ರಕರಣವನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ, ಆದರೆ ಈ ಪ್ರಕರಣವನ್ನು ಬಿಜೆಪಿಯವರು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಯಾರೇ ಆಗಲಿ ಇಂತಹ ಪ್ರಕರಣಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು ಎಂದು ಹೇಳಿದ ಸಿದ್ದು, ಕಾನೂನು ಸುವ್ಯವಸ್ಥೆಯನ್ನು ನಮ್ಮ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ ಈ ಘಟನೆ ಕುರಿತು ಸಂಪೂರ್ಣವಾಗಿ ತನಿಖೆ ನಡೆಸಿ ತಪ್ಪಿಸ್ಥನಿಗೆ ಕಠಿಣ ಶಿಕ್ಷೆ ಆಗುವುದು ಖಂಡಿತ ಎಂದು ಭರವಸೆ ನೀಡಿದರು.
ನಮ್ಮಲ್ಲಿ ರಾಜಕೀಯ ವಾತಾವರಣ ಚೆನ್ನಾಗಿದೆ ಈ ಬಾರಿ ಇಲ್ಲಿ ಮೋದಿ ಪರ ಅಲೆ ಇಲ್ಲ ರಾಜ್ಯದ ಪರ ಅಲೆ ಇರುವುದರಿಂದ ನಮ್ಮ ಪಕ್ಷದ ಅಭ್ಯರ್ಥಿಗಳು ಹೆಚ್ಚು ಸ್ಥಾನದಲ್ಲಿ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎನ್ ಡಿಎ ಅಭ್ಯರ್ಥಿಗಳು ಮೋದಿಯವರನ್ನೇ ನೇಚ್ಚಿಕೊಂಡಿದ್ದಾರೆ, ಈಗ ಮೋದಿ ಅಲೆ ಎಲ್ಲೂ ಇಲ್ಲ, ಜೊತೆಗೆ ಮೋದಿ ಅವರು ನೀಡಿದ ಭರವಸೆಗಳು ಒಂದು ಈಡೇರಿಲ್ಲ ಹಾಗಾಗಿ ರಾಜ್ಯದಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲುವುದು ಖಚಿತ ಎಂದರು.
ಕಾಂಗ್ರೆಸ್ ಚೊಂಬಿನ ಜಾಹೀರಾತು ನೀಡಿದೆ,ಸರ್ಕಾರದ ಖಜಾನೆ ಕಾಲಿ ಅದಕ್ಕೆ ಆ ರೀತಿ ಜಾಹೀರಾತು ನೀಡಿದ್ದಾರೆ ಎಂದು ಎಚ್ ಡಿ ಕುಮಾರಸ್ವಾಮಿ ಅವರು ಹೇಳಿದ್ದಾರಲ್ಲ ಎಂಬ ವರದಿಗಾರರ ಪ್ರಶ್ನೆಗೆ, ಬಿಜೆಪಿ ರಾಜ್ಯದ ಹಾಗೂ ದೇಶದ ಜನತೆ ಕೈಗೆ ಚೊಂಬು ಕೊಟ್ಟಿದ್ದಾರೆ ಎಂಬುದನ್ನು ತೋರಿಸಲು ನಾವು ಚೊಂಬಿನ ಜಾಹೀರಾತನ್ನು ನೀಡಿದ್ದೇವೆ ಎಂದು ಸಿಎಂ ತಿರುಗೇಟು ನೀಡಿದರು.
ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷವನ್ನು ಸರ್ವನಾಶ ಮಾಡುತ್ತಾರೆ ಎಂಬ ಪ್ರತಿಪಕ್ಷಗಳ ಆರೋಪವಿದೆಯಲ್ಲ ಎಂಬ ಮತ್ತೊಂದು ಪ್ರಶ್ನೆಗೆ ನಾನೇಕೆ ಕಾಂಗ್ರೆಸ್ ಅನ್ನು ಸರ್ವನಾಶ ಮಾಡಲಿ ಅಂತಹ ಯಾವುದೇ ಕೆಟ್ಟ ಯೋಚನೆ ನನ್ನಲ್ಲಿಲ್ಲ ಎಂದು ಹೇಳಿದರು.
ಸೋಲುವ ಭಯದಿಂದಲೇ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿವೆ, ನಮಗೆ ಯಾವುದರ ಭಯವೂ ಇಲ್ಲ ನಮ್ಮ ಗ್ಯಾರಂಟಿ ಯೋಜನೆಗಳು ನಮ್ಮ ಕೈ ಹಿಡಿಯಲಿವೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.